ಸಾರಾಂಶ
ಪಹಲ್ಗಾಂ ದಾಳಿಯನ್ನು ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆ , ಐಎಸ್‌ಐ ಜೊತೆಗೂಡಿ ಯೋಜಿಸಿತ್ತು. ಇದಕ್ಕೆ ಪಾಕಿಸ್ತಾನದ ಸೇನೆ ನೆರವು ನೀಡಿತ್ತು.
ನವದೆಹಲಿ: ಕಾಶ್ಮೀರದಲ್ಲಿ 26 ಪ್ರವಾಸಿಗರ ಬಲಿ ಪಡೆದ ಪಹಲ್ಗಾಂ ದಾಳಿಯನ್ನು ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಜೊತೆಗೂಡಿ ಯೋಜಿಸಿತ್ತು. ಇದಕ್ಕೆ ಪಾಕಿಸ್ತಾನದ ಸೇನೆ ನೆರವು ನೀಡಿತ್ತು. ಈ ದಾಳಿಗೆ ಕಾಶ್ಮೀರದ 20 ಸ್ಥಳೀಯರು ನಾನಾ ರೀತಿಯ ನೆರವು ನೀಡಿದ್ದರು ಎಂಬ ವಿಷಯ, ಘಟನೆ ಕುರಿತು ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆಯಲ್ಲಿ ಕಂಡುಬಂದಿದೆ.
ಎನ್‌ಐಎ ವರದಿ ಅನ್ವಯ, ಲಷ್ಕರ್ ಕಚೇರಿಯಲ್ಲಿ ದಾಳಿ ಪ್ಲ್ಯಾನ್ ರೂಪಿಸಲಾಗಿತ್ತು. ಪಾಕ್ ಸರ್ಕಾರದ ನೇರ ಕಣ್ಗಾವಲಿನಲ್ಲಿ ನಡೆದ ದಾಳಿಯಲ್ಲಿ, ಪಾಕ್ ಪ್ರಜೆಗಳಾದ ಹಾಶಿಂ ಮೂಸಾ ಮತ್ತು ಅಲಿ ಭಾಯ್ ಭಾಗಿಯಾಗಿದ್ದರು. ಇವರು ದಾಳಿಯ ಕುರಿತಾಗಿ ಕಾಶ್ಮೀರದಲ್ಲಿನ ತಮ್ಮ ಬೆಂಬಲಿಗರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಇವರು ಉಗ್ರರಿಗೆ ಬೇಕಾದ ಸಂಚಾರ ವ್ಯವಸ್ಥೆ, ದಾಳಿ ಸಮಯ ಮತ್ತು ದಾಳಿ ಕುರಿತು ಮಾಹಿತಿ ನೀಡಿದ್ದರು ಎಂದು ಕಂಡುಬಂದಿದೆ.
ಭಾರತ ಪ್ರವೇಶ:
ದಾಳಿಕೋರರು ಏ.15ರ ಹೊತ್ತಿಗೇ ಕಾಶ್ಮೀರದೊಳಗೆ ನುಸುಳಿದ್ದು, ಬೈಸರನ್, ಅರು, ಬೇತಾಬ್ ಕಣಿವೆಗಳ ಸಮೀಕ್ಷೆ ನಡೆಸಿದ್ದರು. ಅವರಿಗೆ ಸ್ಥಳೀಯರು ಆಶ್ರಯ ನೀಡಿ ಓಡಾಟಕ್ಕೂ ಸಹಾಯ ಮಾಡಿದ್ದರು. ಹೀಗಾಗಿ, ಎನ್‌ಐಎ ಕಾಶ್ಮೀರ ಕಣಿವೆಯಲ್ಲಿ ಉಗ್ರರಿಗೆ ಅಗತ್ಯ ನೆರವನ್ನು ನೀಡುತ್ತಿದ್ದ ನಿಸಾರ್ ಅಹ್ಮದ್(ಹಾಜಿ), ಮುಶ್ತಾಕ್ ಹುಸೇನ್ ಸೇರಿ ಹಲವರ ವಿಚಾರಣೆ ನಡೆಸುತ್ತಿದೆ. ಇದುವರೆಗೂ ಘಟನೆ ಸಂಬಂಧ 2800ಕ್ಕೂ ಹೆಚ್ಚು ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಇನ್ನೂ 150 ಜನರು ಭದ್ರತಾ ಪಡೆಗಳ ವಶದಲ್ಲಿದ್ದು ಅವರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ.
