ಸಾರಾಂಶ
ಉತ್ತರ ಪ್ರದೇಶದ ಯುವಕನ ವರಿಸಲು ಅಕ್ರಮವಾಗಿ ಭಾರತ ಪ್ರವೇಶಿಸಿದ್ದ ಪಾಕಿಸ್ತಾನದ ಸೀಮಾ ಹೈದರ್ ಗಡೀಪಾರು ಆತಂಕಕ್ಕೆ ಒಳಗಾಗಿದ್ದಾರೆ.
ನವದೆಹಲಿ: ಪಹಲ್ಗಾಂ ದುರಂತದ ಪ್ರತೀಕಾರವಾಗಿ ಭಾರತದಲ್ಲಿನ ಪಾಕ್ ಪ್ರಜೆಗಳ ವೀಸಾ ಸ್ಥಗಿತ ಬೆನ್ನಲ್ಲೇ, ಉತ್ತರ ಪ್ರದೇಶದ ಯುವಕನ ವರಿಸಲು ಅಕ್ರಮವಾಗಿ ಭಾರತ ಪ್ರವೇಶಿಸಿದ್ದ ಪಾಕಿಸ್ತಾನದ ಸೀಮಾ ಹೈದರ್ ಗಡೀಪಾರು ಆತಂಕಕ್ಕೆ ಒಳಗಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ‘ನಾನು ಪಾಕಿಸ್ತಾನದ ಮಗಳಾಗಿದ್ದೆ. ಆದರೆ ಈಗ ಭಾರತದ ಸೊಸೆ. ನಾನು ಇಲ್ಲಿಯೇ ಉಳಿಯಲು ಅವಕಾಶ ಕೊಡಿ’ ಎಂದು ಪ್ರಧಾನಿ ಮೋದಿಗೆ ಮನವಿ ಮಾಡಿದ್ದಾರೆ. 2023ರಲ್ಲಿ ಸೀಮಾ, ತನ್ನ ನಾಲ್ಕು ಮಕ್ಕಳ ಜೊತೆಗೆ ಭಾರತಕ್ಕೆ ಆಗಮಿಸಿ ಯುಪಿ ಮೂಲದ ಸಚಿನ್ ಮೀನಾರನ್ನು ವರಿಸಿದ್ದರು.
ಈ ನಡುವೆ ವಕೀಲ ಎ.ಪಿ. ಸಿಂಗ್ ಪ್ರತಿಕ್ರಿಯಿಸಿದ್ದು, ‘ಸೀಮಾ ಸಚಿನ್ ಮೀನಾರ ಮದುವೆಯಾಗಿ ಮಗಳು ಭಾರತಿ ಮೀನಾಗೆ ಜನ್ಮ ನೀಡಿದ್ದಾರೆ. ಅವರ ಪೌರತ್ವ ಭಾರತೀಯ ಪತಿಯೊಂದಿಗೆ ಸಂಪರ್ಕ ಹೊಂದಿದ್ದು, ಕೇಂದ್ರದ ನಿಯಮ ಇವರಿಗೆ ಅನ್ವಯಿಸಬಾರದು’ಎಂದಿದ್ದಾರೆ.
ಕಾನ್ಪುರದ ಉದ್ಯಾನ, ವೃತ್ತಕ್ಕೆ ಪಹಲ್ಗಾಂ ದಾಳಿಯಲ್ಲಿ ಮೃತ ಶುಭಂ ದ್ವಿವೇದಿ ಹೆಸರು
ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದ ಶ್ಯಾಮ್ ನಗರದಲ್ಲಿನ ಉದ್ಯಾನವನ ಮತ್ತು ವೃತ್ತವೊಂದಕ್ಕೆ ಪಹಲ್ಗಾಂ ಉಗ್ರದಾಳಿಯಲ್ಲಿ ಮೃತಪಟ್ಟ ಶುಭಂ ದ್ವಿವೇದಿ ಅವರ ಹೆಸರನ್ನು ಇಡಲಾಗುವುದು ಎಂದು ಮೇಯರ್ ಪ್ರಮೀಳಾ ಪಾಂಡೆ ತಿಳಿಸಿದ್ದಾರೆ.
