ಸಾರಾಂಶ
ನವದೆಹಲಿ: ಪಾಕಿಸ್ತಾನದ 16 ಯೂಟ್ಯೂಬ್ ವಾಹಿನಿಗಳಿಗೆ ನಿಷೇಧ ಹೇರಿದ ಬೆನ್ನಲ್ಲೆ, ಇದೀಗ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಅಧಿಕೃತ ಯೂಟ್ಯೂಬ್ ಖಾತೆಗೂ ಭಾರತ ಸರ್ಕಾರ ನಿಷೇಧ ಹೇರಿದೆ. ಅಲ್ಲದೆ, ಪಾಕಿಸ್ತಾನದ ಚಿತ್ರನಟ ಫವಾದ್ ಖಾನ್, ಸಂಗೀತಗಾರ ರಾಹತ್ ಫತೇಹ್ ಅಲಿ ಖಾನ್, ಕ್ರಿಕೆಟಿಗರಾದ ಬಾಬರ್ ಆಜಂ, ಮೊಹಮ್ಮದ್ ರಿಜ್ವಾನ್, ಶಾಹೀನ್ ಅಫ್ರಿದಿ, ಶೋಯೆಬ್ ಮಲಿಕ್, ಶೋಯೆಬ್ ಅಖ್ತರ್ ಮೊದಲಾದವರ ಇನ್‌ಸ್ಟಾಗ್ರಾಂ ಖಾತೆಗಳಿಗೂ ನಿಷೇಧ ಹೇರಲಾಗಿದೆ. ‘ಪಾಕಿಸ್ತಾನಕ್ಕೆ ಭಾರತ ನೀರು ಬಿಡದಿದ್ದರೆ, ಪೂರ್ಣ ಬಲದಿಂದ ಉತ್ತರಿಸಬೇಕಾಗುತ್ತದೆ’ ಎಂದು ಶಹಬಾಜ್ ಷರೀಫ್ ಭಾರತದ ವಿರುದ್ಧ ಭಾಷಣ ಮಾಡಿದ ಬೆನ್ನಲ್ಲೆ ಈ ಕ್ರಮ ಕೈಗೊಳ್ಳಲಾಗಿದೆ.
ಪಹಲ್ಗಾಂ ನ್ಯಾಯಕ್ಕಾಗಿ ದೇಶ ಕಾಯುತ್ತಿದೆ: ಖರ್ಗೆ
ನವದೆಹಲಿ: ಪಹಲ್ಗಾಂ ದಾಳಿಯ ವಿಚಾರವಾಗಿ ‘ಇಡೀ ದೇಶ ಹೊಣೆಗಾರಿಕೆ, ಉತ್ತರ ಮತ್ತು ನ್ಯಾಯಕ್ಕಾಗಿ ಕಾಯುತ್ತಿದೆ. ‘ ಉಗ್ರ ದಾಳಿಯಿಂದ ಉಂಟಾದ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ಯಾವುದೇ ಕಾರ್ಯತಂತ್ರವನ್ನು ಹೊರತಂದಿಲ್ಲ. ಆದರೆ ಇಡೀ ವಿಪಕ್ಷವು ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಜೊತೆಗಿದೆ’ ಎಂದರು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಿಡಬ್ಲ್ಯುಸಿ ಸಭೆಯಲ್ಲಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ದೆಹಲಿಯಲ್ಲಿ ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಸಿಡಬ್ಲ್ಯುಸಿಯಲ್ಲಿ ಸಭೆಯಲ್ಲಿ ಮಾತನಾಡಿದ ಅವರು, ‘ಇಡೀ ದೇಶ ಹೊಣೆಗಾರಿಕೆ, ಉತ್ತರಗಳು ಮತ್ತು ನ್ಯಾಯಕ್ಕಾಗಿ ಕಾಯುತ್ತಿದೆ. ಕ್ಷಮಿಸುವುದಕ್ಕೆ ಸಾಧ್ಯವಾಗದ ಇಂತಹ ಸಮಯದಲ್ಲಿ ಇದು ರಾಜಕೀಯಕ್ಕೆ ಸಮಯವಲ್ಲ. ಬದಲಾಗಿ ಏಕತೆ, ಶಕ್ತಿ ಮತ್ತು ರಾಷ್ಟ್ರೀಯ ಸಂಕಲ್ಪಕ್ಕಾಗಿ ಕರೆ ನೀಡುವ ಸಮಯ. ನಾವು ಪಕ್ಷಪಾತದ ವಿಭಜನೆಗಳನ್ನು ಮೀರಿ ನಿಂತು ಭಾರತ ಒಟ್ಟಾಗಿ ನಿಲ್ಲುತ್ತದೆ ಎಂಬ ಸಂದೇಶ ಸಾರಬೇಕು. ಪಾಕಿಸ್ತಾನಕ್ಕೆ ಪಾಠ ಕಲಿಸಲು ಮತ್ತು ಭಯೋತ್ಪಾದನೆ ನಿಗ್ರಹಿಸಲು ಒಗ್ಗಟ್ಟಾಗಿರಬೇಕು’ ಎಂದರು.
