ಉಗ್ರವಾದಕ್ಕೆ ನೆರವು ಒಪ್ಪಿದ ಪಾಕ್‌ಧೂರ್ತ ದೇಶ : ವಿಶ್ವಸಂಸ್ಥೇಲಿ ಭಾರತ

| N/A | Published : Apr 30 2025, 12:37 AM IST / Updated: Apr 30 2025, 09:05 AM IST

ಉಗ್ರವಾದಕ್ಕೆ ನೆರವು ಒಪ್ಪಿದ ಪಾಕ್‌ಧೂರ್ತ ದೇಶ : ವಿಶ್ವಸಂಸ್ಥೇಲಿ ಭಾರತ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ-ಪಾಕಿಸ್ತಾನದ ಸಂಬಂಧ ದಿನೇ ದಿನೇ ಬಿಗಡಾಯಿಸುತ್ತಿರುವ ನಡುವೆಯೇ, ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಗುಡುಗಿದೆ. ಪಾಕಿಸ್ತಾನವನ್ನು ಜಾಗತಿಕ ಭಯೋತ್ಪಾದನೆಗೆ ಉತ್ತೇಜನ ನೀಡುತ್ತಿರುವ ಧೂರ್ತ ದೇಶ ಎಂದು ಕಿಡಿಕಾರಿದೆ.

ವಿಶ್ವಸಂಸ್ಥೆ: ಭಾರತ-ಪಾಕಿಸ್ತಾನದ ಸಂಬಂಧ ದಿನೇ ದಿನೇ ಬಿಗಡಾಯಿಸುತ್ತಿರುವ ನಡುವೆಯೇ, ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಗುಡುಗಿದೆ. ಪಾಕಿಸ್ತಾನವನ್ನು ಜಾಗತಿಕ ಭಯೋತ್ಪಾದನೆಗೆ ಉತ್ತೇಜನ ನೀಡುತ್ತಿರುವ ಧೂರ್ತ ದೇಶ ಎಂದು ಕಿಡಿಕಾರಿದೆ.

ವಿಶ್ವಸಂಸ್ಥೆಯ ಭಯೋತ್ಪಾದನಾ ನಿಗ್ರಹ ಕಚೇರಿಯ ‘ವಿಕ್ಟಿಮ್ಸ್ ಆಫ್ ಟೆರರಿಸಂ ಅಸೋಸಿಯೇಷನ್ ನೆಟ್‌ವರ್ಕ್’ ಕಾರ್ಯಕ್ರಮದಲ್ಲಿ ಮಾತನಾಡಿದ ಭಾರತದ ಕಾಯಂ ಉಪ ಪ್ರತಿನಿಧಿ, ರಾಯಭಾರಿ ಯೋಜನಾ ಪಟೇಲ್, ‘ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರು, ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸುವ, ತರಬೇತಿ ನೀಡುವ ಮತ್ತು ಹಣಕಾಸು ಒದಗಿಸುವ ಪಾಕಿಸ್ತಾನದ ಇತಿಹಾಸವನ್ನು ಒಪ್ಪಿಕೊಂಡಿದ್ದಾರೆ. ಇದರಿಂದ ಪಾಕ್‌ನ ನೈಜ ಬಣ್ಣ ಬಯಲಾಗಿದೆ. ಪಾಕಿಸ್ತಾನ ಜಾಗತಿಕ ಭಯೋತ್ಪಾದನೆಗೆ ಉತ್ತೇಜನ ನೀಡುತ್ತಿರುವ ರಾಕ್ಷಸ ರಾಷ್ಟ್ರ ಎಂಬುದನ್ನು ಇದು ಬಹಿರಂಗಪಡಿಸಿದೆ’ ಎಂದಿದ್ದಾರೆ.

