ಆಪರೇಷನ್‌ ಸಿಂದೂರ ಇನ್ನೂ ಮುಗಿದಿಲ್ಲ, ಉಗ್ರ ಪೋಷಕರ ವಿರುದ್ಧ ನಮ್ಮ ದೇಶ ನಿರ್ಣಾಯಕ ಕ್ರಮ ಕೈಗೊಳ್ಳಲಿದೆ. ಈಗಾಗಲೇ ನಾವು ಪಾಕಿಸ್ತಾನದೊಳಗೆ ನುಗ್ಗಿ ಮೂರು ಬಾರಿ ದಾಳಿ ನಡೆಸಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಕೋಲ್ಕತಾ: ಆಪರೇಷನ್‌ ಸಿಂದೂರ ಇನ್ನೂ ಮುಗಿದಿಲ್ಲ, ಉಗ್ರ ಪೋಷಕರ ವಿರುದ್ಧ ನಮ್ಮ ದೇಶ ನಿರ್ಣಾಯಕ ಕ್ರಮ ಕೈಗೊಳ್ಳಲಿದೆ. ಈಗಾಗಲೇ ನಾವು ಪಾಕಿಸ್ತಾನದೊಳಗೆ ನುಗ್ಗಿ ಮೂರು ಬಾರಿ ದಾಳಿ ನಡೆಸಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಆಪರೇಷನ್‌ ಸಿಂದೂರ ಬಳಿಕ ಇದೇ ಮೊದಲ ಬಾರಿಗೆ ಪಶ್ಚಿಮ ಬಂಗಾಳದ ಅಲಿಪುರ್‌ದ್ವಾರ್‌ನಲ್ಲಿ ಗುರುವಾರ ಸಾರ್ವಜನಿಕ ರ್‍ಯಾಲಿಯೊಂದರಲ್ಲಿ ಮಾತನಾಡಿದ ಅವರು, ಭಾರತೀಯ ಮಹಿಳೆಯರ ಘನತೆಗೆ ಅವಮಾನ ಮಾಡಿದ ಭಯೋತ್ಪಾದಕರ ದಾಷ್ಟ್ರ್ಯಕ್ಕೆ ನಮ್ಮ ಸೇನಾಪಡೆ ಪ್ರತೀಕಾರ ತೀರಿಸಿಕೊಂಡಿದೆ ಎಂದು ಹೇಳಿದರು.

ಬಂಗಾಳದ ಈ ಭೂಮಿಯಲ್ಲಿ ನಿಂತು ನಾನು 140 ಕೋಟಿ ಭಾರತೀಯರ ಪರ ಘೋಷಣೆ ಮಾಡುತ್ತಿದ್ದೇನೆ. ಆಪರೇಷನ್ ಸಿಂದೂರ ಇನ್ನೂ ಮುಗಿದಿಲ್ಲ. ಏ.22ರಂದು ಪಹಲ್ಗಾಂ ದಾಳಿ ಮೂಲಕ ಉಗ್ರರು ತೋರಿದ ಬರ್ಭರತೆ ಕುರಿತು ಪಶ್ಚಿಮ ಬಂಗಾಳದಲ್ಲೂ ತೀವ್ರ ಆಕ್ರೋಶ ಮನೆ ಮಾಡಿದೆ. ನಿಮ್ಮೊಳಗಿನ ಸಿಟ್ಟು ನಾನು ಅರ್ಥಮಾಡಿಕೊಳ್ಳಬಲ್ಲೆ. ಭಯೋತ್ಪಾದಕರು ನಮ್ಮ ಸಹೋದರಿಯರ ಸಿಂದೂರ ಅಳಿಸುವ ದಾಷ್ಟ್ರ್ಯ ಮೆರೆದರು. ನಮ್ಮ ಯೋಧರು ಅವರಿಗೆ ನಮ್ಮ ಸಿಂದೂರದ ಶಕ್ತಿ ಏನೆಂದು ತೋರಿಸಿಕೊಟ್ಟರು ಎಂದರು.

ಪಹಲ್ಗಾಂ ದಾಳಿ ಬಳಿಕ ಇನ್ನು ಮುಂದೆ ನಮ್ಮ ನೆಲದಲ್ಲಿ ಯಾವುದೇ ಭಯೋತ್ಪಾದನಾ ದಾಳಿ ನಡೆದರೆ ಅದಕ್ಕೆ ಭಯೋತ್ಪಾದಕರು ಸೂಕ್ತ ಬೆಲೆ ತೆರಬೇಕಾದೀತು ಎಂಬ ಸಂದೇಶವನ್ನು ಇಡೀ ವಿಶ್ವ ಸಮುದಾಯಕ್ಕೆ ಭಾರತ ರವಾನಿಸಿದೆ. ನಾವು ಅವರ ಮನೆಗೆ ಮೂರು ಬಾರಿ (ಸರ್ಜಿಕಲ್‌ ಸ್ಟ್ರೈಕ್‌, ಬಾಲಾಕೋಟ್‌ ದಾಳಿ ಮತ್ತು ಆಪರೇಷನ್‌ ಸಿಂದೂರ ಕಾರ್ಯಾಚರಣೆ) ಪ್ರವೇಶಿಸಿ ದಾಳಿ ಮಾಡಿದ್ದೇವೆ ಎಂಬುದನ್ನು ಪಾಕಿಸ್ತಾನ ಅರ್ಥ ಮಾಡಿಕೊಳ್ಳಬೇಕು ಎಂದರು.

