ಕಾಸರಗೋಡಿನ ನೀಲೇಶ್ವರದ ದೇಗುಲವೊಂದರಲ್ಲಿ ತೆಯ್ಯಂ ಪ್ರದರ್ಶನ ವೇಳೆ ಪಟಾಕಿ ದುರಂತ : 150 ಜನಕ್ಕೆ ಗಾಯ

| Published : Oct 30 2024, 12:43 AM IST / Updated: Oct 30 2024, 06:25 AM IST

ಸಾರಾಂಶ

ತೆಯ್ಯಂ ಪ್ರದರ್ಶನ ವೇಳೆ ಪಟಾಕಿ ದುರಂತ ಸಂಭವಿಸಿ 150 ಮಂದಿ ಗಾಯಗೊಂಡಿರುವ ಘಟನೆ ಕೇರಳದ ಕಾಸರಗೋಡು ಜಿಲ್ಲೆಯ ನೀಲೇಶ್ವರದ ದೇಗುಲವೊಂದರಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ

 ಕಾಸರಗೋಡು :  ತೆಯ್ಯಂ ಪ್ರದರ್ಶನ ವೇಳೆ ಪಟಾಕಿ ದುರಂತ ಸಂಭವಿಸಿ 150 ಮಂದಿ ಗಾಯಗೊಂಡಿರುವ ಘಟನೆ ಕೇರಳದ ಕಾಸರಗೋಡು ಜಿಲ್ಲೆಯ ನೀಲೇಶ್ವರದ ದೇಗುಲವೊಂದರಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ. ಈ ಪೈಕಿ 10 ಮಂದಿಗೆ ಶೇ.80ರಷ್ಟು ಸುಟ್ಟ ಗಾಯಗಳಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನೀಲೇಶ್ವರ ಬಳಿ ಇರುವ ವೀರರ್‌ಕಾವು ದೇಗುಲದಲ್ಲಿ ಈ ಘಟನೆ ನಡೆದಿದೆ. ತೆಯ್ಯಂ ಪ್ರದರ್ಶನ ವೇಳೆ ಅಪಾರ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಈ ವೇಳೆ ಪಟಾಕಿ ಸಿಡಿಸಲಾಗುತ್ತಿತ್ತು. ಆಗ ಪಟಾಕಿ ಕಿಡಿ, ಉತ್ಸವಕ್ಕಾಗಿ ತಂದು ಶೇಖರಿಸಿಡಲಾಗಿದ್ದ ಅಪಾರ ಪ್ರಮಾಣದ ಪಟಾಕಿ ದಾಸ್ತಾನಿನ ಮೇಲೆ ಬಿತ್ತು. ನೋಡನೋಡುತ್ತಿದ್ದಂತೆ ಸ್ಫೋಟ ಹಾಗೂ ಬೆಂಕಿ ಸಂಭವಿಸಿ ಜನ ದಿಕ್ಕಾಪಾಲಾಗಿ ಓಡುವಂತಾಯಿತು. ಈ ವೇಳೆ 150 ಮಂದಿ ಗಾಯಗೊಂಡರು. ಆ ಪೈಕಿ 108 ಮಂದಿಯನ್ನು ಕಾಸರಗೋಡು, ಕಣ್ಣೂರು, ಕೋಳಿಕೋಡ್‌ ಹಾಗೂ ನೆರೆಯ ಮಂಗಳೂರು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಕಾರಣ ನೀಡಿ ಪೊಲೀಸರು ದೇಗುಲದ 8 ಮಂದಿ ಅಧಿಕಾರಿಗಳ ವಿರುದ್ಧ ಸ್ಫೋಟ ವಸ್ತು ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿದ್ದಾರೆ.