ಜನರ ಆಶೀರ್ವಾದ ಇರುವವರೆಗೂ ನನ್ನನ್ನು ಯಾರೂ ಅಲ್ಲಾಡಿಸಲು ಸಾಧ್ಯವಿಲ್ಲ: ಸಿದ್ದರಾಮಯ್ಯ

| Published : Sep 03 2024, 01:30 AM IST / Updated: Sep 03 2024, 04:40 AM IST

ಸಾರಾಂಶ

‘ಜನರ ಆಶೀರ್ವಾದ ಇರುವವರೆಗೂ ನನ್ನನ್ನು ಯಾರೂ ಅಲ್ಲಾಡಿಸಲು ಸಾಧ್ಯವಿಲ್ಲ. ಬಡವರ ಪರ ಕೆಲಸ ಮುಂದುವರೆಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.  

 ಬೆಂಗಳೂರು : ‘ಜನರ ಆಶೀರ್ವಾದ ಇರುವವರೆಗೂ ನನ್ನನ್ನು ಯಾರೂ ಅಲ್ಲಾಡಿಸಲು ಸಾಧ್ಯವಿಲ್ಲ. ಬಡವರ ಪರ ಕೆಲಸ ಮುಂದುವರೆಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.

ಶಿವಾಜಿನಗರದಲ್ಲಿ ನಿರ್ಮಿಸಿರುವ ‘ಚರಕ’ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನೂತನ ಚಿಕಿತ್ಸಾ ಪದ್ಧತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ‘ಜನರ ಆಶೀರ್ವಾದ ಇರುವವರೆಗೂ ಸಿದ್ದರಾಮಯ್ಯನನ್ನು ಯಾರೂ ಅಲ್ಲಾಡಿಸಲು ಸಾಧ್ಯವಿಲ್ಲ. ಬಡವರ ಪರ ಕೆಲಸ ಮುಂದುವರೆಯಲಿವೆ. ಮುಂದೆಯೂ ನಿಮ್ಮ ಆಶೀರ್ವಾದವಿರಲಿ. ಇನ್ನೂ ಅಧಿಕ ಸೌಲಭ್ಯಗಳನ್ನು ನೀಡಲಾಗುವುದು’ ಎಂದು ಭರವಸೆ ನೀಡಿದರು.

ಬಡವರ ಅಭಿವೃದ್ಧಿಗಾಗಿ ಗ್ಯಾರಂಟಿ ಯೋಜನೆಗಳಿಗೆ ಬಜೆಟ್‌ನಲ್ಲಿ 52 ಸಾವಿರ ಕೋಟಿ ರು. ಮೀಸಲಿಟ್ಟಿದ್ದೇವೆ. ಬಡವರ ಪರವಾಗಿ ಕೆಲಸ ಮಾಡಿದರೆ ಬಿಜೆಪಿಯವರು ವಿಲವಿಲ ಎಂದು ಒದ್ದಾಡುತ್ತಾರೆ. ಬಡವರನ್ನು ಶೋಷಿಸಲು, ದಾರಿ ತಪ್ಪಿಸಲು ಬಿಜೆಪಿಯವರು ಸಮಾನತೆ ವಿರೋಧಿಸುತ್ತಾರೆ. ಇದಕ್ಕಾಗಿ ಮಾಡಬಾರದ್ದನ್ನೆಲ್ಲಾ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಟ್ಲರ್‌ ಕಾಲದಲ್ಲಿ ಗೊಬೆಲ್ಸ್‌ ಎಂಬ ಸಚಿವನೊಬ್ಬನಿದ್ದ. ಸುಳ್ಳುಗಳನ್ನು ಹೇಳುವುದಷ್ಟೇ ಅವನ ಕೆಲಸವಾಗಿತ್ತು. ಇದನ್ನು ಬಿಟ್ಟರೆ ಅವನಿಗೆ ಬೇರೆ ಕೆಲಸವೇ ಇರಲಿಲ್ಲ. ಇದೇ ರೀತಿ ಬಿಜೆಪಿಯವರು ಸುಳ್ಳನ್ನೇ ಸತ್ಯ ಎಂದು ನೂರು ಬಾರಿ ಹೇಳಿ ಜನರನ್ನು ನಂಬಿಸಲು ಮುಂದಾಗಿದ್ದಾರೆ. ಬಿಜೆಪಿಯವರು ಪಟ್ಟಭದ್ರ ಹಿತಾಸಕ್ತಿ ಉಳ್ಳವರು ಎಂದು ಟೀಕಿಸಿದರು.

ಮನುಷ್ಯತ್ವ ಇಲ್ಲದ ಆಸ್ಪತ್ರೆಗಳಿವೆ:

