ಸಾರಾಂಶ
ಶಿವಾನಂದ ಗೊಂಬಿ
ಹುಬ್ಬಳ್ಳಿಧಾರವಾಡ, ಗದಗ ಜಿಲ್ಲೆಗಳನ್ನು ಮಳೆಗಾಲದಲ್ಲಿ ಇನ್ನಿಲ್ಲದಂತೆ ಕಾಡುವ ಬೆಣ್ಣಿಹಳ್ಳ ಪ್ರವಾಹದ ತಡೆಗೆ ರಾಜ್ಯ ಸರ್ಕಾರ ಅಸ್ತು ಎಂದಿದೆ. ಮೊದಲ ಹಂತದಲ್ಲಿ ರಾಜ್ಯ ವಿಪತ್ತು ಉಪಶಮನ ನಿಧಿಯಡಿ ₹ 200 ಕೋಟಿ ಬಿಡುಗಡೆ ಮಾಡಿದೆ. ಇನ್ನೆರಡು ದಿನ ಕೈಗೆತ್ತಿಕೊಳ್ಳಬಹುದಾದ ಕಾಮಗಾರಿ ಅಂತಿಮಗೊಳ್ಳಲಿದ್ದು, ನಂತರ ಟೆಂಡರ್ ಕರೆದು ಕೆಲಸ ಶುರುವಾಗಲಿದೆ. ಇದು ರೈತ ಸಮುದಾಯ ಹಾಗೂ ಪ್ರವಾಹ ಪೀಡಿತ ಹಳ್ಳಿಗಳ ನಿವಾಸಿಗಳಲ್ಲಿ ಸಂತಸದ ಹೊನಲು ಹರಡಿದಂತಾಗಿದೆ.
ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ದುಂಡಸಿ ಗ್ರಾಮದಲ್ಲಿ ಉಗಮವಾಗುವ ಬೆಣ್ಣಿಹಳ್ಳ ಕುಂದಗೋಳ, ಹುಬ್ಬಳ್ಳಿ, ನವಲಗುಂದ, ನರಗುಂದ, ರೋಣ ಹೀಗೆ ಹಾವೇರಿ, ಧಾರವಾಡ, ಗದಗ ಜಿಲ್ಲೆಗಳ ಆರು ತಾಲೂಕುಗಳಲ್ಲಿ 148 ಕಿಮೀ ವ್ಯಾಪ್ತಿಯಲ್ಲಿ ಇದು ಆವರಿಸಿದೆ.ಬೇಸಿಗೆಯಲ್ಲಿ ಮೈದಾನದಂತೆ ಕಾಣುವ ಈ ಹಳ್ಳ ಮಳೆಗಾಲದಲ್ಲಿ ಮಾತ್ರ ಅಕ್ಷರಶಃ ಉಗ್ರಾವತಾರ ತಾಳುತ್ತದೆ. ಯಾವುದೇ ನದಿಗಿಂತ ತಾನೇನೂ ಕಮ್ಮಿಯಿಲ್ಲ ಎಂಬುದು ಸಾಬೀತುಪಡಿಸುತ್ತದೆ ಬೆಣ್ಣಿಹಳ್ಳ. ಈ ಆರು ತಾಲೂಕುಗಳಲ್ಲಿ ಇದು ಸೃಷ್ಟಿಸುವ ಆವಾಂತರ ಅಷ್ಟಿಷ್ಟಲ್ಲ. ಪ್ರತಿವರ್ಷ ಸಾವಿರಾರು ಎಕರೆ ಪ್ರದೇಶಗಳಲ್ಲಿ ಬೆಳೆದ ಬೆಳೆಯನ್ನೆಲ್ಲ ನುಂಗಿ ಹಾಕುತ್ತದೆ. ಎಷ್ಟೋ ರೈತರು ಪ್ರವಾಹಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡ ಉದಾಹರಣೆ ಸಾಕಷ್ಟಿವೆ. ಮಳೆಗಾಲದ ಮೂರು ತಿಂಗಳು ಹಳ್ಳದ ಸುತ್ತಮುತ್ತಲಿನ ಊರುಗಳ ಜನತೆ ನಿದ್ದೆ ಇಲ್ಲದೇ ಕಾಲಕಳೆಯುವುದು ಮಾಮೂಲು.
