ಸಾರಾಂಶ
ರಾಷ್ಟ್ರರಾಜಧಾನಿಯಲ್ಲಿರುವ ಪಾಕಿಸ್ತಾನದ ದೂತಾವಾಸ, ಭಾರತದ ವಿರುದ್ಧವೇ ಪಿತೂರಿ ನಡೆಸುತ್ತಿರುವ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ರಾಯಭಾರ ಕಚೇರಿಯ ವೀಸಾ ವಿಭಾಗದಲ್ಲಿ, ವೀಸಾ ಪಡೆಯಲು ಬರುವ ಭಾರತೀಯರನ್ನು ಪಾಕ್ ಪರ ಬೇಹುಗಾರಿಕೆಗೆ ನೇಮಿಸಿಕೊಳ್ಳಲಾಗುತ್ತಿತ್ತು ಎಂದು ಉನ್ನತ ಗುಪ್ತಚರ ಮಾಹಿತಿ
ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿರುವ ಪಾಕಿಸ್ತಾನದ ದೂತಾವಾಸ, ಭಾರತದ ವಿರುದ್ಧವೇ ಪಿತೂರಿ ನಡೆಸುತ್ತಿರುವ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ರಾಯಭಾರ ಕಚೇರಿಯ ವೀಸಾ ವಿಭಾಗದಲ್ಲಿ, ವೀಸಾ ಪಡೆಯಲು ಬರುವ ಭಾರತೀಯರನ್ನು ಪಾಕ್ ಪರ ಬೇಹುಗಾರಿಕೆಗೆ ನೇಮಿಸಿಕೊಳ್ಳಲಾಗುತ್ತಿತ್ತು ಎಂದು ಉನ್ನತ ಗುಪ್ತಚರ ಮೂಲಗಳು ಮಾಹಿತಿ ನೀಡಿವೆ ಎಂದು ಟೀವಿ ಚಾನೆಲ್ ಒಂದು ವರದಿ ಮಾಡಿದೆ.
ಇತ್ತೀಚೆಗಷ್ಟೇ, ಹರ್ಯಾಣದ ಪಲ್ವಾಲ್‌ನಲ್ಲಿ ವಾಸಿಂ ಅಕ್ರಂ ಎಂಬ ಯೂಟ್ಯೂಬರ್‌ನನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದರು ಹಾಗೂ ಆತನಿಗೆ ಪಾಕ್ ನಂಟಿರುವುದು ಪತ್ತೆಯಾಗಿತ್ತು. ಇದೀಗ ಆತ ಕೊರಿಯರ್ ಕೊಡುವ ನೆಪದಲ್ಲಿ ದೂತಾವಾಸಕ್ಕೆ ಹೋಗಿ, ಗುಪ್ತ ಮಾಹಿತಿಗಳನ್ನು ನೀಡುತ್ತಿದ್ದುದು ತಿಳಿದುಬಂದಿದೆ. ಇದರೊಂದಿಗೆ, ವೀಸಾ ನೀಡುವ ಹೆಸರಲ್ಲಿ ನಡೆಯುತ್ತಿರುವ ಗುಪ್ತದಂಧೆ ಬೆಳಕಿಗೆ ಬಂದಿದೆ.
ಈ ಮೊದಲು ಹರ್ಯಾಣದವಳೇ ಆದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಕೂಡ ಪಾಕ್ ರಾಯಭಾರಿಗಳ ಜತೆ ಸಂಪರ್ಕದಲ್ಲಿದ್ದು ಸಿಕ್ಕಿಬಿದ್ದಿದ್ದಳು.
ಪ್ರಕ್ರಿಯೆ ಹೇಗೆ?:
ಸಿವಿಲ್ ಎಂಜಿನಿಯರ್ ಆಗಿದ್ದ ಅಕ್ರಂ ಹೇಗೆ ಗುಪ್ತಚರನಾಗಿ ನೇಮಕವಾದ ಎಂದು ನೋಡುವುದಾದರೆ, 2022ರಲ್ಲಿ ಪಾಕ್ ವೀಸಾಗಾಗಿ ಆತ ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿತ್ತು. ಬಳಿಕ 20,000 ರು. ಲಂಚ ನೀಡಿದಾಗ ಅದು ಲಭಿಸಿತ್ತು. ಕೊಂಚ ಸಮಯದ ಬಳಿಕ ಹ್ಯಾಂಡ್ಲರ್ ಒಬ್ಬನಿಂದ ಅಕ್ರಂಗೆ 4-5 ಲಕ್ಷ ರು. ನೀಡಿ, ಸಿಮ್ ಕಾರ್ಡ್ ಕೂಡ ಒದಗಿಸಲಾಯಿತು.
ಆತ ಪಾಕಿಸ್ತಾನಕ್ಕೆ ಹೋಗಿಬಂದ ನಂತರವೂ ದೂತಾವಾಸದೊಂದಿಗೆ ಸಂಪರ್ಕದಲ್ಲಿದ್ದ. ಹಣಕಾಸು ಮತ್ತು ಲಾಜಿಸ್ಟಿಕ್ಸ್ ಒದಗಿಸುವ ಕೆಲಸ ಮಾಡುವ ಸೋಗಿನಲ್ಲಿ ಭಾರತೀಯ ಸೈನಿಕರಿಗೆ ಸೇರಿದ ಸಿಮ್ ಕಾರ್ಡ್, ಒಟಿಪಿ ಹಾಗೂ ಇತರೆ ಮಾಹಿತಿಯನ್ನು ಒದಗಿಸುತ್ತಿದ್ದ.
ಅಕ್ರಂನಂತೆ ವೀಸಾಗಾಗಿ ಬರುವವರನ್ನು ಬೇಹುಗಾರರನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಈ ಕೆಲವನ್ನು ಮುಖ್ಯವಾಗಿ, ಪಾಕಿಸ್ತಾನದಲ್ಲಿ ಸಂಬಂಧಿಕರನ್ನು ಹೊಂದಿರುವ ಗಡಿಪ್ರದೇಶದವರಿಗೆ ವಹಿಸಲಾಗುತ್ತದೆ. ಅವರೊಂದಿಗೆ ವಾಟ್ಸ್‌ಅಪ್‌ನಲ್ಲಿ ಸಂಪರ್ಕದಲ್ಲಿದ್ದು, ಯುಪಿಐ ಮೂಲಕ ಹಣ ಕೊಡಲಾಗುತ್ತದೆ.