ಸಾರಾಂಶ
ನವದೆಹಲಿ: ‘ನಾನು 2020ರಲ್ಲಿ ಖರೀದಿಸಿದ 92 ಲಕ್ಷ ರು. ಬೆಲೆಯ ಲ್ಯಾಂಡ್ ರೋವರ್ ಕಾರಿನಲ್ಲಿ ಸಮಸ್ಯೆಗಳು ಕಾಣಿಸಿಕೊಂಡಿವೆ. ಸನ್ ರೂಫ್, ಧ್ವನಿ ವ್ಯವಸ್ಥೆ, ಹಿಂಭಾಗದ ಕ್ಯಾಮೆರಾದಲ್ಲಿ ಸಮಸ್ಯೆ ಆಗಿದೆ. 10 ಬಾರಿ ರಿಪೇರಿ ಮಾಡಿಸಿದರೂ ಪ್ರಯೋಜನವಿಲ್ಲ. ಹೀಗಾಗಿ ನನಗೆ ಮಾನಸಿಕ ಹಿಂಸೆಯಾಗಿದೆ’ ಎಂದು ಕಾರು ತಯಾರಕ ಕಂಪನಿ ಲ್ಯಾಂಡ್ ರೋವರ್ ವಿರುದ್ಧ ನಟಿ ರಿಮಿ ಸೇನ್ 50 ಕೋಟಿ ರು. ಮೊಕದ್ದಮೆ ಹೂಡಿದ್ದಾರೆ.
‘ಹಿಂಭಾಗದ ಕ್ಯಾಮೆರಾದಲ್ಲಿನ ಸಮಸ್ಯೆಯಿಂದಾಗಿ 2022ರ ಆ.25ರಂದು ಕಾರು ಕಂಬವೊಂದಕ್ಕೆ ಡಿಕ್ಕಿಯಾಯಿತು. ಇದನ್ನು ಡೀಲರ್‌ನ ಗಮನಕ್ಕೆ ತಂದಾಗ ಅವರು ಸಮಸ್ಯೆಯನ್ನು ಪರಿಹರಿಸುವ ಬದಲು ಸಾಕ್ಷ್ಯ ಕೇಳತೊಡಗಿದರು. ಪರಿಣಾಮವಾಗಿ ಕಾರನ್ನು ಹಲವು ಬಾರಿ ರಿಪೇರಿ ಮಾಡಿಸಲಾಗಿದ್ದು, ಒಂದು ಸಮಸ್ಯೆ ಸರಿಯಾಗುತ್ತಿದ್ದಂತೆ ಇನ್ನೊಂದು ಉದ್ಭವಿಸುತ್ತಿತ್ತು. ಹೀಗಾಗಿ ನನಗೆ ಮಾನಸಿಕೆ ಹಿಂಸೆಯಾಗಿದೆ. ಇದಕ್ಕಾಗಿ 50 ಕೋಟಿ ರು. ಪರಿಹಾರ ಹಾಗೂ ಕಾನೂನು ವೆಚ್ಚಗಳಿಗೆ 10 ಲಕ್ಷ ರು. ಪರಿಹಾರ ಕೊಟ್ಟು, ಕಾರನ್ನು ಬದಲಿಸಿಕೊಡಬೇಕು’ ಎಂದು ಆಗ್ರಹಿಸಿದ್ದಾರೆ.