ಇಂದು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರ ದುಬಾರಿಯಾಗಿದೆ. ಇದನ್ನು ಭರಿಸಲಾಗದೇ ಬಹಳಷ್ಟು ಬಡವರು ಸಹಾಯಕ್ಕಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಆದ್ದರಿಂದ ಸರ್ಕಾರದಿಂದಲೇ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಿರ್ಮಿಸಲಾಗುತ್ತಿದೆ. ಅನೇಕ ಖಾಸಗಿ ಆಸ್ಪತ್ರೆಗಳಲ್ಲಿ ಬಾಕಿ ಹಣ ಪಾವತಿಸದೇ ಶವವನ್ನು ನೀಡುವುದಿಲ್ಲ. ಹಣ ಪಾವತಿಸಿ ಶವ ತೆಗೆದುಕೊಂಡು ಹೋಗಿ ಎಂದು ಹೇಳುತ್ತಾರೆ. ಮನುಷ್ಯತ್ವ ಇಲ್ಲದ ಆಸ್ಪತ್ರೆಗಳಿವೆ ಎಂದು ಆರೋಪಿಸಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಕೆಲವೊಮ್ಮೆ 15 ರಿಂದ 20 ಲಕ್ಷ ರು. ವೆಚ್ಚವಾಗುತ್ತದೆ. ಬಡವರು ಇಷ್ಟೊಂದು ಹಣ ಪಾವತಿಸಲು ಆಗುವುದಿಲ್ಲ. ಗುಣಮಟ್ಟದ ಆರೋಗ್ಯ ಸೇವೆ ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ಅದಕ್ಕಾಗಿ ನಾವು ಈ ಹಿಂದೆ 2016-17ರಲ್ಲಿ ಮೈಸೂರು, ಶಿವಾಜಿನಗರ, ಕಲಬುರಗಿ, ಬೆಳಗಾವಿ, ಹುಬ್ಬಳ್ಳಿ ಮತ್ತಿತರ ಕಡೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಿರ್ಮಿಸಲು ಮುಂದಾಗಿದ್ದೆವು. ಆದರೆ ನಂತರ ಬಂದ ಬಿಜೆಪಿ ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿಲ್ಲ ಎಂದು ಟೀಕಿಸಿದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹಮದ್‌ ಮತ್ತಿತರರು ಉಪಸ್ಥಿತರಿದ್ದರು.

ಸಿದ್ದರಾಮಯ್ಯ ವಿರುದ್ಧ ಪಿತೂರಿ, ಷಡ್ಯಂತ್ರ: ಸಚಿವ ಡಾ। ಶರಣ್‌

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಪಿತೂರಿ, ಷಡ್ಯಂತ್ರ ನಡೆಯುತ್ತಿದೆ. ಇದಕ್ಕೆ ಅವಕಾಶ ನೀಡಬಾರದು ಎಂದು ಸಮಾರಂಭದಲ್ಲಿ ಪಾಲ್ಗೊಂಡಿದ್ದ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ್‌, ಶಾಸಕ ರಿಜ್ವಾನ್‌ ಅರ್ಷದ್‌ ಕರೆ ನೀಡಿದರು.

ಶರಣ ಪ್ರಕಾಶ ಪಾಟೀಲ್‌ ಮಾತನಾಡಿ, ಬಡವರ ಪರವಾಗಿ ಕಾರ್ಯ ನಿರ್ವಹಿಸುತ್ತಿರುವ ಸಿದ್ದರಾಮಯ್ಯ ವಿರುದ್ಧ ವಿರೋಧ ಪಕ್ಷಗಳು ಪಿತೂರಿ ನಡೆಸುತ್ತಿವೆ. ಆದರೆ ಇದು ಯಶಸ್ವಿಯಾಗುವುದಿಲ್ಲ. ನಾವು ಸಿದ್ದರಾಮಯ್ಯ ಪರವಾಗಿ ಇದ್ದೇವೆ ಎಂದು ಸ್ಪಷ್ಟಪಡಿಸಿದರು.

ರಿಜ್ವಾನ್‌ ಅರ್ಷದ್‌ ಮಾತನಾಡಿ, ಸಿದ್ದರಾಮಯ್ಯ ಅವರ ಅಭಿವೃದ್ಧಿ ಕೆಲಸ ನೋಡಿ ಅಡಚಣೆ ಉಂಟು ಮಾಡುತ್ತಿದ್ದಾರೆ. ಆದರೆ ಇಡೀ ರಾಜ್ಯದ ಜನತೆ ಮುಖ್ಯಮಂತ್ರಿಗಳ ಪರವಾಗಿದ್ದಾರೆ. ವಿರೋಧಿಗಳ ಷಡ್ಯಂತ್ರ ನಡೆಯುವುದಿಲ್ಲ ಎಂದು ಕಿಡಿಕಾರಿದರು.==

ಅಧಿಕಾರ ಶಾಶ್ವತವಲ್ಲ: ಡಿಕೆಶಿ

ಅಧಿಕಾರ ಶಾಶ್ವತವಲ್ಲ. ಅಧಿಕಾರ ಇರುತ್ತದೆ, ಹೋಗುತ್ತದೆ. ಆದರೆ ನಾವು ಮಾಡಿದ ಕೆಲಸಗಳು ಶಾಶ್ವತ. ಶಿವಾಜಿನಗರಕ್ಕೆ ಸಭ್ಯ ಜನಸೇವಕನನ್ನು ಆಯ್ಕೆ ಮಾಡಿದ್ದೀರಿ. ಅದಕ್ಕಾಗಿ ನಿಮಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಲೋಕಸಭಾ ಚುನಾವಣೆಯಲ್ಲಿ ಶಿವಾಜಿನಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರಸ್‌ ಅಭ್ಯರ್ಥಿ ಅಧಿಕ ಮತಗಳನ್ನು ಪಡೆದರು. ಆದರೆ ಮಹದೇವಪುರ ಕ್ಷೇತ್ರದಲ್ಲಿ ಅಂತರ ಕಡಿಮೆ ಆಗಿದ್ದರಿಂದ ನಾವು ಪರಾಭವಗೊಂಡೆವು. ನಿಮ್ಮ ಋಣ ತೀರಿಸುತ್ತೇವೆ ಎಂದು ಭರವಸೆ ನೀಡಿದರು.