ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ರಾಜೀನಾಮೆಗೆ ಆಗ್ರಹಿಸಿ ಮೊದಲ 2 ದಿನ ತೀವ್ರ ಸ್ವರೂಪದಲ್ಲಿ ಪ್ರತಿಭಟಿಸಿದ್ದ ಇಂಡಿಯಾ ಕೂಟದ ನಾಯಕರು, 3ನೇ ದಿನವಾದ ಗುರುವಾರ ಮಹಾತ್ಮ ಗಾಂಧಿ ಸ್ಮಾರಕದ ಬಳಿ ಶಾಂತಿಯುತವಾಗಿ ಪ್ರತಿಭಟಿಸಿದ್ದಾರೆ.

- ರಾಜ್‌ಘಾಟ್‌ನ ಗಾಂಧಿ ಸ್ಮಾರಕದ ಬಳಿ ಧರಣಿ

- ಇಂದೂ ಹೋರಾಟ ಮುಂದುವರಿಕೆಗೆ ನಿರ್ಧಾರ

ಪಿಟಿಐ ನವದೆಹಲಿ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ರಾಜೀನಾಮೆಗೆ ಆಗ್ರಹಿಸಿ ಮೊದಲ 2 ದಿನ ತೀವ್ರ ಸ್ವರೂಪದಲ್ಲಿ ಪ್ರತಿಭಟಿಸಿದ್ದ ಇಂಡಿಯಾ ಕೂಟದ ನಾಯಕರು, 3ನೇ ದಿನವಾದ ಗುರುವಾರ ಮಹಾತ್ಮ ಗಾಂಧಿ ಸ್ಮಾರಕದ ಬಳಿ ಶಾಂತಿಯುತವಾಗಿ ಪ್ರತಿಭಟಿಸಿದ್ದಾರೆ.

ಮಧ್ಯಾಹ್ನ ಇಂಡಿಯಾ ನಾಯಕರಿಗೆ ಸತತ 2ನೇ ದಿನವೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕನಾಟ್‌ ಪ್ಲೇಸ್‌ನಲ್ಲಿನ ಹೋಟೆಲ್‌ನಲ್ಲಿ ಮಧ್ಯಾಹ್ನದ ಭೋಜನ ಉಣಬಡಿಸಿದರು. ಬಳಿಕ ವಿಪಕ್ಷಗಳ ನಾಯಕರು ರಾಜ್‌ಘಾಟ್‌ನಲ್ಲಿರುವ ಮಹಾತ್ಮ ಗಾಂಧಿಯವರ ಸ್ಮಾರಕದ ಬಳಿ ತೆರಳಿ ‘ಬಿಜೆಪಿ ಸರ್ಕಾರ ಮತ್ತು ಮುಖ್ಯ ಚುನಾವಣಾ ಆಯುಕ್ತರಿಗೆ ಸದ್ಬುದ್ಧಿ ಸಿಗಲಿ’ ಎಂದು ಪ್ರಾರ್ಥಿಸಿದರು. ಸ್ಮಾರಕಕ್ಕೆ ಪುಷ್ಪ ನಮನವನ್ನೂ ಸಲ್ಲಿಸಿದರು. ನಂತರ ಅಲ್ಲಿಯೇ ಕುಳಿತು ಶಾಂತಿಯುತ ಪ್ರತಿಭಟನೆ ನಡೆಸಿದರು.

ಮೈತ್ರಿಕೂಟದ ನಾಯಕರು ಶುಕ್ರವಾರವೂ ತಮ್ಮ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ. ಬೆಳಿಗ್ಗೆ ಸಂಸತ್ ಭವನದಲ್ಲಿ ಸಭೆ ಸೇರುವ ಸಾಧ್ಯತೆಯಿದೆ. ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ ಹೋರಾಟವನ್ನು ಮುಂದುವರಿಸುವುದಾಗಿ ಹಲವು ನಾಯಕರು ಹೇಳಿದ್ದಾರೆ.