ಸಾರಾಂಶ
ನವದೆಹಲಿ/ಇಸ್ಲಾಮಾಬಾದ್: ಭದ್ರತಾ ಕಳವಳಗಳ ನಡುವೆಯೇ ಪಾಕಿಸ್ತಾನದಲ್ಲಿ ಆರಂಭವಾಗಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿ ಮೇಲೆ ಇದೀಗ ಉಗ್ರರ ಕರಿನೆರಳು ಬಿದ್ದಿದೆ. ಚಾಂಪಿಯನ್ಸ್ ಟ್ರೋಫಿಗೆ ಆಗಮಿಸುವ ವಿದೇಶಿಗರನ್ನು ಐಸಿಸ್ ಉಗ್ರರ ಮಿತ್ರ ಸಂಘಟನೆ ಆಗಿರುವ ಇಸ್ಲಾಮಿಕ್ ಸ್ಟೇಟ್ ಖೊರಾಸಾನ್ ಪ್ರಾವಿನ್ಸ್ (ಐಎಸ್‌ಕೆಪಿ) ಉಗ್ರರು ಹಣಕ್ಕಾಗಿ ಅಪಹರಿಸುವ ಸಾಧ್ಯತೆ ಇದೆ ಎಂದು ಇದೀಗ ಪಾಕಿಸ್ತಾನ ಗುಪ್ತಚರ ಸಂಸ್ಥೆಯೇ ಎಚ್ಚರಿಕೆ ನೀಡಿದೆ.
ಉಗ್ರರು ವಿಶೇಷವಾಗಿ ಚೀನಾ ಮತ್ತು ಅರಬ್ ರಾಷ್ಟ್ರದವರನ್ನೇ ಗುರಿಯಾಗಿರಿಸಿಕೊಂಡಿದ್ದಾರೆ. ಈ ದೇಶಗಳ ನಾಗರಿಕರು ಹೆಚ್ಚಾಗಿ ಭೇಟಿ ನೀಡುವ ಬಂದರುಗಳು, ವಿಮಾನ ನಿಲ್ದಾಣ, ಕಚೇರಿಗಳು ಮತ್ತು ವಸತಿ ಪ್ರದೇಶಗಳ ಮೇಲೆ ಹೆಚ್ಚಿನ ಕಣ್ಣಿಟ್ಟಿದ್ದಾರೆ ಎಂದು ಅದು ಹೇಳಿದೆ.
ಗುಪ್ತಚರ ಮೂಲಗಳ ಪ್ರಕಾರ, ಐಎಸ್‌ಕೆಪಿ ಉಗ್ರರು ನಗರದ ಹೊರಭಾಗದ ಸುರಕ್ಷಿತ ಪ್ರದೇಶದಲ್ಲಿ ಅದರಲ್ಲೂ ಮುಖ್ಯವಾಗಿ ಕ್ಯಾಮೆರಾ ಕಣ್ಗಾವಲು ರಹಿತ ಪ್ರದೇಶ ಹಾಗೂ ರಿಕ್ಷಾ ಮತ್ತು ಬೈಕ್‌ಗಳು ಓಡಾಟವಿರುವ ಪ್ರದೇಶಗಳಲ್ಲಿ ಮನೆ ಬಾಡಿಗೆ ಹಿಡಿಯಲು ಮುಂದಾಗಿದ್ದಾರೆ. ಹೀಗಾಗಿ ಕ್ರಿಕೆಟಿಗರು ಇರುವ ಸ್ಥಳ ಹಾಗೂ ಸ್ಟೇಡಿಯಂಗಳ ಸುತ್ತ ಭದ್ರತೆ ಹೆಚ್ಚಿಸಲಾಗಿದೆ.
ಈ ನಡುವೆ ಅಫ್ಘಾನಿಸ್ತಾನ ಗುಪ್ತಚರ ಸಂಸ್ಥೆ (ಜಿಡಿಐ) ಕೂಡ ಪ್ರಮುಖ ಸ್ಥಳಗಳ ಮೇಲೆ ಐಎಸ್‌ಕೆಪಿ ದಾಳಿ ಕುರಿತು ಎಚ್ಚರಿಸಿದೆ.
ಹಿಂದೆಯೂ ಆಗಿತ್ತು:
ಪಾಕಿಸ್ತಾನದಲ್ಲಿ ಮಹತ್ವದ ಅಂತಾರಾಷ್ಟ್ರೀಯ ಕಾರ್ಯಕ್ರಮಗಳಿಗೆ ಹಲವು ವರ್ಷಗಳಿಂದ ಭದ್ರತಾ ಆತಂಕ ಇದ್ದೇ ಇದೆ. 2024ರಲ್ಲಿ ಶಾಂಗ್ಲಾದಲ್ಲಿ ಚೀನಾದ ಎಂಜಿನಿಯರ್‌ಗಳು ಹಾಗೂ 2009ರಲ್ಲಿ ಲಾಹೋರ್‌ನಲ್ಲಿ ಶ್ರೀಲಂಕಾದ ಕ್ರಿಕೆಟ್ ತಂಡದ ಮೇಲಿನ ದಾಳಿಯು ದೇಶದ ಭದ್ರತಾ ವ್ಯವಸ್ಥೆ ಕುರಿತು ತೀವ್ರ ಆತಂಕ ಮೂಡಿಸಿತ್ತು.