ಸಾರಾಂಶ
ಬಿಜೆಪಿ ವಿರುದ್ಧ ಶಾಸಕರ ಖರೀದಿ ಆರೋಪ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಹಾಗೂ ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ಮನೇಲಿ 5 ತಾಸು ಕಾದು ನೋಟಿಸ್ ಕೊಟ್ಟ ದೆಹಲಿ ಪೊಲೀಸ್
ನವದೆಹಲಿ: ತಲಾ 25 ಕೋಟಿ ರು. ಆಫರ್ ನೀಡುವ ಮೂಲಕ 7 ಆಪ್ ಶಾಸಕರನ್ನು ಬಿಜೆಪಿ ಖರೀದಿಸುತ್ತಿದೆ ಎಂದು ಆರೋಪ ಹೊರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಹಾಗೂ ಆಪ್ ನಾಯಕ ಅರವಿಂದ್ ಕೇಜ್ರಿವಾಲ್‌ಗೆ ನೋಟಿಸ್ ನೀಡಲು ದಿಲ್ಲಿ ಪೊಲೀಸರು ಐದು ಗಂಟೆಗಳ ಕಾಲ ಕಾದು ಕುಳಿತ ಹೈಡ್ರಾಮಾ ನಡೆದಿದೆ.
ನೋಟಿಸ್ ನೀಡಲು ಶುಕ್ರವಾರವೇ ಕೇಜ್ರಿವಾಲ್ ಮನೆಗೆ ಆಗಮಿಸಿದ್ದ ಪೊಲೀಸರು, ಕೇಜ್ರಿವಾಲ್ ಮನೆಯಲ್ಲಿಲ್ಲದ ಕಾರಣಕ್ಕೆ ನೋಟಿಸ್ ನೀಡದೇ ಹಿಂದಿರುಗಿದ್ದರು.
ಖುದ್ದು ಕೇಜ್ರಿವಾಲ್‌ಗೇ ನೋಟಿಸ್ ಹಸ್ತಾಂತರಿಸುವ ಉದ್ದೇಶದಿಂದ ಮತ್ತೆ ಶನಿವಾರ ಅವರ ನಿವಾಸಕ್ಕೆ ಆಗಮಿಸಿದ್ದ ಪೊಲೀಸರು ಐದು ಗಂಟೆಗಳ ಕಾಲ ಅವರಿಗಾಗಿ ಕಾದ ಬಳಿಕ ನೋಟಿಸ್ ನೀಡಿ ತೆರಳಿದ್ದಾರೆ.
ಆಪ್ ಶಾಸಕರನ್ನು ಬಿಜೆಪಿ ಖರೀದಿಸುತ್ತಿದೆ ಎಂಬ ಕೇಜ್ರಿವಾಲ್ ಆರೋಪ ಸುಳ್ಳು ಎಂದು ಬಿಜೆಪಿ ದೂರು ನೀಡಿತ್ತು. ಈ ಪ್ರಕರಣದಲ್ಲಿ ನೋಟಿಸ್ ನೀಡಲಾಗಿದೆ.
ಶುಕ್ರವಾರವೇ ಕೇಜ್ರಿವಾಲ್‌ಗೆ ಪೊಲೀಸರು ನೋಟಿಸ್ ನೀಡಿದ್ದಾರೆ ಎನ್ನಲಾಗಿತ್ತಾದರೂ, ಅವರು ನೋಟಿಸ್ ನೀಡದೇ ಹಿಂದಿರುಗಿದ್ದರು ಎಂಬುದು ಶನಿವಾರ ತಿಳಿದು ಬಂದಿದೆ.