ಲೂಟಿ ಆಗಿದ್ದ ₹83 ಕೋಟಿ ಮೌಲ್ಯದ 1400 ಪ್ರಾಚ್ಯ ವಸ್ತು ಅಮೆರಿಕದಿಂದ ಮರಳಿ ಭಾರತಕ್ಕೆ

| Published : Nov 17 2024, 01:21 AM IST / Updated: Nov 17 2024, 05:06 AM IST

ಸಾರಾಂಶ

ದಶಕಗಳ ಹಿಂದ ರಾಜಸ್ಥಾನ ಮತ್ತು ಮಧ್ಯಪ್ರದೇಶದ ಲೂಟಿ ಆಗಿದ್ದ 83 ಕೋಟಿ ರು. ಮೌಲ್ಯದ 1400 ಪ್ರಾಚೀನ ಕಲಾಕೃತಿಗಳನ್ನು ಭಾರತಕ್ಕೆ ಅಮೆರಿಕ ಸರ್ಕಾರ ಮರಳಿಸಿದೆ.

ನ್ಯೂಯಾರ್ಕ್‌: ದಶಕಗಳ ಹಿಂದ ರಾಜಸ್ಥಾನ ಮತ್ತು ಮಧ್ಯಪ್ರದೇಶದ ಲೂಟಿ ಆಗಿದ್ದ 83 ಕೋಟಿ ರು. ಮೌಲ್ಯದ 1400 ಪ್ರಾಚೀನ ಕಲಾಕೃತಿಗಳನ್ನು ಭಾರತಕ್ಕೆ ಅಮೆರಿಕ ಸರ್ಕಾರ ಮರಳಿಸಿದೆ. 

ಭಾರತದ ಕಾನ್ಸುಲ್‌ ಜನರಲ್‌ ಕಚೇರಿಯಲ್ಲಿ ಅಮೆರಿಕ ಅಧಿಕಾರಿಗಳು ಶನಿವಾರ ಇವನ್ನು ಹಸ್ತಾಂತರಿಸಿದ್ದಾರೆ.1980ರ ದಶಕದಲ್ಲಿ ಮಧ್ಯಪ್ರದೇಶದ ದೇವಾಲಯವೊಂದರಿಂದ ನರ್ತಕಿಯನ್ನು ಪ್ರತಿಮೆಯನ್ನು ಲೂಟಿ ಮಾಡಲಾಗಿತ್ತು. ಕಳ್ಳಸಾಗಣೆಯ ಉದ್ದೇಶಕ್ಕೆ ಕಳ್ಳರು ಪ್ರತಿಮೆಯನ್ನು 2 ಭಾಗಗಳಾಗಿ ಸೀಳಿದ್ದರು. 1992ರಲ್ಲಿ ಅದನ್ನು ಲಂಡನ್‌ನಿಂದ ಅಮೆರಿಕಗೆ ಅಕ್ರಮವಾಗಿ ಮಾರಾಟ ಮಾಡಿ ಇಲ್ಲಿನ ಮೆಟ್ರೋಪಾಲಿಟನ್‌ ಮ್ಯೂಸಿಯಂ ಆಫ್‌ ಆರ್ಟ್‌ನಲ್ಲಿ ಇರಿಸಲಾಗಿತ್ತು. 

ರಾಜಸ್ಥಾನದಲ್ಲಿ ತಾನೇಸರ್‌ ಮಾತೃದೇವತೆಯ ಶಿಲ್ಪವನ್ನು ಕೂಡ 1960ರಲ್ಲಿ ದರೋಡೆಕೋರರು ಕಳ್ಳತನ ಮಾಡಿದ್ದರು. ಆ ಪ್ರತಿಮೆಯನ್ನು ಕೂಡ ಕಳ್ಳಸಾಗಾಣಿಕೆಯ ಮೂಲಕ ಅದನ್ನು ನ್ತೂಯಾರ್ಕ್‌ನ ಇದೇ ಮ್ಯೂಸಿಯಂನಲ್ಲಿ ಇರಿಸಲಾಗಿತ್ತು. ಅವೆರಡನ್ನೂ ಆಂಟಿಕ್ವಿಟೀಸ್ ಟ್ರಾಫಿಕ್ ಯುನಿಟ್ ವಶ ಪಡಿಸಿಕೊಂಡಿತ್ತು.

 ಭಾರತದಿಂದ ಲೂಟಿ ಮಾಡಿ ಸದ್ಯ ಅಮೆರಿಕದಲ್ಲಿರುವ ಇನ್ನೂ ಸುಮಾರು 600 ಪ್ರಾಚೀನ ವಸ್ತುಗಳನ್ನು ಮುಂದಿನ ತಿಂಗಳ ಅಂತ್ಯಕ್ಕೆ ಭಾರತಕ್ಕೆ ಮರಳಿ ನೀಡುವ ಸಾಧ್ಯತೆಯಿದೆ. ಇನ್ನು ಈ ಕಳ್ಳ ಸಾಗಣೆಯ ಹಿಂದೆ ಪುರಾತನ ವಸ್ತುಗಳ ಕಳ್ಳಸಾಗಣೆದಾರ ಸುಭಾಷ್‌ ಕಪೂರ್‌ ಮತ್ತು ದರೋಡೆಕೋರ ನ್ಯಾನ್ಸಿ ವೀನರ್‌ ಸೇರಿದಂತೆ ಹಲವು ಕ್ರಿಮಿನಲ್‌ಗಳ ಹೆಸರು ಈ ಜಾಲದಲ್ಲಿ ಕೇಳಿ ಬಂದಿದ್ದು, ತನಿಖೆ ನಡೆಯುತ್ತಿದೆ.