ಡ್ರಾಫ್ಟ್‌ ಸಂದೇಶ ಹಾಕಿ ಷರೀಫ್‌ ಪ್ರಮಾದ

ಅಮೆರಿಕವೇ ಟ್ವೀಟ್ ಮಾಡಿಸಿತ್ತೆ ಎಂಬ ಪ್ರಶ್ನೆ

ಇಸ್ಲಾಮಾಬಾದ್‌: ಅಮೆರಿಕ-ಇರಾನ್ ಯುದ್ಧ ನಿಲ್ಲಿಸಿದ ಗುಂಗಿನಲ್ಲಿರುವ ಪಾಕಿಸ್ತಾನದ ನಿಲುವು, ನಿರ್ಧಾರಗಳು ವಿದೇಶದಿಂದ (ಅಮೆರಿಕದಿಂದ) ನಿರ್ಧರಿಸಲ್ಪಡುತ್ತಿವೆಯೇ ಎಂಬ ಸಂಶಯ ಉದ್ಭವಿಸಿದೆ. ಈ ಚರ್ಚೆಯನ್ನು ಹುಟ್ಟುಹಾಕಿರುವುದು, ಎಕ್ಸ್‌ನಲ್ಲಿ ಪ್ರಧಾನಿ ಶೆಹಬಾಜ್‌ ಷರೀಫ್‌ ಅವರು ಮಾಡಿರುವ ಒಂದು ‘ಡ್ರಾಫ್ಟ್‌’ ಪೋಸ್ಟ್‌.

ಹೋರ್ಮುಜ್‌ ಜಲಸಂಧಿ ಮೇಲಿನ ನಿರ್ಬಂಧ ತೆರವು ಸೇರಿದಂತೆ ತನ್ನೆಲ್ಲಾ ಷರತ್ತುಗಳಿಗೆ ಒಪ್ಪಲು ಮತ್ತು ಅದಕ್ಕಾಗಿ ರಾಜತಾಂತ್ರಿಕ ಮಾತುಕತೆ ನಡೆಸಲು ಇರಾನ್‌ಗೆ ನೀಡಲಾಗಿರುವ ಗಡುವನ್ನು ಇನ್ನಷ್ಟು ವಿಸ್ತರಿಸಬೇಕು ಹಾಗೂ ಇರಾನ್‌ ಕೂಡಲೇ ಹೋರ್ಮುಜ್‌ಅನ್ನು ಹಡಗುಗಳ ಓಡಾಟಕ್ಕೆ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿ ಷರೀಫ್‌ ಒಂದು ಪೋಸ್ಟ್‌ ಮಾಡಿದ್ದರು. ಅದರೆ ಅದು ‘ಡ್ರಾಫ್ಟ್‌’(ಸಂದೇಶದ ಪ್ರಾಥಮಿಕ ಆವೃತ್ತಿ) ಸಂದೇಶವಾಗಿತ್ತು. ಅಂತಿಮ ಸಂದೇಶ ಆಗಿರಲಿಲ್ಲ. ಬಳಿಕ ಪ್ರಮಾದ ಅರಿತು ಡ್ರಾಫ್ಟ್‌ ಎಂಬುದನ್ನು ತೆಗೆದು ಹಾಕಲಾಗಿದೆ. ಹೀಗಾಗಿ ಡ್ರಾಫ್ಟ್‌ ಪದವು ಹಲವು ಚರ್ಚೆಗೆ ನಾಂದಿ ಹಾಡಿದೆ.ದೇಶದ ಪ್ರಧಾನಿಯೊಬ್ಬರ ದಿಟ್ಟ ಆಗ್ರಹದ ಸೂಚಕವಾಗಬೇಕಿದ್ದ ಆ ಪೋಸ್ಟ್‌ ಅವರ ಸ್ವಂತದ್ದಲ್ಲವೇ? ಅದನ್ನು ಬರೆದವರು ಯಾರು? ವಿದೇಶಗಳು ತಮಗೆ ಬೇಕಾಗಿದ್ದನ್ನು ಅವರ ಖಾತೆಯ ಮೂಲಕ ಹೇಳುತ್ತಿದ್ದಾವೆಯೇ? ಎಂಬೆಲ್ಲಾ ಅನುಮಾನಗಳು ಮೂಡಿವೆ.ಈ ಹಿಂದೆ ಪಾಕಿಸ್ತಾನದ ಕೆಲ ಪತ್ರಿಕೆಗಳು ಎಐ ಕೈಲಿ ಬರೆಸಿದ ಸುದ್ದಿಯನ್ನು ಪ್ರಾಮ್ಟ್‌(ನಿರ್ದೇಶನ) ಸಮೇತ ಪ್ರಕಟಿಸಿ ಟೀಕೆಗೆ ಆಹಾರವಾಗಿದ್ದವು.