ಭಾರತದ ತಪರಾಕಿಗೆ ಬೆಚ್ಚಿ ಗಡೀಲಿ ತಂಟೆ ನಿಲ್ಲಿಸಿದ ಪಾಕ್‌

| N/A | Published : May 11 2025, 11:51 PM IST / Updated: May 12 2025, 04:55 AM IST

ಸಾರಾಂಶ

ಶನಿವಾರ ಸಂಜೆ ಕದನ ವಿರಾಮ ಘೋಷಣೆ ಬಳಿಕವೂ ರಾತ್ರಿ 7.30ರಿಂದ 11 ಗಂಟೆಯವರೆಗೆ ಭಾರತದ ಗಡಿಗಳ ಮೇಲೆ ಭಾರೀ ಪ್ರಮಾಣದ ಡ್ರೋನ್‌, ಶೆಲ್‌, ಗುಂಡಿನ ದಾಳಿ ನಡೆಸಿದ್ದ ಪಾಕಿಸ್ತಾನ ತಡರಾತ್ರಿ ಬಳಿಕ ತೆಪ್ಪಗಾಗಿದೆ.

 ನವದೆಹಲಿ : ಶನಿವಾರ ಸಂಜೆ ಕದನ ವಿರಾಮ ಘೋಷಣೆ ಬಳಿಕವೂ ರಾತ್ರಿ 7.30ರಿಂದ 11 ಗಂಟೆಯವರೆಗೆ ಭಾರತದ ಗಡಿಗಳ ಮೇಲೆ ಭಾರೀ ಪ್ರಮಾಣದ ಡ್ರೋನ್‌, ಶೆಲ್‌, ಗುಂಡಿನ ದಾಳಿ ನಡೆಸಿದ್ದ ಪಾಕಿಸ್ತಾನ ತಡರಾತ್ರಿ ಬಳಿಕ ತೆಪ್ಪಗಾಗಿದೆ. ತಡರಾತ್ರಿ ಬಳಿಕ ಕಾಶ್ಮೀರ ಸೇರಿದಂತೆ ಗಡಿಯ 4 ರಾಜ್ಯಗಳಲ್ಲಿ ಎಲ್ಲೂ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸುವ ಗೋಜಿಗೆ ಹೋಗಿಲ್ಲ ಎಂದು ಭಾರತೀಯ ಸೇನೆ ಮಾಹಿತಿ ನೀಡಿದೆ.

ಭಾನುವಾರ ಬೆಳಗ್ಗೆಯೇ ಪಾಕಿಸ್ತಾನದ ಡಿಜಿಎಂಒಗೆ (ಸೇನಾ ಕಾರ್ಯಾಚರಣೆಗೆ ಪ್ರಧಾನ ನಿರ್ದೇ಼ಶಕ) ಕರೆ ಮಾಡಿದ್ದ ಭಾರತೀಯ ಸೇನಾಪಡೆಯ ಡಿಜಿಎಂಒ, ‘ಶನಿವಾರದ ರೀತಿ ಮತ್ತೆ ಏನಾದರೂ ಗಡಿಯಲ್ಲಿ ಕ್ಯಾತೆ ತೆಗೆದರೆ ಅದಕ್ಕೆ ಸೂಕ್ತ ತಿರುಗೇಟು ನೀಡಲಾಗುವುದು’ ಎಂದು ಕಠಿಣ ಎಚ್ಚರಿಕೆ ನೀಡಿದ್ದರು. ಇದಕ್ಕೆ ಬೆದರಿದ ಪಾಕಿಸ್ತಾನ ಬಳಿಕ ತಣ್ಣಗಾಗಿದೆ ಎಂದು ಮೂಲಗಳು ತಿಳಿಸಿವೆ. ‘ಕದನವಿರಾಮ ಜಾರಿಗೆ ಬದ್ಧ’ ಎಂದು ಭಾನುವಾರ ಬೆಳಗ್ಗೆ ಪಾಕ್‌ ಸೇನೆ ಕೂಡ ಅಧಿಕೃತ ಹೇಳಿಕೆ ನೀಡಿದೆ.

ಶಾಂತ ಪರಿಸ್ಥಿತಿ:

ತಡರಾತ್ರಿ ಬಳಿಕ ಗಡಿಯಲ್ಲಿ ಶಾಂತಿ ಪರಿಸ್ಥಿತಿ ನೆಲೆಸಿದ್ದ ಹಿನ್ನೆಲೆಯಲ್ಲಿ, ಸಂಘರ್ಷ ತೀವ್ರಗೊಂಡ ಬಳಿಕ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರ, ಪಂಜಾಬ್‌, ರಾಜಸ್ಥಾನ ಮತ್ತು ಗುಜರಾತ್‌ ಗಡಿಯ ಜನ ನೆಮ್ಮದಿಯಿಂದ ನಿದ್ದೆ ಮಾಡಿದ್ದಾರೆ. ಸದ್ಯ ಗಡಿಯುದ್ದಕ್ಕೂ ಮಿಲಿಟರಿ ನಿಯೋಜನೆ ಯಥಾ ಸ್ಥಿತಿಯಲ್ಲಿದ್ದರೂ ಭಾನುವಾರ ದೈನಂದಿನ ಜೀವನ ಮಾತ್ರ ಸಹಜ ಸ್ಥಿತಿಗೆ ಮರಳಿದೆ.

