ಸಾರಾಂಶ
ನವದೆಹಲಿ: ವಕ್ಫ್ ತಿದ್ದುಪಡಿ ಕುರಿತ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್‌ಗೆ ಕೆಲ ವಿರೋಧ ಪಕ್ಷದ ಸಂಸದರು ಬೆದರಿಕೆ ಹಾಕಿದ್ದಾರೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಲೋಕಸಭಾ ಸ್ವೀಕರ್ ಓಂ ಬಿರ್ಲಾರಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ, ‘ಅನ್ವರ್ ಮಾಣಿಪ್ಪಾಡಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದ 2012ರ ಅವಧಿಯಲ್ಲಿ 2 ಲಕ್ಷ ಕೋಟಿ ರು. ಮೌಲ್ಯವುಳ್ಳ ಸುಮಾರು 2000 ಎಕರೆ ವಕ್ಫ್ ಭೂಮಿ ಅತಿಕ್ರಮಣ ಆರೋಪಿಸಿ ವರದಿ ಸಲ್ಲಿಸಿದ್ದರು. ಅ.14ರಂದು ಜೆಪಿಸಿ ಸಭೆಯಲ್ಲಿ ಮಾಣಿಪ್ಪಾಡಿ ಈ ವಿಚಾರ ಪ್ರಸ್ತಾಪಿಸುತ್ತಲೇ ಪ್ರತಿಕ್ಷದ ನಾಯಕರು ಕಲಾಪಕ್ಕೆ ಅಡ್ಡಿಪಡಿಸಿದರು. ಜೊತೆಗೆ, ಸಮಿತಿಯ ದಾಖಲೆಗಳನ್ನು ಹರಿದು ಹಾಕಿದರು. ಅಲ್ಲದೇ ಮಾಣಿಪ್ಪಾಡಿ ಮತ್ತು ಜಗದಾಂಬಿಕಾ ಪಾಲ್ ಕುಳಿತಿದ್ದ ಸ್ಥಳಕ್ಕೆ ತೆರಳಿ ಬೆದರಿಕೆ ಹಾಕಿದ್ದಾರೆ’ ಎಂದು ತೇಜಸ್ವಿ ಸೂರ್ಯ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಉತ್ತರಾಖಂಡ: ಯುಸಿಸಿ ಜಾರಿ ಕುರಿತ ಕರಡು ಸಿಎಂಗೆ ಸಲ್ಲಿಕೆ
ಡೆಹರಾಡೂನ್: ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ಸಂಬಂಧ ರೂಪಿಸಲಾದ ನಿಯಮಗಳ ಕರಡು ಪ್ರತಿಯನ್ನು ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಶುಕ್ರವಾರ ಸಲ್ಲಿಸಲಾಯಿತು. ಅದನ್ನು ಸ್ವೀಕರಿಸಿದ ಧಾಮಿ, ಸಮಾಜದ ಎಲ್ಲಾ ವರ್ಗದವರಿಗೂ ಸಮಾನತೆ ಹಾಗೂ ಮಹಿಳಾ ಸಬಲೀಕರಣ ಇದರ ಉದ್ದೇಶವಾಗಿದೆ ಎಂದರು.
ರಾಜ್ಯ ಸರ್ಕಾರದ ಪರಿಶೀಲನೆಯ ಬಳಿಕ ಕರಡನ್ನು ಸಚಿವ ಸಂಪುಟದಲ್ಲಿ ಪ್ರಸ್ತಾಪಿಸಲಾಗುವುದು. ಅಲ್ಲಿ ಅನುಮೋದನೆ ದೊರೆತು ಕಾಯ್ದೆ ಜಾರಿಯಾದರೆ, ಉತ್ತರಾಖಂಡ ಯುಸಿಸಿ ಜಾರಿಗೊಳಿಸಿದ ಮೊದಲ ರಾಜ್ಯ ಎನಿಸಿಕೊಳ್ಳಲಿದೆ. ‘ವಿವಾಹ ನೊಂದಣಿ- ವಿಚ್ಚೇದನ, ಉತ್ತರಾಧಿಕಾರ, ಲಿವ್-ಇನ್ ಸಂಬಂಧ, ಹುಟ್ಟು- ಸಾವುಗಳ ಬಗೆಗಿನ ನಿಯಮಗಳನ್ನು ಇದು ಒಳಗೊಂಡಿದೆ. ಇದನ್ನು ಒಂದು ಸಮುದಾಯವನ್ನು ಗುರಿಯಾಗಿಸಿ ರೂಪಿಸಿಲ್ಲ’ ಎಂದು ಧಾಮಿ ಹೇಳಿದರು. 2022ರ ವಿಧಾನಸಭಾ ಚುನಾವಣೆ ವೇಳೆ ಸಿಎಂ ಧಾಮಿ ನೀಡಿದ್ದ ಭರವಸೆಗಳಲ್ಲಿ ಯುಸಿಸಿ ಅನುಷ್ಠಾನ ಪ್ರಮುಖವಾಗಿತ್ತು.
1 ಕೋಟಿ ರು. ಕಳ್ಳತನ ಪ್ರಕರಣ ಭೇದಿಸಿದ ಪೊಲೀಸ್ ನಾಯಿ!
ಅಹಮದಾಬಾದ್: 1.07 ಕೋಟಿ ರು. ಮೌಲ್ಯದ ಕಳ್ಳತನ ಪ್ರಕರಣ ಭೇದಿಸಿದ ಡಾಬರ್‌ಮನ್ ಪೊಲೀಸ್ ನಾಯಿಯು, ಇಬ್ಬರು ಕಳ್ಳರ ಪತ್ತೆ ಮಾಡಲು ಪೊಲೀಸರಿಗೆ ಸಹಕರಿಸಿದ ಪ್ರಸಂಗ ಗುಜರಾತ್‌ನ ಅಹಮದಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಪೊಲೀಸ್ ನಾಯಿ ‘ಪೆನ್ನಿ’ ಸಹಾಯದಿಂದ ಕಳವಾದ ಎಲ್ಲ ಹಣ ಜಪ್ತು ಮಾಡಿ ಬುಢಾ ಸೋಲಂಕಿ ಹಾಗೂ ವಿಕ್ರಂ ಸೋಲಂಕಿ ಎಂಬ ಇಬ್ಬರನ್ನು ಬಂಧಿಸಲಾಗಿದೆ. ಸರ್ಗಾವಾಲಾ ಗ್ರಾಮದ ಗ್ರಾಮದ 52 ವರ್ಷದ ರೈತನೊಬ್ಬ ಜಮೀನು ಮಾರಿ ಬಂದ 1.07 ಕೋಟಿ ರು. ಹಣ ಮನೆಯಲ್ಲಿ ಇಟ್ಟಿದ್ದ. ಇತ್ತೀಚೆಗೆ ಆತ ಮನೆ ಬೀಗ ಹಾಕಿ ಊರಿಗೆ ಹೋಗಿದ್ದ ವೇಳೆ ಈ ವಿಷಯ ತಿಳಿದಿದ್ದ ಬುಢಾ ಹಾಗೂ ವಿಕ್ರಂ, ಮನೆಗೆ ಕನ್ನ ಹಾಕಿ ಹಣವನ್ನು ಕದ್ದಿದ್ದರು. ಆಗ ಪೊಲೀಸರು ನಾಯಿ ಬಳಸಿ ತನಿಖೆ ಆರಂಭಿಸಿದಾಗ ಅದು ಬುಢಾ ಮನೆ ಬಳಿ ನಿಂತಿತು ಹಾಗೂ ಆತನನ್ನು ಮೂಸಿ ಬೊಗಳಿತು. ವಿಚಾರಣೆ ವೇಳೆ ಬುಢಾ ತಪ್ಪೊಪ್ಪಿಕೊಂಡಿದ್ದು, ಕೃತ್ಯಕ್ಕೆ ವಿಕ್ರಂ ಸಹಕರಿಸಿದ್ದಾಗಿ ಹೇಳಿದ್ದಾನೆ. ಇಬ್ಬರೂ ಹಂಚಿಕೊಂಡಿದ್ದ ತಲಾ 53.50 ಲಕ್ಷ ರು. (ಒಟ್ಟು 1.07 ಕೋಟಿ ರು.) ವಶಪಡಿಸಿಕೊಳ್ಳಲಾಗಿದೆ.
