48 ವರ್ಷಗಳ ಬಳಿಕ ಇಂದು ಲೋಕಸಭೆ ಸ್ಪೀಕರ್‌ ಚುನಾವಣೆ

| Published : Jun 26 2024, 01:32 AM IST

ಸಾರಾಂಶ

ಎನ್‌ಡಿಎ ಅಭ್ಯರ್ಥಿ ಮತ್ತೊಮ್ಮೆ ಓಂ ಬಿರ್ಲಾ ಕಣಕ್ಕಿಳಿದಿದ್ದು, ಇಂಡಿಯಾದಿಂದ ಕಾಂಗ್ರೆಸ್‌ನ ಕೆ.ಸುರೇಶ್‌ ನಾಮಪತ್ರ ಸಲ್ಲಿಸಿದ್ದಾರೆ. ಎನ್‌ಡಿಎ ಜಯ, ಇಂಡಿಯಾ ಸೋಲು ಪಕ್ಕಾ ಆಗಿದ್ದರೂ ಸಾಂಕೇತಿಕ ಚುನಾವಣೆ ನಡೆಯಲಿದೆ.

ಪಿಟಿಐ ನವದೆಹಲಿ

18ನೇ ಲೋಕಸಭೆಯ ಸ್ಪೀಕರ್‌ ಆಯ್ಕೆ ಮಂಗಳವಾರ ನಾಟಕೀಯ ತಿರುವು ಪಡೆದುಕೊಂಡಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿ ವಿರುದ್ಧ ಪ್ರತಿಪಕ್ಷಗಳ ಕೂಟವಾಗಿರುವ ‘ಇಂಡಿಯಾ’ ಕೂಡ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ. ಇದರಿಂದಾಗಿ 1976ರ ಬಳಿಕ ಅಂದರೆ 48 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಲೋಕಸಭೆಯ ಮುಖ್ಯಸ್ಥ ಹುದ್ದೆಗೆ ಬುಧವಾರ ಬೆಳಗ್ಗೆ 11ಕ್ಕೆ ಚುನಾವಣೆ ನಡೆಯಲಿದೆ.

ಮಿತ್ರಪಕ್ಷಗಳಾದ ತೆಲುಗುದೇಶಂ ಹಾಗೂ ಜೆಡಿಯು ಕಣ್ಣಿಟ್ಟಿದ್ದವು ಎಂದು ಹೇಳಲಾಗಿದ್ದ ಸ್ಪೀಕರ್‌ ಸ್ಥಾನವನ್ನು ತನ್ನ ಬಳಿಯೇ ಉಳಿಸಿಕೊಳ್ಳಲು ಮುಂದಾಗಿರುವ ಬಿಜೆಪಿ, 17ನೇ ಲೋಕಸಭೆಯಲ್ಲಿ ಐದು ವರ್ಷಗಳ ಕಾಲ ಸ್ಪೀಕರ್‌ ಆಗಿದ್ದ ತನ್ನ ಸಂಸದ ಓಂ ಬಿರ್ಲಾ ಅವರನ್ನು ಎನ್‌ಡಿಎ ಸ್ಪೀಕರ್‌ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಈ ನಡುವೆ, ಸಂಪ್ರದಾಯದಂತೆ ಆಡಳಿತ ಪಕ್ಷದವರು ಸ್ಪೀಕರ್‌ ಹುದ್ದೆ ಅಲಂಕರಿಸಿದರೆ ಪ್ರತಿಪಕ್ಷದವರನ್ನು ಉಪಸ್ಪೀಕರ್‌ ಮಾಡಬೇಕು ಎಂದು ಇಂಡಿಯಾ ಷರತ್ತು ಇಟ್ಟಿತಾದರೂ, ಅದಕ್ಕೆ ಸರ್ಕಾರ ಒಪ್ಪಿಲ್ಲ. ಹೀಗಾಗಿ ಹಿರಿಯ ಸಂಸದ ಕೋಡಿಕುನ್ನಿಲ್‌ ಸುರೇಶ್‌ ಅವರು ‘ಇಂಡಿಯಾ’ ಅಭ್ಯರ್ಥಿಯಾಗಿದ್ದಾರೆ.

