ಸಾರಾಂಶ
ನವದೆಹಲಿ : ಲಾಭದಾಯಕ ಹುದ್ದೆಯನ್ನು ಹೊಂದಿರುವ ಸಂಸದರನ್ನು ಅನರ್ಹಗೊಳಿಸುವ 65 ವರ್ಷಗಳ ಹಳೆಯ ‘ಲಾಭದಾಯಕ ಹುದ್ದೆ ಕಾಯ್ದೆ’ಯನ್ನು ರದ್ದುಪಡಿಸಿ ಹೊಸ ಕಾಯ್ದೆ ಜಾರಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಹೊಸ ಕಾಯ್ದೆಯು ಇಂದಿನ ಅಗತ್ಯಗಳಿಗೆ ತಕ್ಕಂತೆ ಇರಲಿದೆ ಎಂದು ಹೇಳಿರುವ ಕೇಂದ್ರ ಕಾನೂನು ಸಚಿವಾಲಯ, ಹೊಸ ‘ಸಂಸತ್ (ಅನರ್ಹತೆ ತಡೆ) ಕಾಯ್ದೆ, 2024’ರ ಕರಡನ್ನು ಪ್ರಕಟಿಸಿದೆ. ಇದರಲ್ಲಿ ಕೆಲ ಹುದ್ದೆಗಳನ್ನು ಲಾಭದಾಯಕ ಹುದ್ದೆಯ ವ್ಯಾಪ್ತಿಯಿಂದ ಹೊರಗಿಡುವ ಸಾಧ್ಯತೆಯಿದೆ. ಅಲ್ಲದೆ, ಈ ಕಾಯ್ದೆಯು ಸಂಸದರಿಗೆ ದುಸ್ವಪ್ನವಾಗಿ ಕಾಡುತ್ತಿದ್ದ ಕೆಲ ಕಠಿಣ ನಿಯಮಗಳನ್ನು ಸಡಿಲಗೊಳಿಸುವ ಸಂಭವವಿದೆ.
ಕಳೆದ ಲೋಕಸಭೆಯ ಅವಧಿಯಲ್ಲೇ ಈ ಕಾಯ್ದೆಯ ಕರಡು ಸಿದ್ಧವಾಗಿತ್ತು. ಕಲರಾಜ್ ಮಿಶ್ರಾ ಸಮಿತಿಯು ಹೊಸ ಕಾಯ್ದೆಯನ್ನು ಸಿದ್ಧಪಡಿಸಿತ್ತು. ಅದನ್ನು ಈಗ ಮಸೂದೆ ರೂಪದಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಏನೇನು ಬದಲಾವಣೆ?:
ಹೊಸ ಕಾಯ್ದೆಯಲ್ಲಿ ಹಳೆಯ ಕಾಯ್ದೆಯ ಸೆಕ್ಷನ್ 3ನ್ನು ತಿದ್ದುಪಡಿ ಮಾಡಿ, ಕೆಲ ಹುದ್ದೆಗಳನ್ನು ಲಾಭದಾಯಕ ಹುದ್ದೆಯ ವ್ಯಾಪ್ತಿಯಿಂದ ಕೈಬಿಡಲಾಗುತ್ತದೆ. ಅಂದರೆ, ಈ ಹುದ್ದೆಗಳನ್ನು ಅಲಂಕರಿಸುವ ಸಂಸದರಿಗೆ ಅನರ್ಹತೆಯ ಆತಂಕ ಇರುವುದಿಲ್ಲ. ಹಾಗೆಯೇ, ಹಳೆ ಕಾಯ್ದೆಯ ಸೆಕ್ಷನ್ 4ನ್ನು ಕೈಬಿಡಲು ಸರ್ಕಾರ ಮುಂದಾಗಿದೆ. ಅದರಲ್ಲಿ, ಕೆಲ ಪ್ರಕರಣಗಳಲ್ಲಿ ತಾತ್ಕಾಲಿಕವಾಗಿ ಸಂಸದರನ್ನು ಅಮಾನತುಗೊಳಿಸುವ ಅವಕಾಶವಿತ್ತು. ಅದನ್ನು ಕೈಬಿಟ್ಟು, ಅಂತಹ ಪ್ರಕರಣಗಳಲ್ಲಿ ಸರ್ಕಾರ ಆದೇಶ ಹೊರಡಿಸಿ ನಿರ್ಧಾರ ಕೈಗೊಳ್ಳುವ ಅವಕಾಶ ನೀಡಲಾಗುತ್ತದೆ. ಇನ್ನು, ಅನರ್ಹತೆಯ ವ್ಯಾಪ್ತಿಗೆ ಬಾರದಂತೆ ತಡೆಯುತ್ತಿದ್ದ ಇನ್ನಿತರ ಕಾಯ್ದೆಗಳ ಅಡ್ಡಿಯನ್ನು ಹೊಸ ಕಾಯ್ದೆಯಲ್ಲಿ ನಿವಾರಿಸಲಾಗುತ್ತದೆ.
ಲಾಭದಾಯಕ ಹುದ್ದೆಗೆ ವ್ಯಾಖ್ಯಾನ:
ಅಲ್ಲದೆ, ಹೊಸ ಕಾಯ್ದೆಯಲ್ಲಿ ಲಾಭದಾಯಕ ಹುದ್ದೆ ಅಂದರೇನು ಎಂಬ ಬಗ್ಗೆ ಸಮಗ್ರ ವ್ಯಾಖ್ಯಾನವನ್ನು ಮಾಡಲಾಗಿದೆ. ಮತ್ತು ಕಾಯ್ದೆಯ ಭಾಷೆ ಹಾಗೂ ಸ್ವರೂಪವನ್ನು ಸರಳಗೊಳಿಸಲಾಗಿದೆ ಎಂದು ಕಾನೂನು ಸಚಿವಾಲಯ ಹೇಳಿಕೊಂಡಿದೆ.
ಸ್ವಚ್ಛ ಭಾರತ ಮಿಷನ್, ಸ್ಮಾರ್ಟ್ ಸಿಟಿ ಯೋಜನೆ, ದೀನದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ ಮುಂತಾದ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಿಗೆ ಸಂಬಂಧಿಸಿದ ಹುದ್ದೆಗಳನ್ನು ಲಾಭದಾಯಕ ಹುದ್ದೆಯ ವ್ಯಾಪ್ತಿಯಿಂದ ಕೈಬಿಡುವ ಅಂಶ ಕರಡು ಮಸೂದೆಯಲ್ಲಿದೆ.
ಕರಡು ಮಸೂದೆಗೆ ಸಾರ್ವಜನಿಕರ ಆಕ್ಷೇಪಣೆ ಆಹ್ವಾನಿಸಲಾಗಿದ್ದು, ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ ಸಂಸತ್ತಿನಲ್ಲಿ ಮಂಡಿಸಿ ಅಂಗೀಕರಿಸಲಾಗುತ್ತದೆ.