ಸಾರಾಂಶ
ಹಿಂಸಾಚಾರಕ್ಕೆ ನಲುಗಿರುವ ಬಾಂಗ್ಲಾದಲ್ಲಿ ಮಧ್ಯಂತರ ಸರ್ಕಾರ ರಚನೆಯಾಗಿದೆ. ನೊಬೆಲ್ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಯೂನಸ್ ಸರ್ಕಾರದ ಮುಖ್ಯ ಸಲಹೆಗಾರ (ಪ್ರಧಾನಿ)ರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಢಾಕಾ: ಹಿಂಸಾಚಾರಕ್ಕೆ ನಲುಗಿರುವ ಬಾಂಗ್ಲಾದಲ್ಲಿ ಮಧ್ಯಂತರ ಸರ್ಕಾರ ರಚನೆಯಾಗಿದೆ. ನೊಬೆಲ್ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಯೂನಸ್ ಸರ್ಕಾರದ ಮುಖ್ಯ ಸಲಹೆಗಾರ (ಪ್ರಧಾನಿ)ರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇವರಿಗೆ ಆಡಳಿತದಲ್ಲಿ ಸಲಹೆ, ಸೂಚನೆಗಳನ್ನು ನೀಡಲು 16 ಮಂದಿಯನ್ನು ಸಚಿವ ಸಂಪುಟಕ್ಕೆ ನೇಮಿಸಲಾಗಿದೆ.
ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಫರೀದಾ ಅಖ್ತರ್, ಬಲಪಂಥಿಯ ಪಕ್ಷದ ಹೆಫಾಜತ್-ಇ-ಇಸ್ಲಾಂ ಪಕ್ಷದ ಖಾಲೀದ್ ಹೊಸೈನ್, ಸ್ವಾತಂತ್ರ್ಯ ಹೋರಾಟಗಾರ ಶರ್ಮಿನ್ ಮುರ್ಷಿದ್, ವಿದೇಶಾಂಗ ಇಲಾಖೆಯ ಮಾಜಿ ಕಾರ್ಯದರ್ಶಿ ತೌಹಿದ್ ಹಾಸಿನ್ ಸೇರಿದಂತೆ ಒಟ್ಟು 16 ಮಂದಿ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಜೊತೆಗೆ ಮೀಸಲಾತಿ ವಿರೋಧಿ ಹೋರಾಟ ಸಂಘಟನೆಯ ಪ್ರಮುಖ ನಾಯಕರು ಈ ಪಟ್ಟಿಯಲಿದ್ದಾರೆ.
ಇತ್ತೀಚೆಗೆ ಮೀಸಲು ಹೋರಾಟ ಹಿಂಸಾರೂಪ ಪಡೆದ ಹಿನ್ನೆಲೆಯಲ್ಲಿ ಪ್ರಧಾನಿ ಶೇಖ್ ಹಸೀನಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಭಾರತಕ್ಕೆ ತೆರಳಿದ್ದರು. ಬಳಿಕ ಸಂಸತ್ ವಿಸರ್ಜಿಸಲಾಗಿತ್ತು. ದೇಶದಲ್ಲಿ ಮತ್ತೆ ಚುನಾವಣೆ ನಡೆದು ಹೊಸ ಸರ್ಕಾರ ರಚನೆ ಆಗುವವರೆಗೂ ಈ ಮಧ್ಯಂತರ ಸರ್ಕಾರ ಅಧಿಕಾರದಲ್ಲಿ ಇರಲಿದೆ.
‘ಎರಡನೇ ಬಾರಿ ಸ್ವಾತಂತ್ರ್ಯ ಸಿಕ್ಕಿದೆ’‘ಎರಡನೇ ಬಾರಿ ನಾವು ಸ್ವಾತಂತ್ರ್ಯ ಪಡೆದಿದ್ದೇವೆ. ಈ ಸ್ವಾತಂತ್ರ್ಯವನ್ನು ನಾವು ರಕ್ಷಿಸಿಕೊಳ್ಳಬೇಕು. ನೀವು ನನ್ನ ಮೇಲೆ ನಂಬಿಕೆ, ಭರವಸೆ ಇಟ್ಟುಕೊಳ್ಳಿ. ದೇಶದಲ್ಲಿ ಈ ರೀತಿ ಗಲಭೆಗಳು ಮತ್ತೆ ನಡೆಯಲ್ಲ ಎಂದು ಭರವಸೆ ನೀಡುತ್ತೇನೆ. ಇದು ನಮ್ಮ ಮೊದಲ ಜವಾಬ್ದಾರಿ.ಇದನ್ನು ಮಾಡಲು ಸಾಧ್ಯವಾಗದಿದ್ದರೆ, ನೀವು ನನ್ನ ಮಾತನ್ನು ಕೇಳದಿದ್ದರೆ, ನಾನು ಇಲ್ಲಿರಲು ಯಾವುದೇ ಅರ್ಹತೆಯಿಲ್ಲ. ದೇಶದ ನಾಗರಿಕರನ್ನು ರಕ್ಷಣೆ ಮಾಡುವ ಸರ್ಕಾರವನ್ನು ರಚಿಸಿದ್ದೇವೆ, ದೇಶ ನಿಮ್ಮ ಕೈಯಲ್ಲಿದೆ. ಸ್ವಾತಂತ್ರ್ಯ ಪಡೆದಿದ್ದೀರಿ, ದೇಶವನ್ನು ನಿಮ್ಮ ಆಕಾಂಕ್ಷೆಯಂತೆ ಮರು ನಿರ್ಮಾಣ ಮಾಡಿಕೊಳ್ಳಿ’
ಮುಹಮ್ಮದ್ ಯೂನಸ್, ಬಾಂಗ್ಲಾದೇಶದ ಮುಖ್ಯ ಸಲಹೆಗಾರ