ಕಾಶ್ಮೀರದಲ್ಲಿ ಸೇನೆಯಿಂದ ಆಪರೇಷನ್‌ ಮಹಾದೇವ : ಪಹಲ್ಗಾಂ ಮಾಸ್ಟರ್‌ಮೈಂಡ್‌ ಬಲಿ

| N/A | Published : Jul 29 2025, 01:48 AM IST / Updated: Jul 29 2025, 02:03 AM IST

ಕಾಶ್ಮೀರದಲ್ಲಿ ಸೇನೆಯಿಂದ ಆಪರೇಷನ್‌ ಮಹಾದೇವ : ಪಹಲ್ಗಾಂ ಮಾಸ್ಟರ್‌ಮೈಂಡ್‌ ಬಲಿ
Share this Article
  • FB
  • TW
  • Linkdin
  • Email

ಸಾರಾಂಶ

ಏ.22ರಂದು ಪಹಲ್ಗಾಂನಲ್ಲಿ ನಡೆದ 26 ಅಮಾಯಕರ ನರಮೇಧದ ಹಿಂದಿದ್ದ ಮಾಸ್ಟರ್‌ಮೈಂಡ್‌ ಸುಲೇಮಾನ್‌ ಅಲಿಯಾಸ್ ಹಾಶಿಂ ಮೂಸಾ ಸೇರಿದಂತೆ 3 ಉಗ್ರರನ್ನು ‘ಆಪರೇಷನ್‌ ಮಹಾದೇವ’ ಅಡಿಯಲ್ಲಿ ಹತ್ಯೆ ಮಾಡಲಾಗಿದೆ.

 ಶ್ರೀನಗರ: ಏ.22ರಂದು ಪಹಲ್ಗಾಂನಲ್ಲಿ ನಡೆದ 26 ಅಮಾಯಕರ ನರಮೇಧದ ಹಿಂದಿದ್ದ ಮಾಸ್ಟರ್‌ಮೈಂಡ್‌ ಸುಲೇಮಾನ್‌ ಅಲಿಯಾಸ್ ಹಾಶಿಂ ಮೂಸಾ ಸೇರಿದಂತೆ 3 ಉಗ್ರರನ್ನು ‘ಆಪರೇಷನ್‌ ಮಹಾದೇವ’ ಅಡಿಯಲ್ಲಿ ಹತ್ಯೆ ಮಾಡಲಾಗಿದೆ. ಸೋಮವಾರ ಶ್ರೀನಗರದ ಬಳಿ ಭದ್ರತಾ ಪಡೆಗಳು, ಸಿಆರ್‌ಪಿಎಫ್‌ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಜಂಟಿಯಾಗಿ, ಉಗ್ರದಾಳಿ ನಡೆದ 3 ತಿಂಗಳ ಬಳಿಕ 3 ಉಗ್ರರನ್ನು ಸಂಹರಿಸಿದ್ದಾರೆ ಎಂದು ಭದ್ರತಾ ಮೂಲಗಳು ಧೃಡಪಡಿಸಿವೆ.

ಮುಲ್ನಾರ್‌ ಮತ್ತು ಹರ್ವಾನ್‌ ಪ್ರದೇಶಗಳಲ್ಲಿ ಆಪರೇಷನ್‌ ಮಹಾದೇವ ಕೈಗೊಂಡ ಭದ್ರತಾ ಪಡೆಗಳಿಗೆ 14 ದಿನದ ಹಿಂದೆ ಉಗ್ರರ ಚಲನವಲನದ ಸುಳಿವು ಸಿಕ್ಕಿತ್ತು. ಚೀನಾದ ಅಲ್ಟ್ರಾ ರೇಡಿಯೋ ಸಂವಹನ ಸಕ್ರಿಯವಾಗಿದ್ದರಿಂದ ಅವರ ಇರುವಿಕೆಯ ಬಗ್ಗೆ ಪಕ್ಕಾ ಮಾಹಿತಿ ಇತ್ತು. ಇದನ್ನು ಆಧರಿಸಿ ಡಚೆಗಮ್ ಅರಣ್ಯ ಪ್ರದೇಶದಲ್ಲಿ ಸುತ್ತುವರಿದ 2 ದಿನಗಳ ನಂತರ, ಲಷ್ಕರ್‌-ಎ-ತೊಯ್ಬಾ ಸಂಘಟನೆಗೆ ಸೇರಿದ್ದ ಸುಲೇಮಾನ್‌ ಶಾ (ಹಾಶಿಂ ಮೂಸಾ), ಅಬು ಹಮ್ಜಾ ಅಪ್ಘಾನಿ ಮತ್ತು ಯಾಸಿರ್‌ ಜಿಬ್ರಾನ್‌ನನ್ನು ಹೊಡೆದುರುಳಿಸಿದೆ.