ಪಾಕ್ ವಾಯುಸೀಮೆಗೆ ವಿದೇಶಿ ವಿಮಾನಗಳೂ, ಇಲ್ಲ: ಆರ್ಥಿಕ ಹೊಡೆತ
ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧಾತಂಕ ತೀವ್ರವಾಗುತ್ತಿರುವ ಕಾರಣ ವಿದೇಶಗಳ ಪ್ರಮುಖ ವಿಮಾನಯಾನ ಸಂಸ್ಥೆಗಳು ಪಾಕ್ ವಾಯುಸೀಮೆ ಪ್ರವೇಶಿಸಲು ಸ್ವಯಂಪ್ರೇರಿತವಾಗಿ ಹಿಂದೇಟು ಹಾಕುತ್ತಿವೆ. ಕಳೆದೆರಡು ದಿನಗಳಿಂದ, ಲುಫ್ತಾನ್ಸಾ, ಬ್ರಿಟಿಷ್ ಏರ್ವೇಸ್, ಸ್ವಿಸ್, ಏರ್ ಫ್ರಾನ್ಸ್, ಇಟಲಿಯ ಐಟಿಎ ಮತ್ತು ಪೋಲೆಂಡ್‌ನ ಲಾಟ್ ಪಾಕಿಸ್ತಾನದ ವಾಯುಸೀಮೆ ಪ್ರವೇಶಿಸದೆ ಹಾರಾಟ ನಡೆಸಿವೆ. ಭಾರತದ ವಿಮಾನಗಳಿಗೆ ಈಗಾಗಲೇ ಪಾಕಿಸ್ತಾನ ತನ್ನ ವಾಯುಸೀಮೆ ಪ್ರವೇಶಿಸದಂತೆ ನಿರ್ಬಂಧ ಹೇರಿದೆ. ಇದೀಗ ಇನ್ನುಳಿದ ವಿಮಾನಗಳೂ ನಿರಾಕರಿಸುತ್ತಿರುವ ಕಾರಣ ವಾಯುಸೀಮೆ ಪ್ರವೇಶಕ್ಕೆ ವಿಧಿಸುವ ಶುಲ್ಕಕ್ಕೆ ಕಡಿತ ಬೀಳಲಿದೆ. ಇದರಿಂದಾಗಿ ಪಾಕ್ ಸರ್ಕಾರಕ್ಕೆ ಆರ್ಥಿಕವಾಗಿ ಭಾರೀ ಹೊಡೆತ ಬೀಳಲಿದೆ.
ಭಾರತ-ಪಾಕ್ ಉದ್ವಿಗ್ನತೆ ಶಮನಕ್ಕೆ ಶೀಘ್ರ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆ
ವಿಶ್ವಸಂಸ್ಥೆ: ‘ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನ ಪರಿಸ್ಥಿತಿಯ ಕುರಿತು ಚರ್ಚಿಸಲು ಶೀಘ್ರದಲ್ಲೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆ (ಯುಎನ್‌ಎಸ್‌ಸಿ) ನಡೆಯಲಿದೆ. ಇದು ಉಭಯ ದೇಶಗಳ ಬಿಕ್ಕಟ್ಟಿನ ಕುರಿತು ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಮತ್ತು ಉದ್ವಿಗ್ನತೆ ಕಡಿಮೆ ಮಾಡಲು ಒಂದು ಅವಕಾಶವಾಗಿದೆ’ ಎಂದು ಯುಎನ್‌ಎಸ್‌ಸಿ ಮೇ ತಿಂಗಳ ಅಧ್ಯಕ್ಷ ಇವಾಂಜೆಲೋಸ್ ಸೆಕೆರಿಸ್ ತಿಳಿಸಿದ್ದಾರೆ.