ಎನ್‌ಸಿಪಿ ಸಚಿವರ ಪಕ್ಕ ಕೂತರೆ ವಾಂತಿ ಬರುತ್ತೆ: ಶಿವಸೇನೆ ಸಚಿವ ವಿವಾದ
ಮುಂಬೈ: “ಸಚಿವ ಸಂಪುಟ ಸಭೆಗಳಲ್ಲೂ ಎನ್‌ಸಿಪಿ ಸಚಿವರ ಜೊತೆಗೆ ಕುಳಿತುಕೊಳ್ಳುವುದೆಂದರೆ ನಮಗೆ ಆಗದು. ನಾವು ಕಟ್ಟಾ ಶಿವಸೈನಿಕರು. ನಮಗೆ ಎಂದಿಗೂ ಎನ್‌ಸಿಪಿ ಜೊತೆ ಸರಿಹೊಂದುವುದಿಲ್ಲ. ಸಂಪುಟ ಸಭೆಯಲ್ಲಿ ಎನ್‌ಸಿಪಿ ಸಚಿವರ ಪಕ್ಕ ಕುಳಿತು ಸಭೆ ಮುಗಿಸಿ ಹೊರಬರುವ ವೇಳೆಗೆ ನಮಗೆ ವಾಂತಿ ಬರುವ ಹಾಗೆ ಆಗಿರುತ್ತದೆ’ ಎಂದು ಶಿವಸೇನೆಯ ಸಚಿವ ತಾನಾಜಿ ಸಾವಂತ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಅಜಿತ್ ಪವಾರ್ ಬಣದ ಎನ್‌ಸಿಪಿ ನಾಯಕರು, ‘ಹಾಗಿದ್ದರೆ ಮೈತ್ರಿ ಸರ್ಕಾರ ಕಾಪಾಡುವ ಹೊಣೆ ನಮಗೆ ಮಾತ್ರವೇ? ಶಿವಸೇನೆಗಿಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.
ನಿಮ್ಮ ಜತೆ ಮಾತುಕತೆ ಮುಗಿದ ಅಧ್ಯಾಯ: ಪಾಕ್‌ಗೆ ಜೈಶಂಕರ್
ನವದೆಹಲಿ: ‘ಪಾಕಿಸ್ತಾನದ ಜೊತೆಗೆ ಅನಿರ್ಬಂಧಿತ ಮಾತುಕತೆಯೆಂಬುದು ಮುಗಿದ ಅಧ್ಯಾಯ. ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟಿಗೇ ಸಾಗುವುದು ಸಾಧ್ಯವೇ ಇಲ್ಲ’ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತೊಮ್ಮೆ ಪಾಕಿಸ್ತಾನಕ್ಕೆ ಕಡ್ಡಿ ಮುರಿದಂತೆ ತೀಕ್ಷ್ಣ ಸಂದೇಶ ರವಾನಿಸಿದ್ದಾರೆ.‘ಪ್ರತಿಯೊಂದು ಕ್ರಿಯೆಗೂ ಪರಿಣಾಮಗಳು ಇರುತ್ತವೆ. ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಸಂವಿಧಾನದ 370ನೇ ವಿಧಿ ರದ್ದುಪಡಿಸಲಾಗಿದೆ. ಆ ವಿಷಯ ಮುಗಿದಿದೆ. ಈಗ ಇರುವುದು - ಪಾಕಿಸ್ತಾನದ ಜೊತೆಗೆ ನಮ್ಮ ಸಂಬಂಧ ಹೇಗಿರಬೇಕು ಎಂಬ ಪ್ರಶ್ನೆ. ಈ ವಿಷಯದಲ್ಲಿ ಗೊಂದಲಕ್ಕೆ ಅವಕಾಶವೇ ಇಲ್ಲ. ಪಾಕ್ ಜೊತೆಗೆ ನಾವು ಪರೋಕ್ಷವಾಗಿ ಏನನ್ನೂ ಮಾಡುವುದಿಲ್ಲ. ಭವಿಷ್ಯದಲ್ಲಿ ಸಂದರ್ಭಗಳು ಹೇಗೆ ಬರುತ್ತವೆಯೋ ಅದನ್ನು ಆಧರಿಸಿ ಭಾರತದ ಪ್ರತಿಕ್ರಿಯೆ ಇರುತ್ತದೆ’ ಎಂದೂ ಅವರು ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಮಾತನಾಡುವಾಗ ತಿಳಿಸಿದ್ದಾರೆ.
