ವಾಘಾ ಗಡಿ ತೆರೆಯಲು ಒಪ್ಪಿದ ಪಾಕಿಸ್ತಾನ

| N/A | Published : May 03 2025, 12:22 AM IST / Updated: May 03 2025, 04:47 AM IST

ಸಾರಾಂಶ

 ಭಾರತದ ವೀಸಾ ಸ್ಥಗಿತ ನಿಯಮದ ಬಳಿಕ ಭಾರತ- ಪಾಕ್‌ ಗಡಿಯಲ್ಲಿ ಸಿಲುಕಿದ್ದ ತನ್ನ ನಾಗರಿಕರು ವಾಘಾ ಗಡಿ ಮೂಲಕ ತವರಿಗೆ ಮರಳಲು ಅವಕಾಶ ನೀಡುವುದಾಗಿ ಪಾಕಿಸ್ತಾನ ಘೋಷಿಸಿದೆ.

ಇಸ್ಲಾಮಾಬಾದ್‌ : ಭಾರತದ ವೀಸಾ ಸ್ಥಗಿತ ನಿಯಮದ ಬಳಿಕ ಭಾರತ- ಪಾಕ್‌ ಗಡಿಯಲ್ಲಿ ಸಿಲುಕಿದ್ದ ತನ್ನ ನಾಗರಿಕರು ವಾಘಾ ಗಡಿ ಮೂಲಕ ತವರಿಗೆ ಮರಳಲು ಅವಕಾಶ ನೀಡುವುದಾಗಿ ಪಾಕಿಸ್ತಾನ ಘೋಷಿಸಿದೆ.

ವಿವಿಧ ರೀತಿಯ ವೀಸಾ ಪಡೆದವರು ಏ.30ರೊಳಗೆ ಪಾಕ್‌ಗೆ ಮರಳಬೇಕು ಎಂಬ ತನ್ನ ನಿಯಮವನ್ನು ಭಾರತ ಸಡಿಲಿಸಿದ ಬಳಿಕ 70ಕ್ಕೂ ಹೆಚ್ಚು ಪಾಕ್‌ ಪ್ರಜೆಗಳು ಗುರುವಾರ ಅಟ್ಟಾರಿ- ವಾಘಾ ಗಡಿಯ ಮೂಲಕ ಪಾಕಿಸ್ತಾನಕ್ಕೆ ತೆರಳಲು ಆಗಮಿಸಿದ್ದರು. ಆದರೆ ಪಾಕಿಸ್ತಾನ ತನ್ನ ಕಡೆಯ ಗಡಿಬಾಗಿಲು ಮುಚ್ಚಿದ್ದ ಕಾರಣ ಅವರೆಲ್ಲಾ 24 ಗಂಟೆಗಳಿಂದ ಎಲ್ಲಿಯೂ ತೆರಳಲಾಗದೇ ಗಡಿಯಲ್ಲೇ ಕಾದು ಕುಳಿತಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ಭಾರೀ ಟೀಕೆ ವ್ಯಕ್ತವಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಪಾಕಿಸ್ತಾನ, ಗಡಿ ಬಾಗಿಲು ತೆರೆದು ಸ್ವದೇಶಿಯರನ್ನು ಕರೆಸಿಕೊಳ್ಳುವುದಾಗಿ ಹೇಳಿದೆ.

ಈ ಬಗ್ಗೆ ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ವಕ್ತಾರರು ಪ್ರತಿಕ್ರಿಯಿಸಿದ್ದು, ಅಟ್ಟಾರಿಯಲ್ಲಿ ಕೆಲವು ಪಾಕಿಸ್ತಾನಿ ಪ್ರಜೆಗಳು ಸಿಲುಕಿಕೊಂಡಿದ್ದಾರೆ ಎನ್ನುವ ವರದಿಗಳನ್ನು ಗಮನಿಸಿದ್ದೇವೆ. ಭಾರತೀಯ ಅಧಿಕಾರಿಗಳು ನಮ್ಮ ದೇಶದ ನಾಗರಿಕರು ಗಡಿದಾಟಲು ಅನುಮತಿಸಿದರೆ ಅವರನ್ನು ಸ್ವೀಕರಿಸಲು ನಾವು ಮುಕ್ತರಾಗಿದ್ದೇವೆ. ಭವಿಷ್ಯದಲ್ಲಿಯೂ ಮರಳಲು ಬಯಸುವ ಪಾಕಿಸ್ತಾನಿ ಪ್ರಜೆಗಳಿಗೆ ವಾಘಾ ಗಡಿ ತೆರೆದಿರುತ್ತದೆ’ ಎಂದಿದ್ದಾರೆ.