: ಆನ್‌ಲೈನ್ ವ್ಯವಹಾರ ಹೆಚ್ಚುತ್ತಿದ್ದರೂ ಇತ್ತೀಚಿನ ವರ್ಷಗಳಲ್ಲಿ ನೋಟುಗಳ ಚಲಾವಣೆ ಪ್ರಮಾಣ ಕೂಡ (ಎನ್‌ಐಸಿ-ವಾಲ್ಯೂಮ್‌ ಆಫ್‌ ನೋಟ್‌ ಇನ್‌ ಸರ್ಕ್ಯುಲೇಷನ್‌) ಹೆಚ್ಚಾಗುತ್ತಿದೆ.

 ನವದೆಹಲಿ: ಆನ್‌ಲೈನ್ ವ್ಯವಹಾರ ಹೆಚ್ಚುತ್ತಿದ್ದರೂ ಇತ್ತೀಚಿನ ವರ್ಷಗಳಲ್ಲಿ ನೋಟುಗಳ ಚಲಾವಣೆ ಪ್ರಮಾಣ ಕೂಡ (ಎನ್‌ಐಸಿ-ವಾಲ್ಯೂಮ್‌ ಆಫ್‌ ನೋಟ್‌ ಇನ್‌ ಸರ್ಕ್ಯುಲೇಷನ್‌) ಹೆಚ್ಚಾಗುತ್ತಿದೆ. 2001ರಲ್ಲಿ 2.10 ಲಕ್ಷ ಕೋಟಿಯಷ್ಟಿದ್ದ ಚಲಾವಣೆಯಲ್ಲಿರುವ ನೋಟುಗಳ ಪ್ರಮಾಣವು 2024ರಲ್ಲಿ 34.80 ಲಕ್ಷ ಕೋಟಿ ರು.ಗೆ ಏರಿದೆ ಎಂದು ಆರ್‌ಬಿಐನ ಮಾಸಿಕ ವರದಿ ಹೇಳಿದೆ.

ಕಳೆದೆರಡು ದಶಕಗಳಿಂದ ನೋಟುಗಳ ಬೇಡಿಕೆಯಲ್ಲಿ ಉಲ್ಲೇಖಾರ್ಹ ಹೆಚ್ಚಳ ಕಂಡುಬಂದಿದೆ. ನೋಟಿನ ಪ್ರಸರಣ ಅಥವಾ ಚಲಾವಣೆ ಪ್ರಮಾಣದಲ್ಲಿನ ಈ ರೀತಿಯ ಹೆಚ್ಚಳಕ್ಕೆ ಕೋವಿಡ್‌ ಅವಧಿಯಲ್ಲಿ ಜನ ಮುನ್ನೆಚ್ಚರಿಕಾ ಕ್ರಮವಾಗಿ ಕೈಯಲ್ಲಿ ಸಾಕಷ್ಟು ನಗದು ಇಟ್ಟುಕೊಂಡಿದ್ದೂ ಒಂದು ಕಾರಣ, ಜತೆಗೆ ಬ್ಯಾಂಕ್‌ ಬ್ರ್ಯಾಂಚ್‌ಗಳ ಸಂಖ್ಯೆ, ಎಟಿಎಂಗಳ ಸಂಖ್ಯೆ ಹೆಚ್ಚಳವೂ ಇದಕ್ಕೆ ಕಾರಣ ಎಂದು ವರದಿ ಉಲ್ಲೇಖಿಸಿದೆ.

2001ರಲ್ಲಿ ನಗದು ಚಲಾವಣೆ ಪ್ರಮಾಣ 2.10 ಲಕ್ಷ ಕೋಟಿ ರು. ಇತ್ತು. 2014ರಲ್ಲಿ 10.56 ಲಕ್ಷ ಕೋಟಿ ರು.ಗೆ ಏರಿಕೆ ಆಯಿತು. ಬಳಿಕ 2024ರಲ್ಲಿ 34.8 ಲಕ್ಷ ಕೋಟಿ ರು.ಗೆ ಹೆಚ್ಚಳವಾಗಿದೆ ಎಂದು ಅದು ವಿವರಿಸಿದೆ.