ಬೆಣ್ಣಿಹಳ್ಳಕ್ಕೆ ತುಪರಿಹಳ್ಳ, ರಾಡಿ ಹಳ್ಳ, ಹಂದಿಗನಳ್ಳ ಸೇರಿದಂತೆ ಏಳೆಂಟು ಹಳ್ಳಗಳು ಸೇರುತ್ತವೆ. ಎಲ್ಲವುಗಳ ಮೈದುಂಬಿ ಹರಿದು ಜನರನ್ನು ಹೈರಾಣು ಮಾಡಿರುತ್ತವೆ. ಹೀಗಾಗಿ ಬೆಣ್ಣಿಹಳ್ಳದ ಪ್ರವಾಹ ತಡೆಗೆ ಕ್ರಮಕೈಗೊಳ್ಳಿ ಎಂಬ ಕೂಗು ಇಂದು ನಿನ್ನೆಯದಲ್ಲ. ಇದಕ್ಕಾಗಿ ಸಾಕಷ್ಟು ಹೋರಾಟಗಳು ನಡೆದಿವೆ. ಈಗಲೂ ನಡೆಯುತ್ತಲೆ ಇವೆ. ರಾಜ್ಯ ಸರ್ಕಾರ ನ್ಯಾ. ಪರಮಶಿವಯ್ಯ ಆಯೋಗ ಮಾಡಿ ಅಧ್ಯಯನವನ್ನೂ ನಡೆಸಿತ್ತು. ಇದಕ್ಕೆ ಶಾಶ್ವತ ಪರಿಹಾರ ಕೈಗೊಳ್ಳುವಂತೆ ತನ್ನ ವರದಿಯನ್ನೂ ಕೊಟ್ಟಿತ್ತು.ಆದರೂ ಸರ್ಕಾರ ಮಾತ್ರ ಈ ಬಗ್ಗೆ ಹೆಚ್ಚಿನ ಗಮನ ಹರಿಸಿರಲಿಲ್ಲ. ಹಿಂದಿನ ಬಿಜೆಪಿ ಸರ್ಕಾರ ಇದ್ದಾಗ ಇದಕ್ಕೆ ಡ್ರೋಣ ಸಮೀಕ್ಷೆ, ಸೇರಿದಂತೆ ವಿವಿಧ ಹಂತಗಳಲ್ಲಿ ಮತ್ತೆ ಅಧ್ಯಯನ ನಡೆಸಿ ಶಾಶ್ವತ ಪರಿಹಾರಕ್ಕಾಗಿ ₹ 1312 ಕೋಟಿ ಡಿಪಿಆರ್ ಸಿದ್ಧಪಡಿಸಲಾಗಿತ್ತು. ಆದರೆ ಅಷ್ಟರೊಳಗೆ ಸರ್ಕಾರ ಬದಲಾಯಿತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತು. ಮತ್ತೆ ಕೊಂಚ ಮಾರ್ಪಾಡು ಮಾಡುವಂತೆ ಸೂಚನೆ ಬಂದಿದ್ದರಿಂದ ಪರಿಷ್ಕೃತ ಡಿಪಿಆರ್ ಮಾಡಿ ಸಲ್ಲಿಸಲಾಗಿತ್ತು. ₹ 1610 ಕೋಟಿ ಯೋಜನೆ ಇದಾಗಿದೆ. ಈ ಯೋಜನೆಯನ್ನು ಕೇಂದ್ರ ಜಲ ಆಯೋಗ (ಸಿಡಬ್ಲುಸಿ)ಗೆ ರಾಜ್ಯ ಸರ್ಕಾರ ಕಳುಹಿಸಲಾಗಿದೆ. ಅಲ್ಲಿಂದಲೂ ಅನುಮೋದನೆ ಗೊಳ್ಳುವ ಸಾಧ್ಯತೆ ಇದೆ. ಅಲ್ಲಿಂದ ಅನುಮೋದನೆ ಸಿಕ್ಕರೆ ಕೇಂದ್ರದ ಅನುದಾನವೂ ಯೋಜನೆಗೆ ಸಿಗಲಿದೆ.