‘ಶ್ಯಾಮ್ ನಗರದಲ್ಲಿನ ಉದ್ಯಾನವನ ಮತ್ತು ಚೌಕಕ್ಕೆ ಪಹಲ್ಗಾಂ ದಾಳಿಯಲ್ಲಿ ಮೃತಪಟ್ಟ ಶುಭಂ ದ್ವಿವೇದಿ ಅವರ ಹೆಸರನ್ನಿಡಲು ಕಾನ್ಪುರ್ ಮುನ್ಸಿಪಲ್ ಕಾರ್ಪೊರೇಷನ್ (ಕೆಎಂಸಿ) ನಿರ್ಧರಿಸಿದೆ. ಶುಭಂ ಅವರ ಪತ್ನಿ ಆಶಾನ್ಯಾ ಅವರು ಇಚ್ಛಿಸಿದರೆ, ಕಾನ್ಪುರ್ ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ ಅವರಿಗೆ ಹೊರಗುತ್ತಿಗೆ ಉದ್ಯೋಗವನ್ನು ನೀಡುತ್ತೇವೆ’ ಎಂದು ಪಾಂಡೆ ತಿಳಿಸಿದರು.
ಸಾವಿರಾರು ವರ್ಷ ಹಳೆಯ ಕಾಶ್ಮೀರ ಸಮಸ್ಯೆ ಭಾರತ, ಪಾಕಿಂದ ಇತ್ಯರ್ಥ: ಟ್ರಂಪ್
ನ್ಯೂಯಾರ್ಕ್: ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವಾಗಲೂ ಉದ್ವಿಗ್ನತೆ ಇದೆ. ಎರಡೂ ದೇಶಗಳು ಒಂದಲ್ಲ ಒಂದು ರೀತಿಯಲ್ಲಿ ಅದನ್ನು ಬಗೆಹರಿಸಿಕೊಳ್ಳುತ್ತವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ರೋಮ್‌ಗೆ ಹೋಗುವ ದಾರಿಯಲ್ಲಿ ಏರ್ ಫೋರ್ಸ್ ಒನ್‌ನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನಾನು ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳಿಗೆ ತುಂಬಾ ಹತ್ತಿರವಾಗಿದ್ದೇನೆ. 1000 ವರ್ಷಗಳಿಂದ ಕಾಶ್ಮೀರಕ್ಕಾಗಿ ಎರಡೂ ದೇಶಗಳು ಹೋರಾಡುತ್ತಿವೆ. ಗಡಿಯಲ್ಲಿ 1,500 ವರ್ಷಗಳಿಂದ ಉದ್ವಿಗ್ನತೆ ಇದೆ. ಅದನ್ನು ಒಂದಲ್ಲ ಒಂದು ರೀತಿಯಲ್ಲಿ ಅವರು ಬಗೆಹರಿಸುತ್ತಾರೆ ಎಂಬುದು ನನಗೆ ಗೊತ್ತಿದೆ’ ಎಂದರು.
ನದಿಯಲ್ಲಿ ನೀರು ಹರಿಯಬೇಕು, ಅಥವಾ ಭಾರತೀಯರ ರಕ್ತ: ಬಿಲಾವಲ್ ಭುಟ್ಟೋ ಎಚ್ಚರಿಕೆ
ಇಸ್ಲಾಮಾಬಾದ್: ಸಿಂಧೂ ಜಲ ಒಪ್ಪಂದ ಮುರಿದು ಭಾರತ ಪಾಕಿಸ್ತಾನಕ್ಕೆ ನದಿ ನೀರನ್ನು ನಿಲ್ಲಿಸಿದರೆ ನದಿಗಳಲ್ಲಿ ರಕ್ತ ಹರಿಯುತ್ತದೆ’ ಎಂದು ಪಾಕಿಸ್ತಾನ ಪೀಪಲ್ಸ್ ಪಕ್ಷದ ಮುಖ್ಯಸ್ಥ, ಮಾಜಿ ವಿದೇಶಾಂಗ ಸಚಿವ ಬಿಲಾವಾಲ್ ಭುಟ್ಟೋ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಮಾತನಾಡಿದ ಅವರು, ‘ ಸಿಂಧೂ ನಮ್ಮದು ಮತ್ತು ಅದು ನಮ್ಮದಾಗಿಯೇ ಉಳಿಯುತ್ತದೆ. ಅದರ ಮೂಲಕ ನಮ್ಮ ನೀರು ಹರಿಯುತ್ತದೆ. ಅಥವಾ ಅವರ ರಕ್ತ ಹರಿಯುತ್ತದೆ. ಭಾರತ ಸರ್ಕಾರವು ಪಾಕಿಸ್ತಾನದ ನೀರಿನ ಮೇಲೆ ಕಣ್ಣು ಹಾಕಿದೆ.