ಈ ನಡುವೆ, ಸಂಘರ್ಷದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ವಾಯವ್ಯ ರೈಲ್ವೆ ಸೇವೆಯು ಮತ್ತೆ ಆರಂಭವಾಗಿದೆ. ಜೈಸಲ್ಮೇರ್‌ನಲ್ಲಿ ಕಳೆದೆರಡು ದಿನಗಳಿಂದ ಭಾರೀ ಡ್ರೋನ್‌ಗಳ ಹಾರಾಟ, ಸ್ಫೋಟದ ಸದ್ದು ಕೇಳಿಸುತ್ತಿತ್ತು. ಆದರೆ, ಶನಿವಾರ ತಡರಾತ್ರಿಯಿಂದ ಅಂಥ ಯಾವುದೇ ಸದ್ದಾಗಲಿ, ಡ್ರೋನ್‌ಗಳ ಹಾರಾಟವಾಗಲಿ ಇರಲಿಲ್ಲ ಎಂದು ಸ್ಥಳೀಯ ನಿವಾಸಿ ರೇವಂತ್ ಸಿಂಗ್‌ ಹೇಳಿಕೊಂಡಿದ್ದಾರೆ. ಜೈಸಲ್ಮೇರ್‌ನ ಹಲವೆಡೆ ಭಾರತೀಯ ಸೇನೆ ಹೊಡೆದುರುಳಿಸಿದ ಪಾಕಿಸ್ತಾನದ ಡ್ರೋನ್‌ಗಳ ಅವಶೇಷಗಳು ರಾಶಿ ರಾಶಿಯಾಗಿ ಬಿದ್ದಿವೆ.

11 ಗಂಟೆ ಬಳಿಕ ಶಾಂತ:

ಶನಿವಾರ ರಾತ್ರಿ 11 ಗಂಟೆ ಬಳಿಕ ಯಾವುದೇ ಕದನ ವಿರಾಮ ಉಲ್ಲಂಘನೆಯ ಪ್ರಕರಣಗಳು ದಾಖಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾವು ಹಲವು ದಿನಗಳಿಂದ ನೆಮ್ಮದಿಯಾಗಿ ನಿದ್ದೆ ಮಾಡಿರಲಿಲ್ಲ, ಈ ಯುದ್ಧಕ್ಕೆ ಅಂತ್ಯಹಾಡಲು ಶ್ರಮಿಸಿದ ಪ್ರತಿಯೊಬ್ಬರಿಗೂ ಮತ್ತು ದೇವರಿಗೆ ನಾವು ಧನ್ಯವಾದ ಸಲ್ಲಿಸುತ್ತೇವೆ ಎಂದು ಕಾಶ್ಮೀರದ ರಾವಲ್‌ಪೋರಾದ ಷಹಜಹಾನ್‌ ದಾರ್‌ ಹೇಳಿದ್ದಾರೆ.

ಭಾರತ-ಪಾಕ್‌ ನಡುವಿನ ಯುದ್ಧ ಸ್ಥಿತಿ ಹಿನ್ನೆಲೆಯಲ್ಲಿ ಗಡಿಭಾಗದಿಂದ ಭಾರೀ ಪ್ರಮಾಣದಲ್ಲಿ ಜನ ಸುರಕ್ಷಿತ ಸ್ಥಳಕ್ಕೆ ತೆರಳಿದ್ದರು. ಸದ್ಯ ಕದನ ವಿರಾಮ ಘೋಷಣೆಯಾಗಿದ್ದರೂ ಅವರು ಇನ್ನೂ ಒಂದೆರಡು ದಿನ ಕಾದು ನೋಡಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ. ಒಟ್ಟಾರೆ ಕದನ ವಿರಾಮದಿಂದ ಗಡಿಭಾಗದ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಕದನ ವಿರಾಮ ಜಾರಿಗೆ ಬದ್ಧ-ಪಾಕ್‌:

ಈ ನಡುವೆ ಶುಕ್ರವಾರ ಭಾರತದೊಂದಿಗೆ ಕದನ ವಿರಾಮ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಅದನ್ನು ಉಲ್ಲಂಘಿಸಿ ಉದ್ಧಟತನ ತೋರಿದ್ದ ಪಾಕಿಸ್ತಾನ, ಇದೀಗ ಕದನ ವಿರಾಮವನ್ನು ನಿಷ್ಠೆಯಿಂದ ಜಾರಿಗೆ ತರಲು ಪಾಕಿಸ್ತಾನ ಬದ್ಧವಾಗಿದೆ ಎಂಬ ಹೇಳಿಕೆ ನೀಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಪಾಕಿಸ್ತಾನದ ವಿದೇಶಾಂಗ ಕಾರ್ಯಾಲಯದ ವಕ್ತಾರ ‘ಕದನ ವಿರಾಮವನ್ನು ನಿಷ್ಠೆಯಿಂದ ಜಾರಿಗೆ ತರಲು ಪಾಕಿಸ್ತಾನ ಬದ್ಧವಾಗಿದೆ. ನಮ್ಮ ಪಡೆಗಳು ಪರಿಸ್ಥಿತಿಯನ್ನು ಜವಾಬ್ದಾರಿ ಮತ್ತು ಸಂಯಮದಿಂದ ನಿಭಾಯಿಸುತ್ತಿವೆ. ಕದನ ವಿರಾಮದ ಸುಗಮ ಅನುಷ್ಠಾನದಲ್ಲಿನ ಯಾವುದೇ ಸಮಸ್ಯೆಗಳನ್ನು ಸೂಕ್ತ ಮಟ್ಟದಲ್ಲಿ ಮಾತುಕತೆ ಮೂಲಕ ಪರಿಹರಿಸಬೇಕಿದೆ’ ಎಂದಿದ್ದಾರೆ.