ದಕ್ಷಿಣ ಕಾಶ್ಮೀರದಲ್ಲಿ ಅಡಗಿ ಕುಳಿತಿದ್ದಾರಾ ಉಗ್ರರು?

| N/A | Published : May 02 2025, 12:10 AM IST / Updated: May 02 2025, 04:28 AM IST

Pahalgam  terrorists Photo

ಸಾರಾಂಶ

ಏ.22ರ ಭೀಕರ ಪಹಲ್ಗಾಂ ನರಮೇಧದ ಬಳಿಕ ಬಿಲ ಸೇರಿರುವ ಉಗ್ರರ ಹುಡುಕಾಟಕ್ಕೆ ಭದ್ರತಾ ಪಡೆಗಳು ಭಾರೀ ಕಾರ್ಯಾಚರಣೆ ಮುಂದುವರೆಸಿವೆ.

 ಶ್ರೀನಗರ : ಏ.22ರ ಭೀಕರ ಪಹಲ್ಗಾಂ ನರಮೇಧದ ಬಳಿಕ ಬಿಲ ಸೇರಿರುವ ಉಗ್ರರ ಹುಡುಕಾಟಕ್ಕೆ ಭದ್ರತಾ ಪಡೆಗಳು ಭಾರೀ ಕಾರ್ಯಾಚರಣೆ ಮುಂದುವರೆಸಿವೆ. ಈ ನಡುವೆ ಘಟನೆ ಬಳಿಕ ಪರಾರಿಯಾಗಿರುವ ಉಗ್ರರು, ಕಣಿವೆ ರಾಜ್ಯದಲ್ಲಿ ಉಗ್ರ ಚಟುವಟಿಕೆಗಳಿಗೆ ಖ್ಯಾತಿ ಹೊಂದಿರುವ ದಕ್ಷಿಣದ ಕಾಶ್ಮೀರದಲ್ಲೇ ಅಡಗಿರುವ ಸಾಧ್ಯತೆ ದಟ್ಟವಾಗಿದೆ ಎಂಬ ಮಾಹಿತಿಯನ್ನು ಕಲೆ ಹಾಕುವಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಯಶಸ್ವಿಯಾಗಿದೆ.

ದಾಳಿಯ ಬಳಿಕ ಭದ್ರತಾ ಪಡೆಗಳು ತೀವ್ರ ಕಾರ್ಯಾಚರಣೆ ನಡೆಸುವುದು ಖಚಿತವಿದ್ದ ಕಾರಣ, ತಾವು ಅಡಗಿರುವ ಸ್ಥಳದಲ್ಲೇ ಸುದೀರ್ಘ ಅವಧಿಗೆ ಬೇಕಾದ ಆಹಾರ ವ್ಯವಸ್ಥೆಗಳನ್ನು ಅವರು ಮಾಡಿಕೊಂಡಿದ್ದಾರೆ. ದಾಳಿ ವೇಳೆ ಕೇವಲ ಮೂವರು ಉಗ್ರರು ಕಾಣಿಸಿಕೊಂಡಿದ್ದರಾದರೂ, ಅವರಿಗೆ ಬೆನ್ನೆಲುಬಾಗಿ ಇನ್ನಷ್ಟು ಜನ ಇದ್ದಿರುವ ಸಾಧ್ಯತೆಯೂ ಹೆಚ್ಚಿದೆ ಎಂದು ಎನ್‌ಐಎ ಮೂಲಗಳು ಹೇಳಿವೆ.

ಬೈಸರನ್‌ ಜೊತೆಗೆ ಇನ್ನೂ ಮೂರು ಪ್ರದೇಶಗಳ ಪರಿಶೀಲಿಸಿದ್ದ ಉಗ್ರರು

ನವದೆಹಲಿ: ಪಹಲ್ಗಾಂನ ಬೈಸರನ್ ಪ್ರದೇಶದಲ್ಲಿ ದಾಳಿಗೂ ಮುನ್ನ ಭಯೋತ್ಪಾದಕರು 2 ದಿನಗಳ ಹಿಂದೆ ಬೈಸರನ್ ಕಣಿವೆ ಜೊತೆಗೆ ಇನ್ನು ಮೂರು ಸ್ಥಳಗಳ ದಾಳಿಗೆ ಸಂಚು ರೂಪಿಸಿದ್ದರು. ಆದರೆ ಅದು ವಿಫಲವಾಗಿತ್ತು ಎನ್ನುವುದು ಎನ್‌ಐಎ ತನಿಖೆಯಲ್ಲಿ ಬಯಲಾಗಿದೆ.

ಪಹಲ್ಗಾಂ ದಾಳಿಯ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಕೈಗೊಂಡಿದ್ದು, ಈ ವೇಳೆ ಹಲವು ಸ್ಫೋಟಕ ಸತ್ಯಗಳು ಬಯಲಾಗಿವೆ. ಮೂಲಗಳ ಪ್ರಕಾರ, ಭಯೋತ್ಪಾದಕರು ಬೈಸರನ್‌ ಕಣಿವೆ ಜೊತೆಗೆ ಅರು ಕಣಿವೆ, ಅಮ್ಯೂಸ್‌ಮೆಂಟ್‌ ಪಾರ್ಕ್ ಮತ್ತು ಬೇತಾಬ್‌ ಕಣಿವೆಯಲ್ಲಿಯೂ ದಾಳಿಗೆ ಸಂಚು ರೂಪಿಸಿದ್ದರು. 

ಆದರೆ ಆ ಸ್ಥಳಗಳಲ್ಲಿ ಭದ್ರತೆಯಿದ್ದ ಕಾರಣಕ್ಕೆ ಅವರ ಪ್ಲ್ಯಾನ್‌ ವಿಫಲಗೊಂಡಿತ್ತು. ಜೊತೆಗೆ ದಾಳಿಗೂ ಎರಡು ದಿನಗಳ ಮೊದಲೇ ಭಯೋತ್ಪಾದಕರು ಬೈಸರನ್‌ ಕಣಿವೆಯಲ್ಲಿದ್ದರು. ಸ್ಥಳ್‍ಗಳ ಹುಡುಕಾಟಕ್ಕೆ ಇವರಿಗೆ ನಾಲ್ವರು ಭೂಗತ ಕಾರ್ಮಿಕರು ನೆರವು ನೀಡಿದ್ದರು ಎನ್ನುವುದು ಬಯಲಾಗಿದೆ.ತನಿಖೆ ಭಾಗವಾಗಿ ಇದುವರೆಗೆ 20 ಭೂಗತ ಕಾರ್ಮಿಕರನ್ನು ಪತ್ತೆಹಚ್ಚಿದ್ದು ಕೆಲವರನ್ನು ಬಂಧಿಸಲಾಗಿದೆ. ಜೊತೆಗೆ 186 ಕಾರ್ಮಿಕರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ.