ಸಾರಾಂಶ
ಆನ್‌ಲೈನ್ ಟ್ರೇಡಿಂಗ್ ಹೆಸರಿನಲ್ಲಿ ಹೆಚ್ಚುತ್ತಿರುವ ವಂಚನೆ ಪ್ರಕರಣಗಳಲ್ಲಿ ಆರೋಪಿತರಿಗೆ ಕರುಣೆ ತೋರಿದಲ್ಲಿ ಇಡೀ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದಿರುವ ಹೈಕೋರ್ಟ್, ಮಹಿಳೆಯೊಬ್ಬರಿಗೆ ₹4 ಕೋಟಿ ವಂಚಿಸಿದ್ದ ಪ್ರಕರಣದ ಆರೋಪಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
ಬೆಂಗಳೂರು : ಆನ್‌ಲೈನ್ ಟ್ರೇಡಿಂಗ್ ಹೆಸರಿನಲ್ಲಿ ಹೆಚ್ಚುತ್ತಿರುವ ವಂಚನೆ ಪ್ರಕರಣಗಳಲ್ಲಿ ಆರೋಪಿತರಿಗೆ ಕರುಣೆ ತೋರಿದಲ್ಲಿ ಇಡೀ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದಿರುವ ಹೈಕೋರ್ಟ್, ಮಹಿಳೆಯೊಬ್ಬರಿಗೆ ₹4 ಕೋಟಿ ವಂಚಿಸಿದ್ದ ಪ್ರಕರಣದಲ್ಲಿ ಆರೋಪಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
ನಗರದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಉದ್ಯೋಗಿ ಆಗಿರುವ ಮಹಿಳೆಗೆ ಇನ್‌ಸ್ಟಾಗ್ರಾಂನಲ್ಲಿ ಪರಿಚಯ ಮಾಡಿಕೊಂಡಿದ್ದ ಪಶ್ಚಿಮ ಬಂಗಾಳದ ಕೊಲ್ಕತ್ತಾ ಮೂಲದ ಶಹನವಾಜ್ ಖಾನ್ ಎಂಬಾತ ಆನ್‌ಲೈನ್ ಟ್ರೇಡಿಂಗ್ ಹೆಸರಿನಲ್ಲಿ ಹಂತ ಹಂತವಾಗಿ ₹4 ಕೋಟಿ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದ. ಈ ಬಗ್ಗೆ ಮಹಿಳೆ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಾಗಿದೆ. ಬಂಧನ ಭೀತಿಯಿಂದ ನಿರೀಕ್ಷಣಾ ಜಾಮೀನು ಕೋರಿ ಖಾನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಟ್ರೇಡಿಂಗ್ ಹೆಸರಿನಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇವುಗಳನ್ನು ನಿಯಂತ್ರಿಸಬೇಕಿದೆ. ಈ ರೀತಿಯ ಪ್ರಕರಣಗಳಲ್ಲಿ ಕರುಣೆ ತೋರಿದಲ್ಲಿ ಸಮಾಜದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಮತ್ತಷ್ಟು ಅಪರಾಧಗಳು ನಡೆಯುವುದನ್ನು ನಿಲ್ಲಿಸಲಾಗದು ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿದೆ.
ವಂಚನೆ ಕೇಸಲ್ಲಿ ಆರೋಪಿಯ ಪಾತ್ರವಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ನಾಲ್ಕು ಕೋಟಿ ರುಪಾಯಿಗೂ ಹೆಚ್ಚು ಹಣ ವಂಚನೆಯಾಗಿರುವ ಕಾರಣ ವಿಚಾರಣೆಯ ಅಗತ್ಯವಿದೆ. ಆರೋಪಿಯು ಪಶ್ಚಿಮ ಬಂಗಾಳ ಮೂಲದವರಾಗಿದ್ದು, ನಿರೀಕ್ಷಣಾ ಜಾಮೀನು ಮಂಜೂರು ಮಾಡಿದಲ್ಲಿ ತನಿಖೆಗೆ ಅಡ್ಡಿಯಾಗಲಿದೆ ಎಂದು ಪೀಠ ತಿಳಿಸಿದೆ.