ನಮ್ಮ ನೀರನ್ನು ರಕ್ಷಿಸಲು ನಾಲ್ಕು ಪ್ರಾಂತ್ಯಗಳು ಒಗ್ಗೂಡಬೇಕು’ ಎಂದಿದ್ದಾರೆ.ಇನ್ನು ಭುಟ್ಟೋ ಹೇಳಿಕೆಗೆ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಪ್ರತಿಕ್ರಿಯಿಸಿದ್ದು, ‘ಅವರನ್ನು ನೀರಿನಲ್ಲಿ ಹಾರಲು ಹೇಳಿ. ಅಂತಹ ಹೇಳಿಕೆಗಳನ್ನು ಗೌರವಿಸಬೇಡಿ. ಮಾನಸಿಕ ಪರಿಸ್ಥಿತಿಯನ್ನು ಪರೀಕ್ಷಿಸಿಕೊಳ್ಳಲು ಹೇಳಿ. ಇದು ಕೇವಲ ಆರಂಭ. ಪಾಕಿಸ್ತಾನ ಕೇವಲ ಒಂದು ರಾಕ್ಷಸ ರಾಷ್ಟ್ರವಲ್ಲ. ಅದು ಅಳಿವಿನಂಚಿನಲ್ಲಿರುವ ದೇಶ’ ಎಂದರು.
ಪಹಲ್ಗಾಂ ದಾಳಿ ಹಿನ್ನೆಲೆ ಇಸ್ಲಾಂ ತ್ಯಜಿಸಿದ ಶಿಕ್ಷಕ
ಕೋಲ್ಕತಾ: ಪಹಲ್ಗಾಂನಲ್ಲಿ ಪ್ರವಾಸಿಗರ ಮೇಲೆ ನಡೆದ ಅಮಾನವೀಯ ದಾಳಿ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಬದುರಿಯಾದಲ್ಲಿನ ಶಾಲಾ ಶಿಕ್ಷಕರೊಬ್ಬರು ಇಸ್ಲಾಂ ಧರ್ಮವನ್ನು ತ್ಯಜಿಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ವಿಡಿಯೋ ಹಂಚಿಕೊಂಡಿರುವ ಶಿಕ್ಷಕ ಸಬೀರ್ ಹುಸೇನ್, ‘ನಾನು ಯಾವ ಧರ್ಮವನ್ನೂ ಅವಮಾನಿಸುತ್ತಿಲ್ಲ. ಕಾಶ್ಮೀರ ಸೇರಿದಂತೆ ವಿವಿಧೆಡೆ ಧರ್ಮವನ್ನು ಹಿಂಸೆಗೆ ಆಯುಧವನ್ನಾಗಿ ಬಳಸಲಾಗುತ್ತಿದೆ. ಇದನ್ನು ಒಪ್ಪಲಾಗದು.
ಆದ್ದರಿಂದ ನಾನು ಯಾವ ಧರ್ಮದ ವ್ಯಾಪ್ತಿಗೂ ಒಳಪಡದೆ, ಕೇವಲ ಮಾನವನಾಗಿ ಗುರುತಿಸಿಕೊಳ್ಳಲು ಬಯಸುತ್ತೇನೆ’ ಎಂದು ಹೇಳಿದ್ದಾರೆ. ಅಂತೆಯೇ, ‘ನನ್ನ ಈ ನಿರ್ಧಾರ ವೈಯಕ್ತಿಕವಾಗಿದ್ದು, ಹೆಂಡತಿ ಮಕ್ಕಳ ಮೇಲೆ ಹೇರುವುದಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ. ಹುಸೇನ್ ತಮ್ಮ ಧಾರ್ಮಿಕ ಗುರುತನ್ನು ತ್ಯಜಿಸಲು ಕೋರ್ಟ್ ಮೊರೆ ಹೋಗಲಿದ್ದಾರೆ ಎಂದು ವರದಿಯಾಗಿದೆ.