ಇದೀಗ ರಾಜ್ಯ ಸರ್ಕಾರ ರಾಜ್ಯ ವಿಪತ್ತು ಉಪಶಮನ ನಿಧಿಯಡಿ ಮೊದಲ ಹಂತದಲ್ಲಿ ₹ 200 ಕೋಟಿ ಬಿಡುಗಡೆ ಮಾಡಿದೆ. ಅತಿ ಅವಶ್ಯಕ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಸೂಚಿಸಿದೆ. ಕರ್ನಾಟಕ ನೀರಾವರಿ ನಿಗಮವೂ ಕಾಮಗಾರಿ ಕೈಗೆತ್ತಿಕೊಳ್ಳಲು ಸಿದ್ಧತೆ ನಡೆಸಿದ್ದು, ಇನ್ನೆರಡು ದಿನಗಳಲ್ಲಿ ಕಾಮಗಾರಿಗಳು ಅಂತಿಮಗೊಳ್ಳಲಿದೆ. ಬಳಿಕ ಟೆಂಡರ್ ಕರೆದು ಕೆಲಸ ಶುರು ಮಾಡಲಾಗುವುದು ಎಂದು ನಿಗಮದ ಮೂಲಗಳು ತಿಳಿಸಿವೆ.ಮೊದಲಿಗೆ ಏನೇನು?:25 ವರ್ಷದಲ್ಲಿ ಎಷ್ಟು ಮಳೆಯಾಗಿದೆ. ಎಷ್ಟು ಪ್ರವಾಹ ಬಂದಿದೆ. ಪ್ರವಾಹ ತಡೆಯಬೇಕೆಂದರೆ ಏನೆಲ್ಲ ಕೆಲಸ ಕೈಗೆತ್ತಿಕೊಳ್ಳಬೇಕು ಎಂಬುದನ್ನು ಪರಿಶೀಲಿಸುವುದು. ಬಳಿಕ ಬೆಣ್ಣಿಹಳ್ಳದ ವ್ಯಾಪ್ತಿಯಲ್ಲಿನ ಎಲ್ಲ ಕಾಲುವೆಗಳ ಹೂಳೆತ್ತುವುದು. ಈ ಮೂಲಕ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡುವುದಾಗಿದೆ. ಇದಾದರೆ ಶೇ. 50ರಷ್ಟು ಪ್ರವಾಹವನ್ನು ತಡೆಗಟ್ಟಬಹುದಾಗಿದೆ. ಹಳ್ಳದ 3-4 ಕಿಮೀ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಅಕ್ಕಪಕ್ಕಗಳಲ್ಲಿ ಏರಿ ನಿರ್ಮಾಣ, ಬಳಿಕ ತಡೆಗೋಡೆ ಹೀಗೆ ಹಂತ-ಹಂತವಾಗಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಆದರೆ, ಮೊದಲ ಹಂತದಲ್ಲಿ ಏನೆಲ್ಲ ಕಾಮಗಾರಿ ಕೈಗೆತ್ತಿಕೊಳ್ಳಬಹುದಾಗಿದೆ ಎಂಬುದನ್ನು ಎರಡು ದಿನಗಳಲ್ಲಿ ಅಂತಿಮಗೊಳಿಸಲಾಗುವುದು ಎಂದು ಮೂಲಗಲು ತಿಳಿಸಿವೆ.
ರೈತರು ಖುಷ್:ಪ್ರತಿ ವರ್ಷ ಹೈರಾಣು ಮಾಡುತ್ತಿದ್ದ ಬೆಣ್ಣಿಹಳ್ಳದ ಪ್ರವಾಹ ತಡೆಗೆ ಸರ್ಕಾರ ₹ 200 ಕೋಟಿ ಬಿಡುಗಡೆ ಮಾಡಲು ಒಪ್ಪಿರುವುದಕ್ಕೆ ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ, ಕಾಮಗಾರಿ ಆದಷ್ಟು ಬೇಗನೆ ಶುರು ಮಾಡಬೇಕು. ಯೋಜನೆಗೆ ಕೇಂದ್ರ ಕೂಡ ಅನುದಾನ ನೀಡಬೇಕು ಎಂದು ಆಗ್ರಹಿಸುತ್ತಾರೆ.
ಒಟ್ಟಿನಲ್ಲಿ ಬೆಣ್ಣಿಹಳ್ಳದ ಪ್ರವಾಹ ತಡೆಗೆ ಸರ್ಕಾರ ಮುನ್ನುಡಿ ಬರೆದಿರುವುದು ರೈತಾಪಿ ವರ್ಗದಲ್ಲಿ ಸಂತಸವನ್ನುಂಟು ಮಾಡಿರುವುದಂತೂ ಸತ್ಯ. ಬೆಣ್ಣಿಹಳ್ಳದ ಪ್ರವಾಹ ತಡೆಗೆ ರಾಜ್ಯ ಸರ್ಕಾರ ₹ 200 ಕೋಟಿ ಬಿಡುಗಡೆ ಮಾಡಿದೆ. ಏನೇನು ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂಬುದನ್ನು ಶೀಘ್ರದಲ್ಲೇ ನಿರ್ಧರಿಸಿ ಕೈಗೆತ್ತಿಕೊಳ್ಳಲಾಗುವುದು ಎಂದು ಕರ್ನಾಟಕ ನೀರಾವರಿ ನಿಗಮದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಘವೇಂದ್ರ ಜಾಲಿಗಾರ ಹೇಳಿದರು.