ಈ ಪೈಕಿ ಮೂಸಾ ಪಹಲ್ಗಾಂ ದಾಳಿಯಲ್ಲಿ ಭಾಗಿಯಾಗಿದ್ದರೆ ಮತ್ತು ಯಾಸಿರ್‌ ಸೋನ್‌ಮಾರ್ಗ ಸುರಂಗ ದಾಳಿಯಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.

ಪಾಕ್‌ ಉಗ್ರರು ಮತ್ತು ಅವರ ನೆಲೆಗಳ ಮೇಲೆ ನಡೆದ ‘ಆಪರೇಷನ್‌ ಸಿಂದೂರ ಇನ್ನೂ ನಿಂತಿಲ್ಲ’ ಎಂದು ಇತ್ತೀಚೆಗಷ್ಟೇ ಸೇನಾ ಮುಖ್ಯಸ್ಥರು ಹೇಳಿದ್ದರು. ಅದರ ಬೆನ್ನಲ್ಲೇ ಬೆಳವಣಿಗೆಯಾಗಿದೆ. ಇದು ಪಹಲ್ಗಾಮ್ ದಾಳಿಯ ನಂತರದ ಅತಿದೊಡ್ಡ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳಲ್ಲಿ ಒಂದಾಗಿದೆ.

ಗುರುತು ಮರೆಗೆ ತೂಕ ಇಳಿಸಿಕೊಂಡಿದ್ದ ಮೂಸಾ:

ಮೊದಲು ಪಾಕ್‌ ಸೇನೆಯಲ್ಲಿ ಕಮಾಂಡರ್‌ ಆಗಿದ್ದ ಮೂಸಾ, ಬಳಿಕ ಲಷ್ಕರ್‌ ಉಗ್ರ ಸಂಘಟನೆಗೆ ಸೇರಿದಕೊಂಡು, ಅನೇಕ ಉಗ್ರದಾಳಿಗಳಲ್ಲಿ ಭಾಗಿಯಾಗಿದ್ದ. ಈತ ತನ್ನ ಗುರುತನ್ನು ಮರೆಮಾಚುವ ಯತ್ನದಲ್ಲಿ ಗಮನಾರ್ಹವಾಗಿ ತೂಕ ಇಳಿಸಿಕೊಂಡಂತೆ ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.

ಶಸ್ತ್ರಾಸ್ತ್ರಗಳೂ ವಶ:

ಮೃತ ಉಗ್ರರ ಬಳಿಯಿದ್ದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನೂ ಭದ್ರತಾಪಡೆಗಳು ವಶಪಡಿಸಿಕೊಂಡಿವೆ. ಕಾರ್ಬೈನ್‌, ಎಕೆ-47 ರೈಫಲ್, 17 ರೈಫಲ್‌ ಗ್ರೆನೇಡ್‌ ಸೇರಿದಂತೆ ಇನ್ನೂ ಅನೇಕ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳು ದೊರಕಿವೆ. ಇದರಿಂದ, ಅವರೆಲ್ಲ ಜ್ಮಮುಕಾಶ್ಮೀರದಲ್ಲಿ ದೊಡ್ಡ ದಾಳಿಗೆ ಸಂಚು ರೂಪಿಸಿದ್ದರು ಎಂದು ಶಂಕಿಸಲಾಗಿದೆ.

ಉಗ್ರರ ಅಡಗುತಾಣಗಳೂ ಪತ್ತೆ:

ಯಾರ ಕೈಗೂ ಸಿಗಬಾರದೆಂಬ ಉದ್ದೇಶದಿಂದ, ಉಗ್ರರು ಸಾಮಾನ್ಯವಾಗಿ ಒಂದೇ ಪ್ರದೇಶದಲ್ಲಿ ನೆಲೆಸದೆ, ನಿಯಮಿತವಾಗಿ ತಮ್ಮ ಸ್ಥಳಗಳನ್ನು ಬದಲಿಸುತ್ತಿರುತ್ತಾರೆ. ದಟ್ಟಡವಿಯಲ್ಲಿ ಸಣ್ಣಸಣ್ಣ ಟೆಂಟ್‌ಗಳನ್ನು ನಿರ್ಮಿಸಿಕೊಂಡು ವಾಸವಿರುತ್ತಾರೆ. ಹೀಗೆಯೇ ಹಸಿರು ಹಾಳೆ ಬಳಸಿ, ಮರಗಳಿಗೆ ಕಟ್ಟಲ್ಪಟ್ಟ ಟೆಂಟ್‌ನಲ್ಲಿ, ಉಗ್ರರು ಬಳಸುತ್ತಿದ್ದ ಬಟ್ಟೆ, ಕಂಬಳಿ, ಪ್ಲಾಸ್ಟಿಕ್ ಚೀಲಗಳು, ಆಹಾರ ಮತ್ತು ತಟ್ಟೆಗಳ ರಾಶಿಯೂ ಕಂಡುಬಂದಿದೆ.

Read more Articles on