ಹರ್ಯಾಣ ವಿಧಾನಸಭೆಯ 90 ಸ್ಥಾನಗಳಿಗೆ ನಡೆದ ಚುನಾವಣೆ : ಶೇ.61 ಮತದಾನ, ಫಲಿತಾಂಶ ಅ.8ಕ್ಕೆ

| Published : Oct 06 2024, 01:22 AM IST / Updated: Oct 06 2024, 08:11 AM IST

ಸಾರಾಂಶ

ಹರ್ಯಾಣ ವಿಧಾನಸಭೆಯ 90 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಶೇ.61ರಷ್ಟು ಮತದಾನವಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಚುನಾವಣಾ ಫಲಿತಾಂಶ ಅಕ್ಟೋಬರ್ 8 ರಂದು ಪ್ರಕಟವಾಗಲಿದೆ.

ಚಂಡೀಗಢ: ಹರ್ಯಾಣ ವಿಧಾನಸಭೆಯ 90 ಸ್ಥಾನಗಳಿಗೆ ಶನಿವಾರ ಒಂದೇ ಹಂತದಲ್ಲಿ ಚುನಾವಣೆ ನಡೆಯಿತು. ಬಹುತೇಕ ಶಾಂತಿಯುತವಾಗಿದ್ದ ಚುನಾವಣೆಯಲ್ಲಿ ಶೇ.61ರಷ್ಟು ಮತದಾನವಾಗಿದೆ. 2019ರಲ್ಲಿ ಶೇ.68.20ರಷ್ಟು ಮತದಾನವಾಗಿತ್ತು.

ರಾಜ್ಯದಲ್ಲಿನ ಹಾಲಿ ಆಡಳಿತಾರೂಢ ಬಿಜೆಪಿ ಹ್ಯಾಟ್ರಿಕ್‌ ಕನಸಿನಲ್ಲಿದ್ದರೆ, ಮತ್ತೊಂದೆಡೆ ಕಾಂಗ್ರೆಸ್‌ ದಶಕದ ಬಳಿಕ ಮರಳಿ ಅಧಿಕಾರ ಹಿಡಿಯುವ ಕನಸಿನಲ್ಲಿದೆ. ಅ.8ರಂದು ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ.

90 ಸ್ಥಾನಗಳಿಗೆ 464 ಪಕ್ಷೇತರರು ಸೇರಿದಂತೆ 1031 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಸಿಎಂ ನಯಾಬ್‌ ಸಿಂಗ್‌ ಸೈನಿ, ಸಚಿವ ಅನಿಲ್‌ ವಿಜ್‌, ಒ.ಪಿ.ಧನಕರ್‌, ಕಾಂಗ್ರೆಸ್‌ನ ಭೂಪಿಂದರ್‌ ಸಿಂಗ್‌ ಹೂಡಾ, ಒಲಂಪಿಯನ್‌ ವಿನೇಶ್‌ ಪೋಗಟ್‌, ಅಭಯ್‌ ಸಿಂಗ್‌ ಚೌತಾಲಾ, ದುಷ್ಯಂತ್‌ ಚೌತಾಲಾ ಮತ್ತಿತರರು ಚುನಾವಣಾ ಕಣದಲ್ಲಿರುವ ಪ್ರಮುಖರಾಗಿದ್ದಾರೆ.

ಹಣಾಹಣಿ:

ಬಿಜೆಪಿ, ಕಾಂಗ್ರೆಸ್‌, ಐಎನ್‌ಎಲ್‌ಡಿ-ಬಿಎಸ್‌ಪಿ ಮೈತ್ರಿಕೂಟ, ಜೆಜೆಪಿ-ಆಜಾದ್‌ ಸಮಾಜ್‌ ಪಾರ್ಟಿ ಮೈತ್ರಿಕೂಟ, ಆಪ್‌ ಚುನಾವಣಾ ಕಣದಲ್ಲಿದ್ದ ಪ್ರಮುಖ ಪಕ್ಷಗಳಾಗಿವೆ.

ರಾಜ್ಯಾದ್ಯಂತ 144 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಅವುಗಳ ಪೈಕಿ 115 ಮತಗಟ್ಟೆಗಳನ್ನು ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯೇ ನಿರ್ವಹಿಸಿದ್ದು, 114 ಬೂತ್‌ಗಳನ್ನು ಯುವ ಸರ್ಕಾರಿ ನೌಕರರು ಮತ್ತು 87 ಬೂತ್‌ಗಳನ್ನು ವಿಶೇಷಚೇತನರು ಸಂಭಾಳಿಸಿದ್ದಾರೆ.