ಸಾರಾಂಶ
ವ್ಯೂಹಾತ್ಮಕ ದಾಳಿಗಳಿಂದ ತತ್ತರಿಸಿ ರಣೋತ್ಸಾಹ ತೋರಿಸಿದ ಪಾಕಿಸ್ತಾನಕ್ಕೆ ಭಾರತ ಯುದ್ಧಕ್ಕೆ ನಾವು ರೆಡಿ ಎಂಬ ಪ್ರತ್ಯುತ್ತರ ರವಾನಿಸಿದೆ.
ನವದೆಹಲಿ: ಪಹಲ್ಗಾಂ ದಾಳಿಯ ಭಾರತದ ಕೈಗೊಂಡ ರಾಜತಾಂತ್ರಿಕ ಮತ್ತು ಇತರೆ ವ್ಯೂಹಾತ್ಮಕ ದಾಳಿಗಳಿಂದ ತತ್ತರಿಸಿ ರಣೋತ್ಸಾಹ ತೋರಿಸಿದ ಪಾಕಿಸ್ತಾನಕ್ಕೆ ಭಾರತ ಯುದ್ಧಕ್ಕೆ ನಾವು ರೆಡಿ ಎಂಬ ಪ್ರತ್ಯುತ್ತರ ರವಾನಿಸಿದೆ. ಭಾರತೀಯ ನೌಕಾಪಡೆಯು ಭಾನುವಾರ ದೇಶದ ಕರಾವಿ ತೀರದಲ್ಲಿ ಶತ್ರುಗಳ ಯುದ್ಧನೌಕೆಗಳನ್ನು ನಾಶಪಡಿಸುವ ಹಲವು ಕ್ಷಿಪಣಿಗಳ ಪರೀಕ್ಷೆ ನಡೆಸಿ ಪಾಕಿಸ್ತಾನಕ್ಕೆ ಯುದ್ಧ ಸನ್ನದ್ಧತೆಯ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಈ ಬಗ್ಗೆ ನೌಕಾಪಡೆ ಅಧಿಕಾರಿಗಳು ಮಾಹಿತಿ ನೀಡಿದ್ದು, ‘ದೂರದಲ್ಲಿರುವ ಗುರಿಯ ಮೇಲೆ ನಿಖರವಾಗಿ ಆಕ್ರಮಣ ಮಾಡುವ ಸಲುವಾಗಿ ವೇದಿಕೆ, ವ್ಯವಸ್ಥೆ ಮತ್ತು ಸಿಬ್ಬಂದಿಯ ಸನ್ನದ್ಧತೆಯನ್ನು ಮರುಮೌಲ್ಯಮಾಪನ ಮಾಡಲು ಮತ್ತು ಸಾಮರ್ಥ್ಯವನ್ನು ಪ್ರದರ್ಶಿಸಲು ಹಲವು ಹಡಗು ವಿರೋಧಿ ಗುಂಡಿನ ದಾಳಿಗಳನ್ನು ಯಶಸ್ವಿ ಕೈಗೊಳ್ಳಲಾಯಿತು. ಯಾವುದೇ ಸಮಯ, ಸಂದರ್ಭ, ಪ್ರದೇಶದಲ್ಲಿ ದೇಶದ ಕಡಲ ಹಿತಾಸಕ್ತಿಗಳನ್ನು ಕಾಪಾಡಲು ಭಾರತೀಯ ನೌಕಾಪಡೆ ಯುದ್ಧಕ್ಕೆ ಸದಾ ಸಿದ್ಧವಾಗಿದೆ’ ಎಂದು ತಿಳಿಸಿದ್ದಾರೆ.
ಮೂರು ದಿನದ ಹಿಂದೆ ಕೂಡಾ ಭಾರತೀಯ ನೌಕಾಪಡೆ ಇಂಥದ್ದೇ ಕ್ಷಿಪಣಿ ಪರೀಕ್ಷೆ, ಭಾರತೀಯ ವಾಯುಪಡೆ ಯುದ್ಧ ವಿಮಾನಗಳ ಹಾರಾಟದ ಮೂಲಕ ಪಾಕಿಸ್ತಾನಕ್ಕೆ ಸಂದೇಶ ರವಾನಿಸಿತ್ತು.