ಪಾಕಿಸ್ತಾನ ತಪ್ಪನ್ನು ಒಪ್ಪಿಕೊಂಡು ಭಾರತಕ್ಕೆ ಶರಣಾಗಬೇಕು: ವಾಟಾಳ್ ನಾಗರಾಜ್

| Published : May 02 2025, 12:14 AM IST

ಪಾಕಿಸ್ತಾನ ತಪ್ಪನ್ನು ಒಪ್ಪಿಕೊಂಡು ಭಾರತಕ್ಕೆ ಶರಣಾಗಬೇಕು: ವಾಟಾಳ್ ನಾಗರಾಜ್
Share this Article
  • FB
  • TW
  • Linkdin
  • Email

ಸಾರಾಂಶ

ಬಸವಣ್ಣನವರು ಕಾಯಕಕ್ಕೆ ಮಹತ್ವ ನೀಡಿದ್ದರು. ಆದರೆ ಇಂದು ಕಾಯಕ ಎಂಬುದು ನರಕವಾಗಿದೆ. ಉದ್ಯೋಗದ ಭದ್ರತೆ ಇಲ್ಲದೆ ಕಾರ್ಮಿಕರು ಬೀದಿಪಾಲಾಗುತ್ತಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಉದ್ಯೋಗದ ಗ್ಯಾರಂಟಿ ಇಲ್ಲದಂತಾಗಿದೆ. ಕಾರ್ಮಿಕ ಜೀವನ ಕೈಲಾಸವಾಗಬೇಕು.

ಕನ್ನಡಪ್ರಭ ವಾರ್ತೆ ರಾಮನಗರ

ಪಾಕಿಸ್ತಾನ ತನ್ನ ತಪ್ಪನ್ನು ಒಪ್ಪಿಕೊಂಡು ಭಾರತ ದೇಶಕ್ಕೆ ಶರಣಾಗಬೇಕು. ಇಲ್ಲದಿದ್ದರೆ ನಮ್ಮ ದೇಶದ ಸೈನಿಕರು ಪಾಕಿಸ್ತಾನಕ್ಕೆ ಸರಿಯಾದ ಬುದ್ಧಿ ಕಲಿಸಲಿದ್ದಾರೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದರು.

ನಗರದ ಕೆಎಸ್ ಆರ್‌ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷದ ವತಿಯಿಂದ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಪಾಕಿಸ್ತಾನದವರಿಗೆ ಬುದ್ಧಿ ಇಲ್ಲ. ಇಂಥ ದೇಶಕ್ಕೆ ಚೀನಾದಂತಹ ಕಚಡಾ ದೇಶ ಬೆಂಬಲ ಕೊಡುತ್ತಿರುವುದು ಸರಿಯಲ್ಲ. ಪಾಕಿಸ್ತಾನದಲ್ಲಿ ಅವರೇ ಬದುಕುವುದು ಕಷ್ಟವಿದೆ. ಅಲ್ಲಿನ ವಿದ್ಯಮಾನಗಳನ್ನು ನೋಡಿದರೆ ಪ್ರಜಾಪ್ರಭುತ್ವ ವ್ಯವಸ್ಥೆ ಸಂಪೂರ್ಣ ಹಾಳಾಗಿರುವುದು ಕಂಡುಬರುತ್ತದೆ ಎಂದರು.

ಭಾರತದಲ್ಲಿ ವಿಶ್ವಕ್ಕೆ ಮಾದರಿಯಾದ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ ಎಂಬುದನ್ನು ಪಾಕಿಸ್ತಾನ ಮರೆಯಬಾರದು. ಪಾಕಿಸ್ತಾನದವರು ರಕ್ತ ಹರಿಸುತ್ತೇವೆ ಎಂದು ಬೊಗಳೆ ಹೊಡೆಯುವುದನ್ನು ಬಿಡಬೇಕು ಎಂದು ತಿಳಿಸಿದರು.

ಪಹಲ್ಗಾಮ್ ನಲ್ಲಿ ಉಗ್ರರ ದಾಳಿಗೆ ಬಲಿಯಾದವರ ಕುಟುಂಬಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜೀವನ ಭದ್ರತೆ ನೀಡಬೇಕು. ಒಬ್ಬರು ಹತ್ತು ಲಕ್ಷ ನೀಡುತ್ತೇವೆ, ಇನ್ನೊಬ್ಬರು ಐದು ಲಕ್ಷ ನೀಡುತ್ತೇವೆ ಎಂದು ಭಿಕ್ಷೆ ನೀಡಬಾರದು. ಅವರ ಕುಟುಂಬಗಳನ್ನು ಗೌರವಯುತವಾಗಿ ಸರ್ಕಾರಗಳು ನಡೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬಸವಣ್ಣನವರು ಕಾಯಕಕ್ಕೆ ಮಹತ್ವ ನೀಡಿದ್ದರು. ಆದರೆ ಇಂದು ಕಾಯಕ ಎಂಬುದು ನರಕವಾಗಿದೆ. ಉದ್ಯೋಗದ ಭದ್ರತೆ ಇಲ್ಲದೆ ಕಾರ್ಮಿಕರು ಬೀದಿಪಾಲಾಗುತ್ತಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಉದ್ಯೋಗದ ಗ್ಯಾರಂಟಿ ಇಲ್ಲದಂತಾಗಿದೆ. ಕಾರ್ಮಿಕ ಜೀವನ ಕೈಲಾಸವಾಗಬೇಕು ಎಂದು ತಿಳಿಸಿದರು.

