ಆರ್ಥಿಕ ಸಂಕಷ್ಟ: ಪಾಕ್‌ನ ಎಲ್ಲ ಸರ್ಕಾರಿ ಉದ್ದಿಮೆ ಖಾಸಗೀಕರಣ

| Published : May 15 2024, 01:30 AM IST

ಆರ್ಥಿಕ ಸಂಕಷ್ಟ: ಪಾಕ್‌ನ ಎಲ್ಲ ಸರ್ಕಾರಿ ಉದ್ದಿಮೆ ಖಾಸಗೀಕರಣ
Share this Article
  • FB
  • TW
  • Linkdin
  • Email

ಸಾರಾಂಶ

ಪಾರದರ್ಶಕತೆಗಾಗಿ ಟೀವಿ ಚಾನಲಲ್ಲಿ ನೇರ ಪ್ರಸಾರ ಮಾಡಲಿದ್ದು, ತೀವ್ರ ಆರ್ಥಿಕ ಸಂಕಷ್ಟದ ಹಿನ್ನೆಲೆ ಪಾಕ್‌ ಪ್ರಧಾನಿ ಷರೀಫ್‌ ನಿರ್ಧಾರ ಕೈಗೊಂಡಿದ್ದಾರೆ.

ಪಿಟಿಐ ಇಸ್ಲಾಮಾಬಾದ್‌

ತೀವ್ರ ಆರ್ಥಿಕ ಸಂಕಷ್ಟದಿಂದ ನಲುಗುತ್ತಿರುವ ಪಾಕಿಸ್ತಾನ ಸರ್ಕಾರ, ‘ಪಾಕಿಸ್ತಾನ್‌ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌’ ಸೇರಿದಂತೆ ಎಲ್ಲ ಸರ್ಕಾರಿ ಉದ್ದಿಮೆಗಳನ್ನೂ ಖಾಸಗೀಕರಣ ಮಾಡುವ ಕ್ರಾಂತಿಕಾರಕ ನಿರ್ಧಾರವನ್ನು ತೆಗೆದುಕೊಂಡಿದೆ. ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಕಂಪನಿಗಳಿಗೆ ಮಾತ್ರ ವಿನಾಯಿತಿ ಇರುತ್ತದೆ.

ಈ ಖಾಸಗೀಕರಣ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಉದ್ದೇಶದಿಂದ ಬಿಡ್ಡಿಂಗ್‌ ಹಾಗೂ ಇನ್ನಿತರೆ ಮಹತ್ವದ ಕ್ರಮಗಳನ್ನು ಟೀವಿ ವಾಹಿನಿಗಳಲ್ಲಿ ನೇರ ಪ್ರಸಾರ ಮಾಡಲು ಉದ್ದೇಶಿಸಿದೆ.

ನಷ್ಟದಲ್ಲಿರುವ ಉದ್ದಿಮೆಗಳನ್ನು ಖಾಸಗೀಕರಣ ಮಾಡಲು ಪಾಕಿಸ್ತಾನ ಸರ್ಕಾರ ಆರಂಭದಲ್ಲಿ ನಿರ್ಧರಿಸಿತ್ತು. ಆದರೆ ಈಗ ಲಾಭದಲ್ಲಿರುವ ಕಂಪನಿಗಳು ಸೇರಿದಂತೆ ಎಲ್ಲ ಸರ್ಕಾರಿ ಉದ್ದಿಮೆಗಳನ್ನು ಖಾಸಗೀಕರಣ ಮಾಡುವ ಕ್ರಾಂತಿಕಾರಕ ನಿರ್ಧಾರವನ್ನು ತೆಗೆದುಕೊಂಡಿದೆ.

ಅತ್ಯುನ್ನತ ಸಭೆಯ ಬಳಿಕ ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್‌ ಅವರು ಈ ತೀರ್ಮಾನವನ್ನು ಪ್ರಕಟಿಸಿದ್ದಾರೆ. ಉದ್ದಿಮೆ ನಡೆಸುವುದು ಸರ್ಕಾರದ ಕೆಲಸವಲ್ಲ. ಉದ್ದಿಮೆಸ್ನೇಹಿ ಹಾಗೂ ಹೂಡಿಕೆಸ್ನೇಹಿ ವಾತಾವರಣ ಇರುವಂತೆ ನೋಡಿಕೊಳ್ಳುವುದಷ್ಟೇ ಸರ್ಕಾರದ ಕರ್ತವ್ಯ. ಹೀಗಾಗಿ ಎಲ್ಲ ಸಚಿವರೂ ಕಂಪನಿಗಳ ಖಾಸಗೀಕರಣಕ್ಕೆ ಕ್ರಮ ತೆಗೆದುಕೊಂಡು, ಖಾಸಗೀಕರಣ ಆಯೋಗದ ಜತೆ ಸಹಕರಿಸಬೇಕು ಎಂದು ಸೂಚನೆ ನೀಡಿದರು.

ಪಾಕಿಸ್ತಾನ ಏರ್‌ಲೈನ್ಸ್‌ನ ಖಾಸಗೀಕರಣ ಪ್ರಕ್ರಿಯೆ ಅಂತಿಮ ಹಂತ ತಲುಪಿದೆ. ಪ್ರತಿ ತಿಂಗಳು 1150 ಕೋಟಿ ರು.ಗಳನ್ನು ಈ ಸಂಸ್ಥೆಯ ಸಾಲ ಮರುಪಾವತಿಗೆಂದೇ ಸರ್ಕಾರ ಬಳಸುತ್ತಿದೆ. ಹೀಗಾಗಿ ಅದರ ಖಾಸಗೀಕರಣಕ್ಕೆ ಮೊದಲ ಆದ್ಯತೆ ನೀಡುತ್ತಿದೆ. ಅತಿ ಹೆಚ್ಚು ನಷ್ಟದಲ್ಲಿರುವ ಪಾಕಿಸ್ತಾನದ ಉದ್ದಿಮೆಗಳ ಪೈಕಿ ಪಾಕಿಸ್ತಾನ ಏರ್‌ಲೈನ್ಸ್‌ ಮೂರನೇ ಸ್ಥಾನದಲ್ಲಿದೆ ಎಂದು ವರದಿಗಳು ತಿಳಿಸಿವೆ.