ಸಾರಾಂಶ
ಇಸ್ಲಾಮಾಬಾದ್: ಉಗ್ರವಾದ ನಿಗ್ರಹವೊಂದನ್ನು ಹೊರತುಪಡಿಸಿ, ಪಹಲ್ಗಾಂ ದಾಳಿಯ ಬಳಿಕ ಭಾರತ ತೆಗೆದುಕೊಂಡ ಪ್ರತಿಯೊಂದು ನಿರ್ಧಾರವನ್ನು ಚಾಚೂತಪ್ಪದೆ ನಕಲಿಸಿಕೊಂಡೇ ಬಂದಿರುವ ಪಾಕಿಸ್ತಾನ, ಇದೀಗ ಮತ್ತದೇ ಕೆಲಸ ಮಾಡಿದೆ.
ಉಗ್ರರ ಆಶ್ರಯದಾತ ಪಾಕಿಸ್ತಾನದ ಬಣ್ಣವನ್ನು ಜಾಗತಿಕ ಮಟ್ಟದಲ್ಲಿ ಬಯಲು ಮಾಡಲು ಭಾರತ 7 ಸರ್ವಪಕ್ಷ ಸಂಸದರ ನಿಯೋಗವನ್ನು ವಿವಿಧ ದೇಶಗಳಿಗೆ ಕಳಿಸಲು ನಿರ್ಧರಿಸಿದ ಬೆನ್ನಲ್ಲೇ ಪಾಕಿಸ್ತಾನ ಕೂಡ ರಾಜತಾಂತ್ರಿಕರ ತಂಡವನ್ನು ಪ್ರಮುಖ ರಾಷ್ಟ್ರಗಳಿಗೆ ಕಳಿಸುವುದಾಗಿ ಘೋಷಿಸಿದೆ.
ವಿದೇಶಾಂಗ ಖಾತೆಯ ಮಾಜಿ ಸಚಿವ, ಪಿಪಿಪಿ ಪಕ್ಷದ ಅಧ್ಯಕ್ಷ ಬಿಲಾವರ್ ಭುಟ್ಟೋ ಅವರೊಂದಿಗಿನ ಸಂಭಾಷಣೆಯ ಬಳಿಕ ಪ್ರಧಾನಿ ಶೆಹಬಾಜ್ ಷರೀಫ್ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಪ್ರಧಾನಿ ಕಚೇರಿ ತಿಳಿಸಿದೆ. ಈ ಬಗ್ಗೆ ಪಾಕ್ ರೇಡಿಯೋ ವರದಿ ಮಾಡಿದ್ದು, ‘ಭಾರತದ ಸಂಚನ್ನು ಜಗಜ್ಜಾಹಿರಗೊಳಿಸುವ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯ ವಿಷಯದಲ್ಲಿ ಪಾಕ್‌ನ ನಿಲುವನ್ನು ವಿವರಿಸುವ ಸಲುವಾಗಿ, ಭುಟ್ಟೋ ನೇತೃತ್ವದ ನಿಯೋಗ ಪ್ರಮುಖ ದೇಶಗಳಿಗೆ ತೆರಳಲಿದೆ’ ಎಂದು ತಿಳಿಸಿದೆ.
ಈ ನಿಯೋಗವು ಅಮೆರಿಕ, ಬ್ರಿಟನ್, ಬ್ರಸೆಲ್ಸ್, ಫ್ರಾನ್ಸ್ ಮತ್ತು ರಷ್ಯಾಗೆ ಹೋಗಲಿದೆ ಎಂದು ಉಪಪ್ರಧಾನಿಯೂ ಆಗಿರುವ ವಿದೇಶಾಂಗ ಸಚಿವ ಇಶಕ್ ದಾರ್ ಹೇಳಿದ್ದಾರೆ.
ಶನಿವಾರವಷ್ಟೇ, ಭಯೋತ್ಪಾದನೆ ವಿರುದ್ಧದ ಭಾರತದ ಶೂನ್ಯ ಸಹಿಷ್ಣುತೆಯ ಸಂದೇಶವನ್ನು ಸಾರಲು, ಎಲ್ಲಾ ಪಕ್ಷದ ಸಂಸದರನ್ನೊಳಗೊಂಡ 7 ನಿಯೋಗಗಳನ್ನು ವಿದೇಶಗಳಿಗೆ ಕಳುಹಿಸಿಕೊಡುವ ಬಗ್ಗೆ ಭಾರತ ಘೋಷಿಸಿತ್ತು.
ಭಾರತದಿಂದ ಏನೇನು ನಕಲು?
-ಪಾಕ್ ಉಗ್ರ ನೆಲೆಗಳ ಮೇಲೆ ಭಾರತ ನಡೆಸಿದ ಆಪರೇಷನ್ ಸಿಂದೂರದ ಬಗ್ಗೆ ಸೇನಾಧಿಕಾರಿಗಳು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದರು. ಅದೇ ಮಾದರಿಯಲ್ಲಿ ಪಾಕ್ ಕೂಡ ಪತ್ರಿಕಾಗೋಷ್ಠಿ ನಡೆಸಿತ್ತು.
-ತಾನು ನಾಶಪಡಿಸಿರುವುದಾಗಿ ಪಾಕ್ ಹೇಳಿಕೊಳ್ಳುತ್ತಿದ್ದ ಅಂಬಾಲಾ ವಾಯುನೆಲೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಕೊಟ್ಟ ಮರುದಿನ ಪಾಕ್ ಪ್ರಧಾನಿ ಷರೀಫ್ ಕೂಡ ಸಿಯಾಲ್‌ಕೋಟ್ ವಾಯುನೆಲೆಗೆ ಹೋಗಿದ್ದರು.
-ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಮಾನ ಹರಾಜು ಹಾಕಲು ಭಾರತ ವಿದೇಶಗಳಿಗೆ 7 ನಿಯೋಗಗಳನ್ನು ಕಳಿಸಿಕೊಡುತ್ತಿದ್ದು, ಪಾಕಿಸ್ತಾನ ಕೂಡ ಅದೇ ಹಾದಿ ಹಿಡಿದಿದೆ.