ಜಮ್ಮು: ಮೇಘಸ್ಫೋಟದಿಂದ ಪ್ರವಾಹ, 3 ಬಲಿ : ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಸಂಚಾರ ಸ್ಥಗಿತ

| N/A | Published : Apr 21 2025, 12:57 AM IST / Updated: Apr 21 2025, 06:14 AM IST

ಸಾರಾಂಶ

ಜಮ್ಮು-ಕಾಶ್ಮೀರದ ರಾಂಬನ್‌ ಜಿಲ್ಲೆಯಲ್ಲಿ ಮೇಘಸ್ಫೋಟದ ಪರಿಣಾಮ ಭಾನುವಾರ ಸುರಿದ ಭಾರೀ ಮಳೆಯಿಂದ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಣಾಮವಾಗಿ 3 ಜನ ಸಾವನ್ನಪ್ಪಿದ್ದು, 100ಕ್ಕೂ ಅಧಿಕ ಜನರನ್ನು ರಕ್ಷಿಸಲಾಗಿದೆ.

ರಾಂಬನ್‌/ ಜಮ್ಮು: ಜಮ್ಮು-ಕಾಶ್ಮೀರದ ರಾಂಬನ್‌ ಜಿಲ್ಲೆಯಲ್ಲಿ ಮೇಘಸ್ಫೋಟದ ಪರಿಣಾಮ ಭಾನುವಾರ ಸುರಿದ ಭಾರೀ ಮಳೆಯಿಂದ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಣಾಮವಾಗಿ 3 ಜನ ಸಾವನ್ನಪ್ಪಿದ್ದು, 100ಕ್ಕೂ ಅಧಿಕ ಜನರನ್ನು ರಕ್ಷಿಸಲಾಗಿದೆ.

ಶನಿವಾರವೂ ಸಿಡಿಲು ಬಡಿದು ಓರ್ವ ಮಹಿಳೆ ಸೇರಿ 2 ಸಾವನ್ನಪ್ಪಿದ್ದು, ಕಳೆದೆರಡು ದಿನದಲ್ಲಿ ಜಮ್ಮುವಿನಲ್ಲಿ ಮಳೆಯಿಂದಾಗಿ ಮೃತಪಟ್ಟವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.

ಮೇಘಸ್ಫೋಟದೊಂದಿಗೆ ವೇಗವಾಗಿ ಬೀಸುವ ಗಾಳಿ, ಭೂಕುಸಿತ, ಆಲಿಕಲ್ಲು ಮಳೆಯೂ ಸಂಭವಿಸಿದ್ದು, ಧರಂ ಕುಂಡ್‌ ಗ್ರಾಮದಲ್ಲಿ 10 ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿದೆ. 40ಕ್ಕೂ ಅಧಿಕ ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಹಲವು ವಾಹನಗಳೂ ಕೊಚ್ಚಿಕೊಂಡು ಹೋಗಿವೆ. ಸುರಿಯುತ್ತಿದ್ದ ಧಾರಾಕಾರ ಮಳೆಯ ನಡುವೆಯೂ ಪೊಲೀಸರು ರಕ್ಷಣಾ ಕಾರ್ಯ ಕೈಗೊಂಡಿದ್ದು, 100ಕ್ಕೂ ಅಧಿಕ ಮಂದಿಯನ್ನು ರಕ್ಷಿಸಲಾಗಿದೆ. ಹೆದ್ದಾರಿ ಬಂದ್:

ಅತ್ತ ಜಮ್ಮು-ಶ್ರೀನಗರ ನಡುವಿನ 250 ಕಿ.ಮೀ ಉದ್ದದ ಸರ್ವಋತು ರಾಷ್ಟ್ರೀಯ ಹೆದ್ದಾರಿಯ ಬಳಿ ಹಲವು ಕಡೆಗಳಲ್ಲಿ ಭೂಕುಸಿತ ಮಣ್ಣು ಕುಸಿತ ಸಂಭವಿಸಿದ್ದು, ಭಾರೀ ಬಂಡೆಗಳು ಉರುಳುತ್ತಿವೆ. ಆದಕಾರಣ, ಪರಿಸ್ಥಿತಿ ಸುಧಾರಿಸುವ ತನಕ ಆ ಮಾರ್ಗದಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.