ಸುಪ್ರೀಂಕೋರ್ಟ್ ಎಲ್ಲಾ ಪೀಠಗಳ ಕಲಾಪವೂ ಇದೀಗ ನೇರ ಪ್ರಸಾರ
ನವದೆಹಲಿ: ಈವರೆಗೂ ಯೂಟ್ಯೂಬ್ ಮೂಲಕ, ಆಯ್ದ ಪೀಠಗಳ ತನ್ನ ಕಾರ್ಯಕಲಾಪಗಳ ನೇರಪ್ರಸಾರ ಮಾಡುತ್ತಿದ್ದ ಸುಪ್ರೀಂಕೋರ್ಟ್, ಶುಕ್ರವಾರದಿಂದ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಎಲ್ಲಾ ಪೀಠಗಳ ಕಲಾಪಗಳ ನೇರಪ್ರಸಾರವನ್ನು ಪ್ರಾಯೋಗಿಕವಾಗಿ ಆರಂಭಿಸಿದೆ. ಶುಕ್ರವಾರ ಎಲ್ಲ 6 ಕೋರ್ಟ್ ರೂಂಗಳ ನೇರಪ್ರಸಾರ ನಡೆಯಿತು.
ಇದುವರೆಗೂ ಕೋರ್ಟ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಸಂವಿಧಾನ ಪೀಠದ ಪ್ರಕ್ರಿಯೆಗಳು ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ವಿಚಾರಣೆಗಳನ್ನು ಲೈವ್-ಸ್ಟ್ರೀಮ್ ಮಾಡುತ್ತಿತ್ತು. ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಅನ್ನು ಹ್ಯಾಕ್ ಮಾಡಲಾಗಿತ್ತು. ಆದರೆ ಇದೀಗ https://appstreaming.sci.gov.in ವೆಬ್‌ಸೈಟ್‌ನಲ್ಲಿ ತನ್ನ ಎಲ್ಲಾ ಕಲಾಪಗಳ ನೇರಪ್ರಸಾರವನ್ನು ಅದು ಆರಂಭಿಸಿದೆ.ದೇಶದ ಸಾಮಾನ್ಯ ನಾಗರಿಕರಿಗೆ ನ್ಯಾಯಾಂಗ ವಿಚಾರಣೆಗಳ ಪಾರದರ್ಶಕತೆ ತರಲು ಹಾಗೂ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಹೆಚ್ಚು ಜನರನ್ನು ಪಾಲ್ಗೊಳ್ಳುವಂತೆ ಮಾಡಲು ತಾನು ಕಲಾಪದ ನೇರಪ್ರಸಾರ ಮಾಡುತ್ತಿದ್ದೇನೆ ಎಂದು ಕೋರ್ಟ್ ಹೇಳಿದೆ.
ಇದೇ ವೇಳೆ ನೇರಪ್ರಸಾರಕ್ಕೆ ಪ್ರತ್ಯೇಕ ಆ್ಯಪ್ ಕೂಡಾ ಅಭಿವೃದ್ಧಿಪಡಿಸಿದ್ದು, ಅದರ ಪ್ರಾಯೋಗಿಕ ಪರೀಕ್ಷೆಯೂ ನಡೆಯುತ್ತಿದೆ ಎನ್ನಲಾಗಿದೆ.