ಅಕ್ಟೋಬರ್‌ನಲ್ಲಿ ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಶೃಂಗ (ಎಸ್‌ಸಿಒ) ಸಭೆಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪಾಕಿಸ್ತಾನ ಆಹ್ವಾನ ನೀಡಿದ ಬೆನ್ನಲ್ಲೇ ಜೈಶಂಕರ್ ಅವರಿಂದ ಈ ಪ್ರತಿಕ್ರಿಯೆ ಬಂದಿರುವುದು ಮಹತ್ವ ಪಡೆದಿದೆ.ಎಸ್‌ಸಿಒ ಶೃಂಗಕ್ಕೆ ಪ್ರಧಾನಿ ಮೋದಿ ಗೈರಾಗಲಿದ್ದಾರೆ. ಆದರೆ, ಕಳೆದ ಬಾರಿ ಕಜಖಸ್ತಾನದಲ್ಲಿ ನಡೆದ ಈ ಶೃಂಗದಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರ ನಿಯೋಗ ಭಾಗವಹಿಸಿದ್ದಂತೆ ಈ ಬಾರಿ ಪಾಕ್‌ನಲ್ಲಿ ನಡೆಯುವ ಶೃಂಗದಲ್ಲೂ ಜೈಶಂಕರ್ ಭಾಗವಹಿಸಬಹುದು ಎಂದು ಹೇಳಲಾಗಿದೆ.
ಕಳೆದ ವರ್ಷ ಭಾರತದಲ್ಲಿ ನಡೆದಿದ್ದ ಎಸ್‌ಸಿಒ ವಿದೇಶಾಂಗ ಸಚಿವರ ಸಭೆಯಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಭಾಗವಹಿಸಿದ್ದರು. ಅವರು ಭಾರತದಲ್ಲಿದ್ದಾಗಲೇ ಜೈಶಂಕರ್ ಅವರು ಭುಟ್ಟೋರನ್ನು ‘ಭಯೋತ್ಪಾದನಾ ಉದ್ದಿಮೆಯ ವಕ್ತಾರ’ ಎಂದು ಕರೆದಿದ್ದರು.
ತಿರುಪತಿ ಲಡ್ಡುಗೆ ಆಧಾರ್ ಧೃಡೀಕರಣ ಜಾರಿ: ಟಿಟಿಡಿ
ತಿರುಮಲ: ದರ್ಶನದ ಟೋಕನ್ ಇಲ್ಲದ ಭಕ್ತರು ತಿರುಪತಿಯ ಲಡ್ಡು ಪ್ರಸಾದ ಪಡೆಯುವಾಗ ಆಧಾರ್ ತೋರಿಸುವುದನ್ನು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಕಡ್ಡಾಯಗೊಳಿಸಿದೆ.‘ಕೆಲ ಮಧ್ಯವರ್ತಿಗಳು ಲಡ್ಡುಗಳನ್ನು ಕಾಳಸಂತೆಯಲ್ಲಿ ಮಾರುತ್ತಿದ್ದಾರೆ. ಇದನ್ನು ತಡೆದು ಪಾರದರ್ಶಕತೆ ತರಲು ಈ ಕ್ರಮ ಕೈಗೊಳ್ಳಲಾಗಿದ್ದು, ಟೋಕನ್ ಖರೀದಿಸದ ಭಕ್ತರು ತಮ್ಮ ಆಧಾರ್ ತೋರಿಸಿ 2 ಲಡ್ಡು ಪಡೆಯಬಹುದು. ಇದ್ಕಾಗಿ ಲಡ್ಡು ಕಾಂಪ್ಲೆಕ್ಸ್‌ನಲ್ಲಿ ವಿಷೇಷ ಕೌಂಟರ್‌ಗಳನ್ನು ಸ್ಥಾಪಿಸಲಾಗಿದೆ’ ಎಂದು ಟಿಟಿಡಿ ಹೇಳಿದೆ.
