ಸಾರಾಂಶ
ಮುಂಡರಗಿ: ಮಲೇರಿಯಾ ನಮ್ಮೊಂದಿಗೆ ಕೊನೆಗೊಳ್ಳುತ್ತದೆ, ಮರುಹೂಡಿಕೆ ಮಾಡಿ, ಮರು ಕಲ್ಪನೆ ಮಾಡಿ, ಮರು ಉತ್ತೇಜನ ಮಾಡೋಣ ಎನ್ನುವುದು ಈ ವರ್ಷದ ಘೋಷವಾಕ್ಯವಾಗಿದೆ. 2027ಕ್ಕೆ ಮಲೇರಿಯಾ ಮುಕ್ತ ಭಾರತವನ್ನಾಗಿ ಮಾಡುವುದು ನಮ್ಮೆಲ್ಲರ ಗುರಿಯಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಲಕ್ಷ್ಮಣ ಪೂಜಾರ ಹೇಳಿದರು.
ಅವರು ಶುಕ್ರವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗದಗ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಳ ಕಾರ್ಯಾಲಯ, ತಾಲೂಕು ಆಡಳಿತ, ತಾಲೂಕು ಪಂಚಾಯತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಇಲ್ಲಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳು ಸಂಯುಕ್ತ ಆಶ್ರಯದಲ್ಲಿ ಇಲ್ಲಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಜರುಗಿದ ತಾಲೂಕು ಮಟ್ಟದ ವಿಶ್ವ ಮಲೇರಿಯಾ ದಿನಾಚಾರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮನೆಗಳ ಸುತ್ತಮುತ್ತ ನೀರು ನಿಲ್ಲದಂತೆ, ಸೊಳ್ಳೆಗಳು ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು. ಈ ಕುರಿತು ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಯಲ್ಲಿ ಹಾಗೂ ಸುತ್ತಮುತ್ತಲಿನ ಮನೆಯವರಿಗೆ ಈ ಬಗ್ಗೆ ತಿಳಿಸಿ ಹೇಳುತ್ತಾರೆ ಎಂದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಮಂಜುಳಾ ಸಜ್ಜನರ ಮಾತನಾಡಿ, ಮಲೇರಿಯಾ ರೋಗವು ಇದು ಬರಿಕಣ್ಣಿಗೆ ಕಾಣಿಸದ ಒಂದು ಅತೀ ಸಣ್ಣ ಕ್ರಿಮಿ. ಇದಕ್ಕೆ ಪರೋಪ ಜೀವಿ ಎಂದು ಕರೆಯಲಾಗುತ್ತದೆ. ಇದು ಅನಾಫಿಲಿಸ ಜಾತಿಯ ಹೆಣ್ಣು ಸೊಳ್ಳೆ. ಮಲೇರಿಯಾ ರೋಗವನ್ನು ಒಬ್ಬರಿಂದೊಬ್ಬರಿಗೆ ಹರಡಿಸುತ್ತದೆ. ಈ ರೋಗದ ಲಕ್ಷಣಗಳು ಮೊದಲು ಚಳಿ, ನಂತರ ವಿಪರೀತ ಜ್ವರ ಸ್ವಲ್ಪ ಹೊತ್ತಿನ ನಂತರ ಮೈಬೆವರುವುದು, ಮೈ-ಕೈ ನೋವು ಇರುತ್ತದೆ.ಈ ರೋಗದಲ್ಲಿ 4 ವಿಧಗಳಿದ್ದು, ಪ್ಲಾಸ್ಮೋಡಿಯಂ ವೈವ್ಯಾಕ್ಸ್, ಪ್ಲಾಸ್ಮೋಡಿಯಂ ಫಾಲ್ಸಿಫಾರಂ, ಪ್ಲಾಸ್ಮೋಡಿಯಂ ಓವಲೆ ಮತ್ತು ಪ್ಲಾಸ್ಮೋಡಿಯಂ ಮಲೇರಿಯಾ ಅದರಲ್ಲಿ ನಮ್ಮ ಕರ್ನಾಟಕದಲ್ಲಿ ಪಿವಿ ಮತ್ತು ಪಿ ಎಫ್ ಹೆಚ್ಚಾಗಿ ಕಂಡು ಬರುತ್ತದೆ. ಇದನ್ನು ರಕ್ತ ಪರೀಕ್ಷೆ ಮಾಡಿಸಿ ರೋಗ ಕಂಡು ಹಿಡಿಯಬಹುದು. ಸರಿಯಾಗಿ ಚಿಕಿತ್ಸೆ ತಗೆದುಕೊಂಡರೆ ಮಾತ್ರ ಅದನ್ನು ಗುಣಪಡಿಸಹಬಹುದು ಎಂದರು. ಹಿ.ಎಚ್.ಐ.ಓ. ಕೆ.ವಿ.ಬಡಿಗೇರ ಮಾತನಾಡಿ, ಮಲೇರಿಯಾ ರೋಗ ಬರದ ಹಾಗೇ ಮನೆಯ ಸುತ್ತ ಮುತ್ತ ನೀರು ನಿಲ್ಲದ ಹಾಗೆ ಸ್ವಚ್ಚವಾಗಿ ಇಡಬೇಕು ಮತ್ತು ಮನೆಯ ಒಳಗೆ ನೀರು ತುಂಬುವ ಪತ್ರೆಗಳನ್ನು ವಾರಕ್ಕೊಮ್ಮೆ ಸ್ವಚ್ಚವಾಗಿ ತೊಳೆದು ಒಣಗಿಸಿ ನೀರು ತುಂಬಿ ಮೇಲಗಡೆ ಮುಚ್ಚಬೇಕು. ಮತ್ತು ಮನೆಯ ಕಿಟಕಿಗಳಿಗೆ ಜಾಲರಿಗಳನ್ನು ಬಳಸಬೇಕು. ಮಲಗುವಾಗ ಸೊಳ್ಳೆ ಪರದೇ ಬಳಸಬೇಕು. ಸಂಜೆ ಬೇವಿನ ಸೊಪ್ಪಿನ ಹೊಗೆ ಹಾಕಬೇಕು ಎಂದರು.
ತರಬೇತಿ ಅಧಿಕಾರಿ ಚನಸಂಗಪ್ಪ ಗಡೆದ ಮಾತನಾಡಿದರು. ಅರುಣಕುಮಾರ ಕಮ್ಮಾರ ಸ್ವಾಗತಿಸಿ, ಗೇಶ ಕಬ್ಬೂರಮಠ ನಿರೂಪಿಸಿ, ಎಸ,ಎಲ್,ಕೋರಿ ವಂದಿಸಿದರು.