ಪಿಒಕೆ ಜನರು ಭಾರತಕ್ಕೆ ಮರಳುವ ದಿನ ದೂರವಿಲ್ಲ: ಸಚಿವ ರಾಜನಾಥ್‌ ಸಿಂಗ್

ನವದೆಹಲಿ: ಪಾಕಿಸ್ತಾನ ತನ್ನದೆಂದು ಬಿಗುತ್ತಿರುವ ಪಿಒಕೆ ಭಾರತದ್ದು ಎಂದು ಪುನರುಚ್ಚರಿಸಿರುವ ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರು ಭಾರತೀಯ ಕುಟುಂಬದ ಭಾಗವಾಗಿದ್ದು, ಅವರು ಸ್ವಯಂ ಪ್ರೇರಿತರಾಗಿ ಭಾರತದ ಮುಖ್ಯವಾಹಿನಿಗೆ ಮರಳುವ ದಿನ ದೂರವಿಲ್ಲ’ ಎಂದಿದ್ದಾರೆ. 

ದೆಹಲಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿವ ಸಿಂಗ್, ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರು ನಮ್ಮವರು, ಇಂದು ನಮ್ಮಿಂದ ಭೌಗೋಳಿಕ, ರಾಜಕೀಯವಾಗಿ ಬೇರ್ಪಟ್ಟಿರುವ ನಮ್ಮ ಸಹೋದರರ ಒಂದು ದಿನ ಅವರು ಭಾರತದ ಮುಖ್ಯವಾಹಿನಿಗೆ ಮರಳುತ್ತಾರೆ ಎಂಬ ಸಂಪೂರ್ಣ ನಂಬಿಕೆ ನಮಗಿದೆ’ ಎಂದರು.

‘ ಭಾರತ ಯಾವಾಗಲೂ ಹೃದಯಗಳನ್ನು ಸಂಪರ್ಕಿಸುವ ಬಗ್ಗೆ ಮಾತನಾಡುತ್ತದೆ. ಪ್ರೀತಿ, ಏಕತೆ , ಸತ್ಯದ ಹಾದಿಯಲ್ಲಿ ನಡೆಯುವ ಮೂಲಕ ನಮ್ಮದೇ ಭಾಗವಾದ ಪಿಒಕೆ ಹಿಂತಿರುಗಿ ನಾನು ಭಾರತ , ನಾನು ಮರಳಿದ್ದೇನೆ ಎಂದು ಹೇಳುವ ದಿನ ದೂರವಿಲ್ಲ’ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ಪಹಲ್ಗಾಂ ದಾಳಿ ಮೃತರಿಗೆ ಮೌನಾಚರಣೆ ನಡೆಸಿ ಸಿಯೆರಾ ಸಂಸತ್ ಗೌರವ

ನವದೆಹಲಿ: ಏ.22ರಂದು ಕಾಶ್ಮೀರದ ಪಹಲ್ಗಾಂನಲ್ಲಿ ಪಾಕ್ ಉಗ್ರರು ನಡೆಸಿದ ಪಹಲ್ಗಾಂ ನರಮೇಧದಲ್ಲಿ ಬಲಿಯಾದ 26 ನಾಗರಿಕರಿಗೆ ಸಿಯೆರಾ ಲಿಯೋನ್ ಸಂಸತ್ ಭಾರತೀಯ ಸರ್ವ ಪಕ್ಷ ನಿಯೋಗದ ಸಮ್ಮುಖದಲ್ಲಿ ಮೌನಾಚರಣೆ ನಡೆಸಿ ಗೌರವ ಸಲ್ಲಿಸಿದೆ. ಪಹಲ್ಗಾಂ ಉಗ್ರ ದಾಳಿ ಬಳಿಕ ವಿಶ್ವದ ಬಹುತೇಕ ರಾಷ್ಟ್ರಗಳು ಭಾರತದ ಪರ ನಿಂತಿರುವ ಬೆನ್ನಲ್ಲೇ ಸಿಯೆರಾ ಲಿಯೋನ್ ಈ ನಡೆ ಅನುಸರಿಸಿದೆ. 

ಪಾಕ್ ಉಗ್ರತ್ವದ ಬಣ್ಣವನ್ನು ಜಾಗತಿಕ ಮಟ್ಟದಲ್ಲಿ ಬಯಲು ಮಾಡಲು ಕೇಂದ್ರ ಸರ್ಕಾರ ಏಳು ನಿಯೋಗವನ್ನು ರಚಿಸಿತ್ತು. ಈ ಪೈಕಿ ಒಂದು ನಿಯೋಗ ಸಿಯೆರಾ ಲಿಯೋನ್‌ಗೆ ತೆರಳಿದ್ದು, ಅಲ್ಲಿ ಸರ್ವಪಕ್ಷ ನಿಯೋಗದ ಸಮ್ಮುಖದಲ್ಲಿ ಸಂಸತ್‌ನಲ್ಲಿ ಗೌರವ ಸಲ್ಲಿಕೆಯಾಗಿದೆ.