ದೇಶದ ನ್ಯಾಯಾಂಗ ಅಪಾಯದಲ್ಲಿದೆ: ಸಿಜೆಗೆ 600 ವಕೀಲರಿಂದ ಪತ್ರ

| Published : Mar 29 2024, 12:46 AM IST / Updated: Mar 29 2024, 08:08 AM IST

ದೇಶದ ನ್ಯಾಯಾಂಗ ಅಪಾಯದಲ್ಲಿದೆ: ಸಿಜೆಗೆ 600 ವಕೀಲರಿಂದ ಪತ್ರ
Share this Article
  • FB
  • TW
  • Linkdin
  • Email

ಸಾರಾಂಶ

ಅಪರೂಪದ ಬೆಳವಣಿಗೆಯೊಂದರಲ್ಲಿ ದೇಶದ 600ಕ್ಕೂ ಹೆಚ್ಚು ವಕೀಲರು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರಿಗೆ ಪತ್ರ ಬರೆದು, ‘ದೇಶದ ನ್ಯಾಯಾಂಗ ಅಪಾಯದಲ್ಲಿದೆ.

ಪಿಟಿಐ ನವದೆಹಲಿ

ಅಪರೂಪದ ಬೆಳವಣಿಗೆಯೊಂದರಲ್ಲಿ ದೇಶದ 600ಕ್ಕೂ ಹೆಚ್ಚು ವಕೀಲರು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರಿಗೆ ಪತ್ರ ಬರೆದು, ‘ದೇಶದ ನ್ಯಾಯಾಂಗ ಅಪಾಯದಲ್ಲಿದೆ. 

ವಿಶೇಷವಾಗಿ ರಾಜಕಾರಣಿಗಳ ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಸ್ಥಾಪಿತ ಹಿತಾಸಕ್ತಿಗಳು ಕೋರ್ಟ್‌ಗಳಿಗೆ ಮಸಿ ಬಳಿಯಲು ಯತ್ನಿಸುತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಹಿರಿಯ ವಕೀಲರಾದ ಹರೀಶ್‌ ಸಾಳ್ವೆ, ಉದಯ ಹೊಳ್ಳ ಮತ್ತು ಬಾರ್‌ ಕೌನ್ಸಿಲ್‌ ಆಫ್‌ ಇಂಡಿಯಾದ ಚೇರ್ಮನ್‌ ಮನನ್‌ ಕುಮಾರ್‌ ಸೇರಿದಂತೆ ದೇಶದ ಎಲ್ಲಾ ಮೂಲೆಗಳಿಂದ 600ಕ್ಕೂ ಹೆಚ್ಚು ವಕೀಲರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ.

‘ರಾಜಕಾರಣಿಗಳಿಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣಗಳಲ್ಲಿ ಸ್ಥಾಪಿತ ಹಿತಾಸಕ್ತಿಗಳು ಕೋರ್ಟ್‌ಗಳ ಮೇಲೆ ಒತ್ತಡ ಸೃಷ್ಟಿಸಿ, ನ್ಯಾಯಾಂಗಕ್ಕೆ ಮಸಿ ಬಳಿಯಲು ಯತ್ನಿಸುತ್ತಿವೆ. 

ಇದು ನಮ್ಮ ಪ್ರಜಾಪ್ರಭುತ್ವಕ್ಕೇ ಅಪಾಯ ತರಲಿದೆ. ಈ ಸಮಯದಲ್ಲಿ ಗೌರವಯುತ ಮೌನ ತಾಳುವುದು ಸರಿಯಲ್ಲ. ಒಂದು ವರ್ಗದ ವಕೀಲರು ಹಗಲಿನಲ್ಲಿ ರಾಜಕಾರಣಿಗಳ ಪರ ವಾದ ಮಾಡುತ್ತಾ, ರಾತ್ರಿ ವೇಳೆ ಮಾಧ್ಯಮಗಳ ಮೂಲಕ ಜಡ್ಜ್‌ಗಳ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದ್ದಾರೆ.

ಈ ವಕೀಲರು ‘ಹಿಂದೆ ಕೋರ್ಟ್‌ಗಳು ಸುವರ್ಣ ಯುಗದಲ್ಲಿದ್ದವು, ಈಗ ಕೆಟ್ಟುಹೋಗಿವೆ’ ಎಂಬಂತೆ ಬಿಂಬಿಸುತ್ತಿದ್ದಾರೆ’ ಎಂದು ಪತ್ರದಲ್ಲಿ ಬರೆಯಲಾಗಿದೆ.

‘ನ್ಯಾಯಾಂಗದ ಬಗ್ಗೆ ಅಪಾರ ಕಳಕಳಿಯಿಂದ ಈ ಪತ್ರ ಬರೆಯುತ್ತಿದ್ದೇವೆ. ಸ್ಥಾಪಿತ ಹಿತಾಸಕ್ತಿಗಳು ನ್ಯಾಯಾಂಗದ ಘನತೆಗೆ ಮಸಿ ಬಳಿಯಲು ಯತ್ನಿಸುತ್ತಿವೆ. 

ಕಾನೂನು ವ್ಯವಸ್ಥೆಯೇ ಸರಿಯಿಲ್ಲದ ದೇಶಗಳಿಗೆ ನಮ್ಮ ದೇಶದ ಕೋರ್ಟುಗಳನ್ನು ಹೋಲಿಸುವ ಮೂಲಕ ನಮ್ಮ ದೇಶದಲ್ಲಿ ನ್ಯಾಯಾಂಗದಲ್ಲಿ ಜನಸಾಮಾನ್ಯರಿಗೆ ಇರುವ ನಂಬಿಕೆಯನ್ನು ಅಲುಗಾಡಿಸುತ್ತಿವೆ’ ಎಂದು ಆಪಾದಿಸಿದ್ದಾರೆ.ಪತ್ರದಲ್ಲಿ ಯಾವುದೇ ನಿರ್ದಿಷ್ಟ ಪ್ರಕರಣ ಅಥವಾ ಯಾವುದೇ ವಕೀಲರ ಹೆಸರನ್ನು ನೇರವಾಗಿ ಪ್ರಸ್ತಾಪಿಸಿಲ್ಲ.