ಸಾರಾಂಶ
ನವದೆಹಲಿ: ಭಾರತದ ಅಣುಶಕ್ತಿ ಕ್ಷೇತ್ರದಲ್ಲಿ ಮೊದಲ ಬಾರಿಗೆ ಖಾಸಗಿ ಹೂಡಿಕೆ ಆಹ್ವಾನಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ವಲಯದಲ್ಲಿ 21.5 ಲಕ್ಷ ಕೋಟಿ ರು. ಹೂಡಿಕೆ ಮಾಡುವಂತೆ ಕೇಂದ್ರ ಆಹ್ವಾನಿಸಿದೆ.
ಈ ಹೂಡಿಕೆ ಪ್ರಕ್ರಿಯೆಯಲ್ಲಿ ಟಾಟಾ ಪವರ್, ರಿಲಯನ್ಸ್, ಅದಾನಿ ಪವರ್ ಹಾಗೂ ವೇದಾಂತ ಕಂಪನಿಗಳು ಆಸಕ್ತಿ ತೋರಿಸಿದೆ ಎಂದು ಮೂಲಗಳು ತಿಳಿಸಿವೆ.
ಭಾರತದ ಅಣುಕ್ಷೇತ್ರ ಸಂಪೂರ್ಣ ಸರ್ಕಾರದ ಅಧೀನದಲ್ಲಿದ್ದು, ಇಲ್ಲಿ ಖಾಸಗಿಯವರು ವಿದ್ಯುತ್ ಉತ್ಪಾದಿಸಲು ಕಾನೂನು ಆಸ್ಪದ ಕೊಡುವುದಿಲ್ಲ.
ಹೀಗಾಗಿ ಈ ಹೂಡಿಕೆಗಳು ರಿಯಾಕ್ಟರ್ ಪ್ರದೇಶದ ಹೊರಗಿನ ನಿರ್ಮಾಣ, ಭೂಮಿ ಖರೀದಿ, ನೀರು ಮತ್ತು ಇತರೆ ನಿರ್ಮಾಣ ವಲಯಕ್ಕೆ ಸೀಮಿತವಾಗಲಿರಲಿವೆ.
ರಿಯಾಕ್ಟರ್ ನಿರ್ಮಾಣ ಮತ್ತು ಉತ್ಪಾದನೆಯನ್ನು ಸಂಪೂರ್ಣವಾಗಿ ಸರ್ಕಾರಿ ಸ್ವಾಮ್ಯದ ಎನ್‌ಪಿಸಿಐಎಲ್ ನಿರ್ವಹಿಸಲಿದೆ. ಇದಕ್ಕೆ ಅದು ಶುಲ್ಕ ಪಡೆಯಲಿದೆ. ಇನ್ನು ಹೂಡಿಕೆ ಮಾಡಿದ ಕಂಪನಿಗಳು ವಿದ್ಯುತ್ ಮಾರಾಟದ ಲಾಭ ಪಡೆದುಕೊಳ್ಳಬಹುದಾಗಿದೆ.
ಪ್ರಸಕ್ತ ದೇಶದ ವಿದ್ಯುತ್ ಉತ್ಪಾದನೆಯಲ್ಲಿ ಪರಮಾಣು ಇಂಧನ ಮೂಲದ ಪಾಲು ಕೇವಲ ಶೇ.2ರಷ್ಟಿದೆ. ಈ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಯಿಂದಾಗಿ ಭಾರತ ಸರ್ಕಾರ ಈಗಿನ ಅಣುಶಕ್ತಿ ಸಾಮರ್ಥ್ಯ 7,500 ಮೆಗಾ ವ್ಯಾಟ್‌ನನ್ನು 2040ರ ವೇಳೆಗೆ 1300 ಮೆಗಾ ವ್ಯಾಟ್‌ಗೆ ಏರಿಸುವ ಉದ್ದೇಶ ಹೊಂದಿದೆ.
ಆದರೆ 2030ರ ವೇಳೆಗೆ ಪಳೆಯುಳಿಕೆಯೇತರ ಇಂಧನ ಮೂಲಗಳ ಮೂಲಕ ವಿದ್ಯುತ್ ಉತ್ಪಾದನೆಯನ್ನು ಈಗಿನ ಶೇ.42ರಿಂದ ಶೇ.50ಕ್ಕೆ ಏರಿಸುವ ಗುರಿ ಹೊಂದಿದೆ.