ಹೊಸ ಸಂಸತ್ತಿನಲ್ಲಿ ಆಸನಗಳ ಹಂಚಿಕೆ ಮುಗಿದಿಲ್ಲ ಹಾಗೂ ಎಲೆಕ್ಟ್ರಾನಿಕ್‌ ಮತದಾನ ವ್ಯವಸ್ಥೆ ಕೂಡ ಜಾರಿಗೆ ಬಂದಿಲ್ಲ. ಬುಧವಾರ ಬೆಳಗ್ಗೆ 11ಕ್ಕೆ ಚೀಟಿ ಮೂಲಕ ಸಂಸದರು ಮತ ಚಲಾವಣೆ ಮಾಡಲಿದ್ದಾರೆ. ಎನ್‌ಡಿಎ ಕೂಟಕ್ಕೆ ಬಹುಮತ ಇರುವ ಹಿನ್ನೆಲೆಯಲ್ಲಿ ಓಂ ಬಿರ್ಲಾ ಅವರು ಸ್ಪೀಕರ್‌ ಆಗಿ ಆಯ್ಕೆಯಾಗುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ.

ಯಾವ ಮೈತ್ರಿಕೂಟದಲ್ಲೂ ಗುರುತಿಸಿಕೊಳ್ಳದ, ಎನ್‌ಡಿಎ ಮೈತ್ರಿಕೂಟದಲ್ಲಿರುವ ಟಿಡಿಪಿಗೆ ವಿಪಕ್ಷವಾಗಿರುವ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಸಂಸದರು ಬಿಜೆಪಿಗೆ ಬೆಂಬಲ ನೀಡುವುದಾಗಿ ಪ್ರಕಟಿಸಿದ್ದಾರೆ.ಮನವೊಲಿಕೆಗೆ ಕಸರತ್ತು:

ಸರ್ವಸಮ್ಮತದಿಂದ ಸ್ಪೀಕರ್‌ ಅವರನ್ನು ಆಯ್ಕೆ ಮಾಡಲು ಮಂಗಳವಾರ ಆಡಳಿತ- ಪ್ರತಿಪಕ್ಷಗಳ ನಡುವೆ ಸಭೆ ನಡೆಯಿತು. ಸಂಸತ್ತಿನ ರಾಜನಾಥ ಸಿಂಗ್‌ ಅವರ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ ಸರ್ಕಾರದ ಕಡೆಯಿಂದ ರಾಜನಾಥ, ಅಮಿತ್‌ ಶಾ, ಜೆ.ಪಿ.ನಡ್ಡಾ, ಪ್ರತಿಪಕ್ಷಗಳ ಪಾಳೆಯದಿಂದ ಕಾಂಗ್ರೆಸ್ಸಿನ ಕೆ.ಸಿ.ವೇಣುಗೋಪಾಲ್‌ ಹಾಗೂ ಡಿಎಂಕೆಯ ಟಿ.ಆರ್‌. ಬಾಲು ಪಾಲ್ಗೊಂಡಿದ್ದರು. ಬಿರ್ಲಾ ಅವರನ್ನು ಬೆಂಬಲಿಸಲು ಸಿದ್ಧರಿದ್ದೇವೆ. ಆದರೆ ಉಪಸ್ಪೀಕರ್ ಸ್ಥಾನವನ್ನು ನಮಗೆ ಕೊಡಬೇಕು ಎಂದು ವಿಪಕ್ಷ ನಾಯಕರು ಷರತ್ತು ವಿಧಿಸಿದರು. ಈ ಷರತ್ತಿಗೆ ಸರ್ಕಾರ ಒಪ್ಪದ ಕಾರಣ, ಎರಡೂ ಬಣಗಳು ಸ್ಪರ್ಧೆಗೆ ನಿರ್ಧರಿಸಿದವು. ಮಂಗಳವಾರವೇ ಓಂ ಬಿರ್ಲಾ ಹಾಗೂ ಕೋಡಿಕುನ್ನಿಲ್‌ ಸುರೇಶ್‌ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಬಿರ್ಲಾ ಅವರು ಮೂರನೇ ಬಾರಿ, ಕೋಡಿಕುನ್ನಿಲ್‌ ಅವರು 8ನೇ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಕೋಡಿಕುನ್ನಿಲ್‌ ಅವರು ಕೇರಳದವರಾಗಿದ್ದು, ದಲಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇಂಡಿಯಾ ಕೂಟದಲ್ಲೇ ಸುರೇಶ್‌ಗೆ ವಿರೋಧ

