ಶ್ರೀನಗರ: ಕಾರ್ಯಕ್ರಮವೊಂದರಲ್ಲಿ ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಕೇಸರಿ, ಬಿಳಿ, ಹಸಿರು ಬಣ್ಣ ಒಳಗೊಂಡಿದ್ದ ರಾಷ್ಟ್ರಧ್ವಜ ಹೋಲುವ ರಿಬ್ಬನ್ ಕತ್ತರಿಸಲು ನಿರಾಕರಿಸಿದ್ದಾರೆ. ‘ನಿಮ್ಮ ಕುಶಲ ಕರ್ಮಿಗಳನ್ನು ಮೊದಲು ತಿಳಿಯಿರಿ’ ಎನ್ನುವ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾಗಿದ್ದರು. ಅಲ್ಲಿ ಉದ್ಘಾಟನಾ ಸ್ಥಳದಲ್ಲಿ ತ್ರಿವರ್ಣ ಧ್ವಜ ಬಣ್ಣವಿದ್ದ ಟೇಪ್ ಕಟ್ಟಲಾಗಿತ್ತು. ಆದರೆ ಅದನ್ನು ಕತ್ತರಿಸಲು ನಿರಾಕರಿಸಿದ ಸಿಎಂ, ಬದಲಿಗೆ ಬಿಚ್ಚಿ ಅದನ್ನು ಗೌರವದಿಂದದ ಮಡಚಿ ಇಡುವಂತೆ ಆಯೋಜಕರಿಗೆ ಸೂಚಿಸಿದರು. ಅವರ ಈ ನಡೆ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
==ಸೆನ್ಸೆಕ್ಸ್ ಭರ್ಜರಿ 1263 ಅಂಕ ಏರಿಕೆ: 9.41 ಲಕ್ಷ ಕೋಟಿ ಸಂಪತ್ತು ಏರಿಕೆ
ಮುಂಬೈ: ಇರಾನ್ ಮತ್ತು ಅಮೆರಿಕ ನಡುವೆ 2ನೇ ಸುತ್ತಿನ ಸಂಧಾನ ಮಾತುಕತೆ ಸಾಧ್ಯತೆ ಬೆನ್ನಲ್ಲೇ ಬುಧವಾರ ಷೇರುಪೇಟೆ ಭಾರೀ ಪ್ರಮಾಣದಲ್ಲಿ ಚೇತರಿಸಿಕೊಂಡಿದೆ. ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 1263 ಅಂಕಗಳ ಭಾರೀ ಏರಿಕೆ ಕಂಡು 78111ರಲ್ಲಿ ಮುಕ್ತಾಯವಾಗಿದೆ. ಇನ್ನು ನಿಫ್ಟಿ 388 ಅಂಕ ಜಿಗಿದು 24,231ರಲ್ಲಿ ಕೊನೆಗೊಂಡಿದೆ. ಸಂಧಾನ ಮಾತುಕತೆಯ ಶುಭ ಸುದ್ದಿ, ಕಚ್ಚಾತೈಲ ಬೆಲೆ ಇಳಿಕೆಗೂ ಕಾರಣವಾಗಿದ್ದು ಷೇರುಪೇಟೆ ಏರಿಕೆಗೆ ಕಾರಣವಾಗಿದೆ. ಬುಧವಾರ ಷೇರುಪೇಟೆ ಏರಿಕೆ ಕಾರಣ ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ 9.41 ಲಕ್ಷ ಕೋಟಿ ರು.ನಷ್ಟು ಹೆಚ್ಚಳವಾಗಿದೆ.
==
ಡಿಸಿಎಂ ಉದಯನಿಧಿ ತಪ್ಪು ಆಸ್ತಿ ಮಾಹಿತಿ: ವರದಿ ಕೇಳಿದ ‘ಹೈ’
ಚೆನ್ನೈ: ತಮಿಳುನಾಡಿನ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್, ಇತ್ತೀಚೆಗೆ ಸಲ್ಲಿಸಿದ ಚುನಾವಣಾ ಅಫಿಡವಿಟ್‌ನಲ್ಲಿ ಆಸ್ತಿ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆಂಬ ಆರೋಪದ ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟ್ ಉದಯನಿಧಿ ಆಸ್ತಿ ಕುರಿತು ಆದಾಯ ತೆರಿಗೆ ಇಲಾಖೆಯಿಂದ ಮಾಹಿತಿ ಕೋರಿದೆ. 2026ರ ನಾಮಪತ್ರ ಸಲ್ಲಿಕೆ ವೇಳೆಯ ವಿವರ ಹಾಗೂ 2021ರ ಅಫಿಡವಿಟ್‌ನಲ್ಲಿ ವ್ಯತ್ಯಾಸವಿದೆ. 7 ಕೋಟಿ ರು.ಹೂಡಿಕೆ ಪ್ರಸ್ತಾಪಿಸಿಲ್ಲ ಎಂದು ಅರ್ಜಿದಾರ ಕುಮರವೇಲ್ ದೂರಿದ್ದರು.
==ಟೈಮ್ 100 ಪ್ರಭಾವಿ ಪಟ್ಟಿಯಲ್ಲಿ ರಣಬೀರ್, ಪಿಚೈ, ವಿಕಾಸ್ ಖನ್ನಾನ್ಯೂಯಾರ್ಕ್: ಅಮೆರಿಕದ ಪ್ರತಿಷ್ಠಿತ ಟೈಮ್ ನಿಯತಕಾಲಿಕೆ 2026ನೇ ಸಾಲಿನ 100 ಪ್ರಭಾವಿಗಳ ಪಟ್ಟಿ ಪ್ರಕಟ ಮಾಡಿದೆ. ಇದರಲ್ಲಿ ಗೂಗಲ್ ಸಿಇಒ ಸುಂದರ್ ಪಿಚ್ಚೈ, ನಟ ರಣಬೀರ್ ಕಪೂರ್, ಭಾರತದ ಖ್ಯಾತ ಬಾಣಸಿಗ ವಿಕಾಸ್ ಖನ್ನಾ, ಯುಟ್ಯೂಬ್ ಮುಖ್ಯಸ್ಥ ನೀಲ್ ಮೋಹನ್ ಸ್ಥಾನ ಪಡೆದಿದ್ದಾರೆ. ಉಳಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪೋಪ್ ಲಿಯೋ XIV, ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರುಬಿಯೋ, ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್, ಇಸ್ರೇಲ್ ಪಿಎಂ ನೆತನ್ಯಾಹು, ನ್ಯೂಯಾರ್ಕ್ ಮೇಯರ್ ಜೋರ್ಹಾನ್ ಮಮ್ದಾನಿ, ಆರ್ಟೆಮಿಸ್ II ಗಗನನೌಕೆಯ ಕಮಾಂಡರ್ ರೀಡ್ ವೈಸ್‌ಮನ್ ಸ್ಥಾನ ಪಡೆದಿದ್ದಾರೆ.