ಒಂದೇ ಯೋಜನೆಗೆ ಇಸ್ರೋದಿಂದ 2 ರಾಕೆಟ್‌ ಉಡ್ಡಯನ

| Published : Mar 12 2024, 02:03 AM IST / Updated: Mar 12 2024, 08:03 AM IST

ಸಾರಾಂಶ

ಚಂದ್ರನ ಮೇಲಿನ ಕಲ್ಲನ್ನು ಭೂಮಿಗೆ ತರುವ ಉದ್ದೇಶ ಹೊಂದಿರುವ ತನ್ನ ಮಹತ್ವಕಾಂಕ್ಷೆ ಯೋಜನೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ಇಸ್ರೋ 2 ರಾಕೆಟ್‌ಗಳನ್ನು ಬಳಸಲಿದೆ.

ನವದೆಹಲಿ: ಚಂದ್ರನ ಮೇಲಿನ ಕಲ್ಲನ್ನು ಭೂಮಿಗೆ ತರುವ ಉದ್ದೇಶ ಹೊಂದಿರುವ ತನ್ನ ಮಹತ್ವಕಾಂಕ್ಷೆ ಯೋಜನೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ಇಸ್ರೋ 2 ರಾಕೆಟ್‌ಗಳನ್ನು ಬಳಸಲಿದೆ. ಒಂದೇ ಯೋಜನೆಗೆ ಎರಡು ರಾಕೆಟ್‌ ಬಳಕೆ ಇಸ್ರೋ ಇತಿಹಾಸದಲ್ಲೇ ಮೊದಲು.

ಚಂದ್ರಯಾನ 4 ಯೋಜನೆಯಲ್ಲಿ ಇಸ್ರೋ ಎರಡು ಪ್ರತ್ಯೇಕ ರಾಕೆಟ್‌ಗಳನ್ನು ಬಳಸಲಿದೆ. ಅತ್ಯಂತ ತೂಕದ ಉಪಗ್ರಹ ಹೊತ್ತೊಯ್ಯಬಲ್ಲ ಎಲ್‌ವಿಎಂ-3 ಮತ್ತು ಇಸ್ರೋದ ಅತ್ಯಂತ ಯಶಸ್ವಿ ರಾಕೆಟ್‌ಗಳ ಪೈಕಿ ಒಂದಾದ ಪಿಎಸ್‌ಎಲ್‌ವಿ ಅನ್ನು ಎರಡು ಪ್ರತ್ಯೇಕ ದಿನಗಳಂದು ಹಾರಿಬಿಡಲಾಗುವುದು. 

ಒಂದು ವೇಳೆ ಈ ಯೋಜನೆ ಯಶಸ್ವಿಯಾದರೆ ಚಂದ್ರನಿಂದ ಮಾದರಿ ಸಂಗ್ರಹಿಸಿ ಭೂಮಿಗೆ ತಂದ 4ನೇ ದೇಶ ಭಾರತವಾಗಲಿದೆ. ಈ ಮೊದಲು ರಷ್ಯಾ, ಅಮೆರಿಕ ಮತ್ತು ಚೀನಾ ಈ ಸಾಹಸದಲ್ಲಿ ಯಶಸ್ವಿಯಾಗಿವೆ.

ಈ ಹಿಂದಿನ ಮೂರು ಚಂದ್ರಯಾನ ಯೋಜನೆಗಳಲ್ಲಿ 2-3 ಮಾಡ್ಯೂಲ್‌ಗಳು ಇರುತ್ತಿದ್ದವು. ಆದರೆ ಚಂದ್ರಯಾನ 4 ಒಟ್ಟು 5 ಬಾಹ್ಯಾಕಾಶ ಮಾಡ್ಯೂಲ್‌ (ಉಪಕರಣ) ಹೊಂದಿರಲಿದೆ. 

ಅವುಗಳೆಂದರೆ ಪ್ರೊಪಲ್ಷನ್‌ ಮಾಡ್ಯೂಲ್‌, ಡಿಸೆಂಡರ್ ಮಾಡ್ಯೂಲ್‌, ಅಸೆಂಡರ್‌ ಮಾಡ್ಯೂಲ್‌, ಟ್ರಾನ್ಸ್‌ಫರ್‌ ಮಾಡ್ಯೂಲ್‌ ಮತ್ತು ರೀ ಎಂಟ್ರಿ ಮಾಡ್ಯೂಲ್‌. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌ ಈ ಮಾಹಿತಿ ಹಂಚಿಕೊಂಡಿದ್ದಾರೆ.