ಕಾಂಗ್ರೆಸ್‌ ಸಂಸದ ಕೆ.ಸುರೇಶ್‌ ಲೋಕಸಭಾ ಸ್ಪೀಕರ್‌ ಸ್ಥಾನಕ್ಕೆ ಪ್ರತಿಪಕ್ಷಗಳ ಪರವಾಗಿ ನಾಮಪತ್ರ ಸಲ್ಲಿಸಿದ್ದಕ್ಕೆ ಇಂಡಿಯಾ ಕೂಟದ ಮಿತ್ರಪಕ್ಷ ಟಿಎಂಸಿ ಆಕ್ಷೇಪಿಸಿದೆ. ಟಿಎಂಸಿ ಸಂಸದ ಅಭಿಷೇಕ್‌ ಬ್ಯಾನರ್ಜಿ ಮಾತನಾಡಿ, ‘ಇಂಡಿಯಾ ಮೈತ್ರಿಕೂಟದ ಎಲ್ಲ ಮಿತ್ರರ ಜೊತೆ ಚರ್ಚಿಸದೆ ಕಾಂಗ್ರೆಸ್‌ ಸ್ಪೀಕರ್‌ ಸ್ಥಾನಕ್ಕೆ ಏಕಪಕ್ಷೀಯವಾಗಿ ತನ್ನ ಅಭ್ಯರ್ಥಿ ಕಣಕ್ಕಿಳಿಸಿದೆ. ಅವರನ್ನು ಬೆಂಬಲಿಸುವ ಕುರಿತು ಮಮತಾ ಬ್ಯಾನರ್ಜಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ’ ಎಂದಿದ್ದಾರೆ.

------

1952, 67, 76 ಬಳಿಕ ಈಗ 4ನೇ ಚುನಾವಣೆ

ಸ್ವತಂತ್ರ ಭಾರತದ ಇತಿಹಾಸದಲ್ಲಿ ಈ ಹಿಂದೆ 3 ಬಾರಿ ಮಾತ್ರ ಲೋಕಸಭೆ ಸ್ಪೀಕರ್‌ ಸ್ಥಾನಕ್ಕೆ ಚುನಾವಣೆ ನಡೆದಿದೆ. ಇನ್ನುಳಿದ ಎಲ್ಲಾ ಸಲ ಒಮ್ಮತದಿಂದ ಆಯ್ಕೆ ಮಾಡಲಾಗಿದೆ. 1952ರಲ್ಲಿ ಕಾಂಗ್ರೆಸ್‌ನ ಜಿ.ವಿ.ಮಾವಲಂಕರ್‌ ಮತ್ತು ವಿಪಕ್ಷದ ಶಾಂತಾರಾಮ್‌ ನಡುವೆ, 1967ನಲ್ಲಿ ಕಾಂಗ್ರೆಸ್‌ನ ನೀಲಂ ಸಂಜೀವ ರೆಡ್ಡಿ ಹಾಗೂ ವಿಪಕ್ಷದ ಪಿ.ವಿಶ್ವನಾಥನ್‌ ನಡುವೆ, 1976ರಲ್ಲಿ ಕಾಂಗ್ರೆಸ್‌ನ ಬಲಿರಾಮ್‌ ಭಗತ್‌ ಮತ್ತು ಜನಸಂಘದ ಜಗನ್ನಾಥರಾವ್‌ ಜೋಶಿ ನಡುವೆ ಚುನಾವಣೆ ನಡೆದಿತ್ತು.