ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸಕ್ಕೆ ಭುಗಿಲೆದ್ದ ಆಕ್ರೋಶ । ದೇಶವ್ಯಾಪಿ ಜನರ ಕೂಗು ಒಂದೇ

| N/A | Published : Apr 24 2025, 07:25 AM IST

Arif Masood with supporters protest over the Pahalgam terrorist attack
ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸಕ್ಕೆ ಭುಗಿಲೆದ್ದ ಆಕ್ರೋಶ । ದೇಶವ್ಯಾಪಿ ಜನರ ಕೂಗು ಒಂದೇ
Share this Article
  • FB
  • TW
  • Linkdin
  • Email

ಸಾರಾಂಶ

  ಪ್ರವಾಸಿಗರನ್ನು ಕೈಬೀಸಿ ತನ್ನತ್ತ ಕರೆಯುತ್ತಿದ್ದ ಜಮ್ಮು- ಕಾಶ್ಮೀರದಲ್ಲಿ ಮತ್ತೆ ಉಗ್ರರ ಬಂದೂಕು ಸದ್ದು ಮಾಡಿದ್ದು, 26 ಪ್ರವಾಸಿಗರನ್ನು ಬಲಿ ಪಡೆದಿದೆ. ಇದರ ವಿರುದ್ಧ ದೇಶಾದ್ಯಂತ ಜನಾಕ್ರೋಶ ಭುಗಿಲೆದ್ದಿದೆ. ಪಾಕ್‌ ಬೆಂಬಲಿತ ಉಗ್ರರ ವಿರುದ್ಧ ವಿದೇಶಗಳಲ್ಲೂ ಕೂಗು ಎದ್ದಿದೆ.

ನವದೆಹಲಿ: 370ನೇ ವಿಧಿ ರದ್ದತಿಯ ಬಳಿಕ ಶಾಂತವಾಗಿ, ಪ್ರವಾಸಿಗರನ್ನು ಕೈಬೀಸಿ ತನ್ನತ್ತ ಕರೆಯುತ್ತಿದ್ದ ಜಮ್ಮು- ಕಾಶ್ಮೀರದಲ್ಲಿ ಮತ್ತೆ ಉಗ್ರರ ಬಂದೂಕು ಸದ್ದು ಮಾಡಿದ್ದು, 26 ಪ್ರವಾಸಿಗರನ್ನು ಬಲಿ ಪಡೆದಿದೆ. ಇದರ ವಿರುದ್ಧ ದೇಶಾದ್ಯಂತ ಜನಾಕ್ರೋಶ ಭುಗಿಲೆದ್ದಿದೆ. ಪಾಕ್‌ ಬೆಂಬಲಿತ ಉಗ್ರರ ವಿರುದ್ಧ ವಿದೇಶಗಳಲ್ಲೂ ಕೂಗು ಎದ್ದಿದೆ.

2016ರಲ್ಲಿ ಉರಿ ದಾಳಿ ಬಳಿಕ ನಡೆಸಲಾದ ಸರ್ಜಿಕಲ್‌ ಸ್ಟ್ರೈಕ್‌ ಹಾಗೂ 2019ರಲ್ಲಿ ಪುಲ್ವಾಮಾ ದಾಳಿ ಬಳಿಕ ಮಾಡಲಾದ ಬಾಲಾಕೋಟ್‌ ವಾಯು ದಾಳಿ ರೀತಿಯಲ್ಲೇ ಈ ಸಲವೂ ಉಗ್ರರ ಮೇಲೆರಗಿ ಬಿಸಿ ಮುಟ್ಟಿಸಬೇಕು. 26 ಜನರ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಬೇಕು ಎಂಬ ಬಲವಾದ ಆಗ್ರಹ ದೇಶಾದ್ಯಂತ ಕೇಳಿಬಂದಿದೆ. ಈ ಸಂಬಂಧ ಬುಧವಾರ ಭಾರತದಾದ್ಯಂತ ಪ್ರತಿಭಟನೆ, ಮೆರವಣಿಗೆ, ಖಂಡನಾ ಸಭೆಗಳು ನಡೆದಿವೆ. 35 ವರ್ಷ ಬಳಿಕ ಮೊದಲ ಬಾರಿ ಕಾಶ್ಮೀರದಲ್ಲೂ ಬಂದ್‌ ಆಚರಿಸಿ ಉಗ್ರರ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಘಿದೆ.

ಇದಕ್ಕೆ ತಕ್ಕುದಾಗಿ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು, ‘ಉಗ್ರರನ್ನು ಮಾತ್ರವಲ್ಲ, ಅವರಿಗೆ ತೆರೆಮರೆಯಲ್ಲಿ ಕುಮ್ಮಕ್ಕು ನೀಡಿದವರನ್ನೂ ಬಿಡುವುದಿಲ್ಲ’ ಎಂದಿದ್ದಾರೆ. ಅಲ್ಲದೆ, ಸೌದಿ ಅರೇಬಿಯಾ ಪ್ರವಾಸ ಮೊಟಕುಗೊಳಿಸಿ ಭಾರತಕ್ಕೆ ಮರಳಿದ ಪ್ರಧಾನಿ ನರೇಂದ್ರ ಮೋದಿ ಅವರು 2 ಉನ್ನತ ಮಟ್ಟದ ಸಭೆಗಳನ್ನು ನಡೆಸಿದ್ದಾರೆ. ಅವರ ಮುಂದಿನ ನಡೆ ಕುತೂಹಲ ಕೆರಳಿಸಿದೆ.

ಹೀಗಾಗಿ ಭಾರತ ಮುಂದಿನ ದಿನಗಳಲ್ಲಿ ಉಗ್ರರ ಮೇಲೆ ಭಾರಿ ಪ್ರಮಾಣದ ದಾಳಿ ಆರಂಭಿಸಬಹುದೇ ಎಂಬ ಗುಮಾನಿ ಉಂಟಾಗಿದೆ.

ಒಂದು ಕಡೆ ಉಗ್ರವಾದಕ್ಕೆ ಪ್ರಾಣ ತೆತ್ತವರ ಪರಿವಾರಗಳ ನರಳಾಟವನ್ನು ನೋಡಿ ಮಮ್ಮಲ ಮರುಗುತ್ತಿರುವ ಭಾರತೀಯರು, ಮತ್ತೊಂದಡೆ ಉಗ್ರಪೋಷಕ ಪಾಕಿಸ್ತಾನದ ವಿರುದ್ಧ ಕಠಿಣಾತಿಕಠಿಣ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ.