ಕಾಂಗ್ರೆಸ್ ನೇತೃತ್ವದಲ್ಲಿ ದೆಹಲಿಯಲ್ಲಿ ಸಭೆ ಸೇರಿದ ಇಂಡಿ ಒಕ್ಕೂಟದ 25 ಪ್ರತಿಪಕ್ಷಗಳ ನಾಯಕರು ಮತದಾರರ ವಿಶೇಷ ಪಟ್ಟಿ ಪರಿಷ್ಕರಣೆ (ಎಸ್‌ಐಆರ್), ಮತಚೋರಿ ವಿಚಾರವಾಗಿ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿಗೆ ಪತ್ರ
ನವದೆಹಲಿ: ಕಾಂಗ್ರೆಸ್ ನೇತೃತ್ವದಲ್ಲಿ ದೆಹಲಿಯಲ್ಲಿ ಸಭೆ ಸೇರಿದ ಇಂಡಿ ಒಕ್ಕೂಟದ 25 ಪ್ರತಿಪಕ್ಷಗಳ ನಾಯಕರು ಮತದಾರರ ವಿಶೇಷ ಪಟ್ಟಿ ಪರಿಷ್ಕರಣೆ (ಎಸ್‌ಐಆರ್), ಮತಚೋರಿ ವಿಚಾರವಾಗಿ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿಗೆ ಪತ್ರ ಬರೆಯುವುದು, ನೀಟ್, ಸಿಬಿಎಸ್‌ಇ ಪರೀಕ್ಷಾ ವೈಫಲ್ಯಕ್ಕಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸುವುದು ಸೇರಿ ಐದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.
ಸಭೆ ಬಳಿಕ ಈ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ವಿಚಾರ ತಿಳಿಸಿದರು. ಆಡಳಿತಾರೂಢ ಪಕ್ಷ ಬಿಜೆಪಿಯನ್ನು ಸಂಘಟಿತವಾಗಿ ಎದುರಿಸಲು ಇದೇ ವೇಳೆ ಪ್ರತಿಪಕ್ಷಗಳು ನಿರ್ಧಾರ ಕೈಗೊಂಡಿವೆ. ಈ ನಿಟ್ಟಿನಲ್ಲಿ ಪರಸ್ಪರ ಸಮನ್ವಯ, ಸಹಕಾರ ಹೆಚ್ಚಿಸಲೂ ನಿರ್ಧಾರ ಕೈಗೊಂಡಿವೆ ಎಂದು ತಿಳಿಸಿದ್ದಾರೆ.
ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ ಅವರ ಮನವಿಯಂತೆ ಈ ಸಭೆ ಕರೆಯಲಾಗಿದ್ದು, ಮೋದಿ ಸರ್ಕಾರದ ನಡೆಗಳ ಕುರಿತು ಸಭೆಯಲ್ಲಿ ತೀವ್ರ ಚರ್ಚೆ ನಡೆಸಲಾಯಿತು. ಡಿಎಂಕೆ ಹಾಗೂ ಆಮ್ ಆದ್ಮಿ ಪಕ್ಷವು ಈ ಸಭೆಯಿಂದ ಅಂತರ ಕಾಯ್ದುಕೊಂಡಿದ್ದು, ಕಾಂಗ್ರೆಸ್, ಸಮಾಜವಾದಿ ಪಕ್ಷ, ಎಡಪಕ್ಷಗಳು ಸೇರಿ 25 ಪಕ್ಷಗಳು ಈ ಸಭೆಯಲ್ಲಿ ಪಾಲ್ಗೊಂಡಿವೆ. ಶಿವಸೇನೆಯ ಉದ್ಧವ್ ಠಾಕ್ರೆ ಮತ್ತು ಜೆಎಂಎಂನ ಹೇಮಂತ್ ಸೊರೇನ್ ಅವರು ವರ್ಚುಯಲ್ ಆಗಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್, ತೇಜಸ್ವಿ ಯಾದವ್, ಒಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಸೇರಿ ಹಲವು ಪ್ರಮುಖ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ನಾಯಕರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಮುಂದೆ ಪ್ರತಿ 2 ತಿಂಗಳಿಗೊಮ್ಮೆ ಸಭೆ ಸೇರಲು ನಿರ್ಧರಿಸಲಾಗಿದೆ. ಹೈದರಾಬಾದ್‌ನಲ್ಲಿ ಆಗಸ್ಟ್‌ನಲ್ಲಿ ನಡೆಯಲಿರುವ ಸಭೆಯ ದಿನಾಂಕವನ್ನು ಮುಂದಿನ ದಿನಗಳಲ್ಲಿ ಅಂತಿಮಗೊಳಿಸಲಾಗುವುದು ಎಂದು ಎಂದು ಖರ್ಗೆ ತಿಳಿಸಿದ್ದಾರೆ. =
ಇಂಡಿ ಒಕ್ಕೂಟದ ಸಭೆಯ ಪ್ರಮುಖ 5 ನಿರ್ಧಾರಗಳು
1 ಎಸ್‌ಐಆರ್, ಮತಚೋರಿ ಹಾಗೂ ಚುನಾವಣಾ ಕಳ್ಳತನ ಕುರಿತು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿಗೆ ಶೀಘ್ರ ಪತ್ರ ಬರೆಯುವುದು.
2 ಲಕ್ಷಾಂತರ ಯುವಕರಿಗೆ ಅನ್ಯಾಯ ಮಾಡಿದ ನೀಟ್ ಹಾಗೂ ಸಿಬಿಎಸ್‌ಇ ಪರೀಕ್ಷಾ ವೈಫಲ್ಯಗಳಿಗಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಕ್ಷಣ ರಾಜೀನಾಮೆ ನೀಡುವಂತೆ ಆಗ್ರಹ
3 ದೇಶದ ಸದ್ಯದ ಅನಿಶ್ಚಿತ ಆರ್ಥಿಕ ಪರಿಸ್ಥಿತಿ ಕುರಿತು ಚರ್ಚಿಸಲು ಸರ್ವಪಕ್ಷಗಳ ಸಭೆ ಕರೆಯಬೇಕು. ನಿರುದ್ಯೋಗ, ಬೆಲೆಏರಿಕೆ, ರೈತರು ಹಾಗೂ ಸಮಾಜದ ಧಮನಿತ ವರ್ಗಗಳ ಕುರಿತ ವಿಚಾರದ ಕುರಿತೂ ಚರ್ಚೆ ನಡೆಸಲು ಸರ್ವ ಪಕ್ಷಗಳ ಸಭೆ ಕರೆಯಲು ಕೇಂದ್ರಕ್ಕೆ ಒತ್ತಾಯ
4 ಮುಂಗಾರು ಅಧಿವೇಶನದ ವೇಳೆ ಇಂಡಿ ಒಕ್ಕೂಟದ ನಡುವೆ ಸುಲಲಿತ ಸಮನ್ವಯ ಸಾಧಿಸುವುದು, ಇದಕ್ಕಾಗಿ ಪ್ರತಿಪಕ್ಷ ನಾಯಕನ ಕಚೇರಿಯಲ್ಲಿ ಆಗಾಗ್ಗೆ ಸಭೆ ಸೇರಲು ನಿರ್ಧಾರ
5 ಪ್ರತಿಪಕ್ಷಗಳ ಗುಂಪಿನ ನಾಯಕರು ಇನ್ನು ಪ್ರತಿ 2 ತಿಂಗಳಿಗೊಮ್ಮೆ ಸಭೆ ಸೇರಲು ತೀರ್ಮಾನ, ಮುಂದಿನ ಸಭೆಯನ್ನು ಹೈದರಾಬಾದ್‌ನಲ್ಲಿ ಆಗಸ್ಟ್‌ನಲ್ಲಿ ನಡೆಸಲು ತೀರ್ಮಾನ.