ಇದೇ ವೇಳೆ ಪಹಲ್ಗಾಂ ದಾಳಿಯ ನಂತರ ಭಾರತಕ್ಕೆ ಲಭಿಸಿದ ಬೆಂಬಲ ಮತ್ತು ಒಗ್ಗಟ್ಟಿಗೆ ಜಾಗತಿಕ ಸಮುದಾಯಕ್ಕೆ ಧನ್ಯವಾದ ತಿಳಿಸಿದ ಅವರು,‘ಇದು ಅಂತಾರಾಷ್ಟ್ರೀಯ ಸಮುದಾಯದ ಭಯೋತ್ಪಾದನೆಯ ಶೂನ್ಯ ಸಹಿಷ್ಣುತೆಗೆ ಸಾಕ್ಷಿಯಾಗಿದೆ’ ಎಂದರು.

ಭಾರತದ ಗೂಢಚರ ಡ್ರೋನ್ ಹೊಡೆದುರುಳಿಸಿದ್ದೇವೆ: ಪಾಕ್

ನವದೆಹಲಿ: ಜಮ್ಮು ಕಾಶ್ಮೀರದ ಪಹಲ್ಗಾಂ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ಉದ್ವಿಗ್ನತೆ ನಡುವೆಯೇ ಕಾಶ್ಮೀರದಲ್ಲಿ ಭಾರತದ ಗೂಢಚರ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದು ಪಾಕ್ ಸೇನೆ ಹೇಳಿಕೊಂಡಿದೆ. ಮಾನವ ರಹಿತ ಡ್ರೋನ್ ಗಡಿ ನಿಯಂತ್ರಣ ರೇಖೆ (ಎಲ್ಒಸಿ)ಯನ್ನು ದಾಟಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ. ಆದರೆ ಈ ಬಗ್ಗೆ ಭಾರತದ ಸೇನೆಯು ಯಾವುದೇ ತಕ್ಷಣದ ಪ್ರತಿಕ್ರಿಯೆ ನೀಡಿಲ್ಲ.

ನರಮೇಧ ಚರ್ಚೆಗೆ ಸಂಸತ್ತಿನ ವಿಶೇಷ ಅಧಿವೇಶನ: ಮೋದಿಗೆ ಖರ್ಗೆ, ರಾಹುಲ್‌ ಗಾಂಧಿ ಪತ್ರ

ನವದೆಹಲಿ: ಪಹಲ್ಗಾಂನಲ್ಲಿ ನಡೆದ ಭಯೋತ್ಪಾದಕರ ದಾಳಿ ವಿಚಾರದ ಬಗ್ಗೆ ಚರ್ಚಿಸಲು ಸಂಸತ್ತಿನ ವಿಶೇಷ ಅಧಿವೇಶನ ಕರೆಯುವಂತೆ ಪ್ರಧಾನಿ ನರೇಂದ್ರ ಮೋದಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಪತ್ರ ಬರೆದು ಮನವಿ ಮಾಡಿದ್ದಾರೆ. ‘ಏಕತೆ ಮತ್ತು ಒಗ್ಗಟ್ಟು ಅಗತ್ಯವಾದ ಈ ಕ್ಷಣದಲ್ಲಿ ಆದಷ್ಟು ಬೇಗ ಸಂಸತ್ತಿನ ಉಭಯ ಸದನಗಳ ಅಧಿವೇಶನ ಕರೆಯುವುದು ಬಹು ಮುಖ್ಯ’ ಎಂದು ಖರ್ಗೆ ಹೇಳಿದ್ದಾರೆ. ರಾಹುಲ್ ಕೂಡ ‘ಈ ನಿರ್ಣಾಯಕ ಸಮಯದಲ್ಲಿ ಭಯೋತ್ಪಾದನೆಯ ವಿರುದ್ಧ ಭಾರತ ಯಾವಾಗಲೂ ಒಟ್ಟಾಗಿ ನಿಲ್ಲುತ್ತದೆ ಎಂದು ತೋರಿಸಬೇಕು. ಹೀಗಾಗಿ ಅಧಿವೇಶನ ಕರೆಯಬೇಕು’ ಎಂದು ಹೇಳಿದ್ದಾರೆ.