ದರ್ಶನದ ಟೋಕನ್ ಉಳ್ಳವರು ಮೊದಲಿನಂತೆ ತಮಗೆ ಸಿಗುವ ಒಂದು ಉಚಿತ ಲಡ್ಡುವಿನೊಂದಿಗೆ ಬೇಕಾದಷ್ಟು ಹೆಚ್ಚಿಗೆ ಲಡ್ಡುಗಳನ್ನು ಖರೀದಿಸಲು ಅವಕಾಶವಿದೆ.
ಊಹಾಪೋಹಕ್ಕೆ ಸ್ಪಷ್ಟನೆ: ಈ ನಡುವೆ, ಆಧಾರ್ ತೋರಿಸಿದವರಿಗೆ ತಿಂಗಳಿಗೆ ಎರಡೇ ಲಡ್ಡು ಎಂಬ ಊಹಾಪೋಹ ಹರಡಿದೆ. ಆದರೆ ತಿಂಗಳಿಗೆ ಎರಡೇ ಲಡ್ಡು ಎಂದಿಲ್ಲ. ಒಂದು ಬಾರಿ ಆಧಾರ್ ತೋರಿಸಿದರೆ 2 ಲಡ್ಡು ಎಂದು ಟಿಟಿಡಿ ಸ್ಪಷ್ಟಪಡಿಸಿದೆ.
ವಯನಾಡು ಭೂಕುಸಿತ: ನಿರಾಶ್ರಿತರಿಗೆ 2 ಕಡೆ ಹೊಸ ಮನೆ
ವಯನಾಡು: ಕಂಡು ಕೇಳರಿಯದ ಭೂಕುಸಿತಕ್ಕೆ ತುತ್ತಾಗಿದ್ದ ವಯನಾಡಿನಲ್ಲಿ ಮನೆ ಕಳೆದುಕೊಂಡವರಿಗೆ ಹೊಸ ಮನೆಗಳನ್ನು ನಿರ್ಮಿಸಿಕೊಡಲು ಕೇರಳ ಸರ್ಕಾರ 2 ಸ್ಥಳಗಳನ್ನು ಗುರುತಿಸಿದೆ. ಇಲ್ಲಿ ಸಮುದಾಯ ಜೀವನಶೈಲಿಯ ಟೌನ್‌ಶಿಪ್‌ಗಳನ್ನು ನಿರ್ಮಿಸಲಾಗುತ್ತದೆ ಎಂದು ಕೇರಳ ಸರ್ಕಾರ ಹೇಳಿದೆ.ಕೊಟ್ಟಪ್ಪಾಡಿ ಮತ್ತು ಕಲ್ಪೆಟ್ಟದಲ್ಲಿ ಮನೆ ನಿರ್ಮಿಸಲು ಸರ್ಕಾರ ಮುಂದಾಗಿದೆ. ಕೊಟ್ಟಪ್ಪಾಡಿಯು ಭೂಕುಸಿತ ಸ್ಥಳದಿಂದ 11 ಕಿ.ಮೀ. ದೂರದಲ್ಲಿದ್ದು, ಕಲ್ಪೆಟ್ಟ ಪ್ರದೇಶವು ವಯನಾಡು ಜಿಲ್ಲಾ ಕೇಂದ್ರದಿಂದ 35 ಕಿಲೋಮೀಟರ್ ದೂರದಲ್ಲಿದೆ. ಈ ಪ್ರದೇಶದಲ್ಲಿ 1000 ಚದರಡಿಯ ಒಂದು ಅಂತಸ್ತಿನ ಮನೆಗಳನ್ನು ನಿರ್ಮಿಸಲಾಗುತ್ತದೆ ಎಂದು ಕೇರಳದ ಸಚಿವ ರಾಜನ್ ತಿಳಿಸಿದ್ದಾರೆ.