ಪರಮಾಣು ಶಸ್ತ್ರ ಹೊಂದಿರುವ ದಕ್ಷಿಣ ಏಷ್ಯಾದ ನೆರೆಹೊರೆಯ ರಾಷ್ಟ್ರಗಳಾದ ಭಾರತ-ಪಾಕ್ ನಡುವಿನ ಸಂಘರ್ಷದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ‘ಪಹಲ್ಗಾಂನಲ್ಲಿ ಅಮಾಯಕರ ಹತ್ಯೆಗೈದ ಉಗ್ರರ ಹೀನ ದಾಳಿಯನ್ನು ಬಲವಾಗಿ ಖಂಡಿಸುತ್ತೇವೆ. ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಈ ಉದ್ವಿಗ್ನತೆಯ ಬಗ್ಗೆ ನಾವು ಚಿಂತಿತರಾಗಿದ್ದೇವೆ. ಪರಿಸ್ಥಿತಿಯು ಕೈಮೀರದಂತೆ ಉಭಯ ರಾಷ್ಟ್ರಗಳ ನಾಯಕರ ಜೊತೆಗೆ ಮಾತನಾಡುತ್ತಿದ್ದೇವೆ. ಈ ಕುರಿತು ಸಭೆ ನಡೆಯಬೇಕಾಗಿದ್ದು, ತಯಾರಿ ನಡೆಸುತ್ತಿದ್ದೇವೆ’ ಎಂದರು.
ಪಹಲ್ಗಾಂ ದಾಳಿ ಬಳಿಕ ಭಾರತದ ಮೇಲೆ 10 ಲಕ್ಷ ಸೈಬರ್ ದಾಳಿ!
ಮುಂಬೈ: ಪಹಲ್ಗಾಂ ನರಮೇಧದ ಬಳಿಕ ಪಾಕಿಸ್ತಾನ ಸೇರಿದಂತೆ ವಿವಿಧ ದೇಶಗಳ ಹ್ಯಾಕಿಂಗ್ ಗುಂಪುಗಳು ಭಾರತದ ವೆಬ್‌ಸೈಟ್ ಮತ್ತು ಪೋರ್ಟಲ್ ಗುರಿಯಾಗಿಸಿ 10 ಲಕ್ಷಕ್ಕೂ ಹೆಚ್ಚು ಸೈಬರ್ ದಾಳಿ ನಡೆಸಿದೆ ಎಂಬ ವಿಷಯ ಬೆಳಕಿಗೆ ಬಂದಿದೆ.
ಏ.22ರ ಪಹಲ್ಗಾಂ ದಾಳಿಯ ಬಳಿಕ ಮಹಾರಾಷ್ಟ್ರದಲ್ಲಿ ಡಿಜಿಟಲ್ ದಾಳಿಗಳು ಹೆಚ್ಚಾಗಿರುವುದನ್ನು ಮಹಾರಾಷ್ಟ್ರ ಸೈಬರ್ ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಬಗ್ಗೆ ಮಹಾರಾಷ್ಟ್ರ ಸೈಬರ್ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಯಶಸ್ವಿ ಯಾದವ್ ಮಾಹಿತಿ ನೀಡಿದ್ದು, ‘ಪಹಲ್ಗಾಂ ದಾಳಿಯ ನಂತರ ಭಾರತದ ಮೇಲೆ 10 ಲಕ್ಷಕ್ಕೂ ಹೆಚ್ಚು ಸೈಬರ್ ದಾಳಿ ನಡೆದಿವೆ. ಈ ದಾಳಿಗಳನ್ನು ಪಾಕಿಸ್ತಾನ, ಮಧ್ಯಪ್ರಾಚ್ಯ, ಇಂಡೋನೇಷ್ಯಾ ಮತ್ತು ಮೊರಾಕ್ಕೋದಿಂದ ನಡೆಸಲಾಗಿದೆ. ಹಲವು ಹ್ಯಾಕಿಂಗ್ ಗುಂಪುಗಳು ತಮ್ಮನ್ನು ಇಸ್ಲಾಮಿಕ್ ಗುಂಪುಗಳು ಎಂದು ಹೇಳಿಕೊಂಡಿವೆ. ಇದು ಬಹುಶಃ ಸೈಬರ್ ಯುದ್ಧವಾಗಿರಬಹುದು’ ಎಂದಿದ್ದಾರೆ.