ದೇಶದಲ್ಲಿ ಗೂಂಡಾರಿ, ಪಾಳೆಗಾರಿಕೆ ಸಂಸ್ಕೃತಿ ಹೆಚ್ಚಾಗುತ್ತಿದೆ. ಬಸವಣ್ಣನವರು ಹೇಳಿದಂತೆ ಪರಧನ, ಪರಸತಿ ಒಲ್ಲನೆಂಬ ಮಾತು ಇಂದಿನ ರಾಜಕಾರಣಿಗಳಿಗೆ ಅನ್ವಯಿಸುತ್ತಿಲ್ಲ. ದೇಶದಲ್ಲಿ ಪ್ರಾಮಾಣಿಕ ರಾಜಕಾರಣಿಗಳು ಶೇ.1ರಷ್ಟೂ ಇಲ್ಲ. ಎಲ್ಲಾ ರಾಜಕಾರಣಿಗಳು ಲೂಟಿ ಮಾಡುತ್ತಿದ್ದು ತತ್ವಾದರ್ಶಗಳನ್ನು ಮರೆತಿದ್ದಾರೆ ಎಂದು ತಿಳಿಸಿದರು.

ಎಲ್ಲಾ ಜಯಂತಿಗಳು ರಾಜಕೀಯ ಜಯಂತಿಗಳಾಗಿ ಮಾರ್ಪಾಡಾಗಿವೆ. ಜಯಂತಿ ಆಚರಣೆಯ ಉದ್ದೇಶ, ಮಹತ್ವವನ್ನು ಮರೆತು ಆಚರಣೆ ಮಾಡಲಾಗುತ್ತಿದೆ. ಕೇವಲ ಒಂದು ದಿನ ಪೋಟೋ ಇಟ್ಟು, ಮೆರವಣಿಗೆ ಮಾಡಿದರೆ ಜಯಂತಿಗಳಿಗೆ ಅರ್ಥ ಬರುವುದಿಲ್ಲ. ಮಹನೀಯರ ಸಂದೇಶಗಳನ್ನು ಅಳವಡಿಸಿಕೊಂಡರೆ ಅರ್ಥ ಬರುತ್ತದೆ ಎಂದರು.

ಇಂದಿನ ಲೋಕಸಭೆ, ರಾಜ್ಯ ಸಭೆ, ವಿಧಾನ ಸಭೆ, ವಿಧಾನ ಪರಿಷತ್ ಗಳಲ್ಲಿ ಬಸವಣ್ಣನವರ ಅನುಭವ ಮಂಟಪಕ್ಕೆ ಅಪಚಾರ ಮಾಡಲಾಗುತ್ತಿದೆ. ಅನುಭವ ಮಂಟಪದ ರೀತಿಯಲ್ಲಿ ಅಧಿವೇಶನಗಳು ನಡೆಯುತ್ತಿಲ್ಲ. ಹಲವು ರಾಜಕಾರಣಿಗಳಿಗೆ ಅನುಭವ ಮಂಟಪದ ಅರ್ಥವೇ ಗೊತ್ತಿಲ್ಲ ಎಂದು ತಿಳಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎನ್ ಕೌಂಟರ್ ಸಾಧ್ಯವಿಲ್ಲ. ಆದರೆ ಹುಬ್ಬಳಿಯಲ್ಲಿ ಮಗುವನ್ನು ಕೊಂದಿರುವವನು ಇವನೇ ಎಂದು ಹೇಳಿ ಎನ್ ಕೌಂಟರ್ ಮಾಡಲಾಯಿತು. ಇದರಿಂದ ತಕ್ಷಣವೇ ನ್ಯಾಯ ಸಿಕ್ಕಿತ್ತು ಎಂದು ಜನರಿಗೆ ಸಂತೋಷವಾಯಿತು, ಆದರೆ ಶಿಕ್ಷೆ ಕೊಡಲು ಕಾನೂನು ಇದೆ ಎಂಬುದನ್ನು ಮರೆಯಬಾರದು ಎಂದು ವಾಟಾಳ್ ನಾಗರಾಜ್ ಹೇಳಿದರು.

ರಾಜ್ಯದಲ್ಲಿ ನಡೆದ ಎನ್ ಕೌಂಟರ್ ಕುರಿತು ಕೇಂದ್ರ ಮಾನವ ಹಕ್ಕುಗಳ ಆಯೋಗ ಮೊಕದ್ದಮೆಯನ್ನು ದಾಖಲಿಸಿಕೊಂಡಿದೆ. ಆದರೆ ಕರ್ನಾಟಕ ಮಾನವ ಹಕ್ಕುಗಳ ಆಯೋಗ ಚಿಂತನೆ ಮಾಡಬೇಕು. ಎನ್ ಕೌಂಟರ್ ಮಾಡುವುದರ ಕುರಿತು ಸಮಗ್ರ ಚಿಂತನೆ ನಡೆಯಬೇಕು ಎಂದು ತಿಳಿಸಿದರು.

ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಎಂ. ಜಗದೀಶ್, ಜಿಲ್ಲಾದ್ಯಕ್ಷ ಸಿ.ಎಸ್. ಜಯಕುಮಾರ್, ತಾಲೂಕು ಅಧ್ಯಕ್ಷ ವಿ. ಗಂಗಾಧರ್, ಪದಾಧಿಕಾರಿಗಳಾದ ಮಂಜುನಾಥ್. ಎನ್, ಕೆ. ಜಯರಾಮು, ಮಂಜುನಾಥ್, ಕೃಷ್ಣಮೂರ್ತಿ, ಭಾಗ್ಯಸುಧಾ, ಕುಮಾರ್, ಪ್ರಸನ್ನ, ಪಾರ್ಥಸಾರಥಿ, ವಾಟಾಳ್ ನಾಗರಾಜ್ ರವರ ಆಪ್ತ ಕಾರ್ಯದರ್ಶಿ ಲಾಲಸ ಶೆಟ್ಟಿ ಇತರರು ಇದ್ದರು.