ಗುಹೆಯಲ್ಲಿ ವಾಸ:
ದಾಳಿ ಬಳಿಕ ಪರಾರಿಯಾಗಿರುವ ಉಗ್ರರು ನೈಸರ್ಗಿಕ ಗುಹೆಗಳಲ್ಲಿ ಇತರೆಡೆ ಅಡಗಿಕೊಂಡಿರುವ ಶಂಕೆ ಇದೆ. ಅವರ ಪತ್ತೆಯಾಗಿ ಇಡೀ ಪಹಲ್ಗಾಂ ಸುತ್ತಮುತ್ತಲ ಅರಣ್ಯಗಳನ್ನು ಸತತ 10 ದಿನಗಳಿಂದ ತಪಾಸಣೆ ಮಾಡಲಾಗುತ್ತಿದೆ.
ಹೌದು ನಮಗಿದೆ ಉಗ್ರ ಇತಿಹಾಸ: ಈಗ ಬಿಲಾವಲ್ ತಪ್ಪೊಪ್ಪಿಗೆ
ಇಸ್ಲಾಮಾಬಾದ್: ಪಾಕಿಸ್ತಾನ ದಶಕಗಳಿಂದಲೂ ಗಡಿಯಾಚೆಗಿನ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಲೇ ಬಂದಿದೆ ಎಂಬ ವಿಷಯವನ್ನು ಇದೀಗ ಪಾಕಿಸ್ತಾನದ ಮಾಜಿ ವಿದೇಶಾಂಗ ಖಾತೆ ಸಚಿವ ಬಿಲಾವಲ್ ಭುಟ್ಟೋ ಕೂಡಾ ಒಪ್ಪಿಕೊಂಡಿದ್ದಾರೆ. ಪಾಕಿಸ್ತಾನಕ್ಕಿರುವ ಉಗ್ರ ಇತಿಹಾಸದ ಕುರಿತು ಇತ್ತೀಚೆಗೆ ಆ ದೇಶದ ರಕ್ಷಣಾ ಸಚಿವ ಖ್ವಾಜಾ ಆಸೀಫ್ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದರು. ಅವರ ಹೇಳಿಕೆಯನ್ನು ಇದೀಗ ಬಿಲಾವಲ್ ಭುಟ್ಟೋ ಕೂಡಾ ಬಹಿರಂಗವಾಗಿಯೇ ಅನುಮೋದಿಸಿದ್ದಾರೆ.ಬ್ರಿಟನ್‌ನ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದ ವೇಳೆ ‘ಪಾಕಿಸ್ತಾನವು ಭಯೋತ್ಪಾದನೆಗೆ ಬೆಂಬಲ ನೀಡಿಕೊಂಡು ಬಂದ ಸುದೀರ್ಘ ಇತಿಹಾಸವಿದೆ. ನಾವು ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳ ಕೈಗೊಂಬೆಯಾಗಿ ಕೆಲಸ ಮಾಡಿದ್ದೆವು’ ಎಂಬ ರಕ್ಷಣಾ ಸಚಿವ ಖ್ವಾಜಾ ಆಸೀಫ್ ಹೇಳಿಕೆ ಬಗ್ಗೆ ಭುಟ್ಟೋ ಅವರನ್ನು ಪ್ರಶ್ನಿಸಲಾಗಿತ್ತು.
ಇದಕ್ಕೆ ಉತ್ತರ ನೀಡಿದ ಬಿಲಾವಲ್, ‘ಖ್ವಾಜಾ ಆಸೀಫ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡುವುದಾದರೆ ಅದೇನು ರಹಸ್ಯದ ವಿಷಯವಲ್ಲ, ಪಾಕಿಸ್ತಾನ ಅಂಥ ಹಿನ್ನೆಲೆ ಹೊಂದಿದೆ. ನಮ್ಮ ಇತಿಹಾಸದಲ್ಲಿ ಅದೊಂದು ದುರದೃಷ್ಟಕರ ಭಾಗ. ಅದರ ಪರಿಣಾಮ ದೇಶ ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದೆ. ಆದರೆ ಅದರ ಪಾಠಗಳನ್ನು ನಾವೀಗ ಕಲಿತಿದ್ದೇವೆ. ನಾವು ಕೂಡಾ ಬದಲಾಗಿದ್ದೇವೆ’ ಎಂದು ಹೇಳಿದ್ದಾರೆ.