ಸಾರಾಂಶ
ಒಬ್ಬನೇ ವ್ಯಕ್ತಿ 6 ಜಿಲ್ಲೆಗಳ, 6 ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದೇ ಕಾಲಕ್ಕೆ ಎಕ್ಸರೇ ಟೆಕ್ನೀಶಿಯನ್ ಆಗಿ 9 ವರ್ಷಗಳಿಂದ ಮಾಡುತ್ತಿದ್ದ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ. ಪ್ರಕರಣದ ಬೆನ್ನುಹತ್ತಿ ಹೋದ ಪೊಲೀಸರಿಗೆ ಇದರ ಹಿಂದೆ ದೊಡ್ಡ ವಂಚಕ ಜಾಲ ಇರುವುದು ಕಂಡುಬಂದಿದೆ.
ಉತ್ತರಪ್ರದೇಶದಲ್ಲಿ ಭಾರೀ ವಂಚನೆ । ಕೆಲಸ ಮಾಡದೆ 4.5 ಕೋಟಿ ಲೂಟಿ
ಲಖನೌ: ಒಬ್ಬನೇ ವ್ಯಕ್ತಿ 6 ಜಿಲ್ಲೆಗಳ, 6 ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದೇ ಕಾಲಕ್ಕೆ ಎಕ್ಸರೇ ಟೆಕ್ನೀಶಿಯನ್ ಆಗಿ 9 ವರ್ಷಗಳಿಂದ ಮಾಡುತ್ತಿದ್ದ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ. ಪ್ರಕರಣದ ಬೆನ್ನುಹತ್ತಿ ಹೋದ ಪೊಲೀಸರಿಗೆ ಇದರ ಹಿಂದೆ ದೊಡ್ಡ ವಂಚಕ ಜಾಲ ಇರುವುದು ಕಂಡುಬಂದಿದೆ. ಅರ್ಪಿತ್ ಹೆಸರಿನಲ್ಲಿ ಮಾತ್ರವಲ್ಲದೇ, ಹರ್ದೋಯ್ ಜಿಲ್ಲೆಯಲ್ಲಿ ಇನ್ನೊಂದು ಹುದ್ದೆಗೆ ಅಂಕಿತ್ ಸಿಂಗ್ ಹೆಸರಿನಲ್ಲಿ 6 ಜನರು, ಮೈನ್‌ಪುರಿಯಲ್ಲಿ ಒಂದೇ ಹೆಸರಿನ ಇಬ್ಬರು ಅಕ್ರಮವಾಗಿ ಸರ್ಕಾರಿ ಹುದ್ದೆಗೆ ಸೇರಿಕೊಂಡು ವೇತನ ಪಡೆಯುತ್ತಿದ್ದ ವಿಷಯವೂ ಬೆಳಕಿಗೆ ಬಂದಿದೆ.ಆಗಿದ್ದೇನು?:
2016ರಲ್ಲಿ ಯುಪಿ ಸರ್ಕಾರವು, ಎಕ್ಸರೇ ತಂತ್ರಜ್ಞರ ಹುದ್ದೆಗೆ 403 ಅಭ್ಯರ್ಥಿಗಳನ್ನು ಆಯ್ಕೆ ಮಾಡಿತ್ತು. ಆಗ್ರಾ ಮೂಲದ ಅರ್ಪಿತ್ ಸಿಂಗ್ ಕೂಡ ಇವರಲ್ಲಿ ಒಬ್ಬರಾಗಿದ್ದರು. ವರ್ಷ ಕಳೆದಂತೆ ಇನ್ನೂ 5 ಜಿಲ್ಲೆಗಳಲ್ಲಿ ಅದೇ ರೀತಿಯ ಹುದ್ದೆಗೆ ಅರ್ಪಿತ್ ನೇಮಕವಾಗಿದ್ದರು. ಇದು ಹೇಗೆಂದರೆ, ಅರ್ಪಿತ್‌ರ ಅಸಲಿ ಆಧಾರ್ ಮಾಹಿತಿ, ನೇಮಕ ಪತ್ರ ಸೇರಿದಂತೆ ಎಲ್ಲಾ ಅಗತ್ಯ ದಾಖಲೆಗಳನ್ನು ನಕಲಿಸಿ ವಂಚಕರ ತಂಡವೊಂದು ಇತರೆ 5 ಜಿಲ್ಲೆಗಳಲ್ಲಿ ಎಕ್ಸರೇ ತಂತ್ರಜ್ಞರ ಕೆಲಸ ಗಿಟ್ಟಿಸಿಕೊಂಡಿತ್ತು. ಅದಕ್ಕೆ ಪ್ರತಿ ತಿಂಗಳೂ ಪ್ರತಿ ಹುದ್ದೆಗೆ ಮಾಸಿಕ 69,595 ರು. ಸಂಬಳವನ್ನೂ ಪಡೆಯುತ್ತಿತ್ತು. ಹೀಗೆ ಇಷ್ಟು ವರ್ಷದಲ್ಲಿ ಒಟ್ಟು 4.5 ಕೋಟಿ ರು. ವೇತನವನ್ನು ವಂಚಕರ ತಂಡ ದೋಚಿದೆ.ಬಯಲಾಗಿದ್ದು ಹೇಗೆ?:
ಇತ್ತೀಚೆಗೆ ಮಾನವ ಸಂಪನ್ಮೂಲ ನಿರ್ವಹಣೆಗೆ ರಾಜ್ಯ ಸರ್ಕಾರ ಬಳಸುವ ‘ಮಾನವ ಸಂಪದ ಪೋರ್ಟಲ್’ನಲ್ಲಿ ಆನ್‌ಲೈನ್ ಪರಿಶೀಲನೆ ನಡೆಸುತ್ತಿದ್ದ ವೇಳೆ ಒಂದೇ ವೈಯಕ್ತಿಕ ಮಾಹಿತಿ ಇರುವ ಅರ್ಪಿತ್ ಹೆಸರಿನ 6 ಜನ ಪತ್ತೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ದೂರು ದಾಖಲಿಸಿ ಪೊಲೀಸರು ವಂಚಕರನ್ನು ಪತ್ತೆಹಚ್ಚಿ ಬಲೆ ಬೀಸುವ ಹೊತ್ತಿಗಾಗಲೇ ಅವರೆಲ್ಲ ಮನೆ ಬದಲಿಸಿ, ಫೋನ್‌ಗಳನ್ನು ಆಫ್ ಮಾಡಿಕೊಂಡು ಪರಾರಿಯಾಗಿದ್ದಾರೆ.