ಪಾಕ್‌ ಜಾಫರ್‌ ಎಕ್ಸ್‌ಪ್ರೆಸ್‌ ರೈಲು ಹೈಜಾಕ್‌ 2ನೇ ದಿನಕ್ಕೆ : 50 ಪ್ರಯಾಣಿಕರ ಹತ್ಯೆ

| N/A | Published : Mar 13 2025, 12:53 AM IST / Updated: Mar 13 2025, 04:29 AM IST

ಸಾರಾಂಶ

ಬಲೂಚಿ ಬಂಡುಕೋರರು ಪಾಕಿಸ್ತಾನದ ಬಲೂಚಿಸ್ತಾನ್‌ ಪ್ರಾಂತ್ಯದಲ್ಲಿ ಜಾಫರ್‌ ಎಕ್ಸ್‌ಪ್ರೆಸ್‌ ರೈಲನ್ನು ಅಪಹರಿಸಿದ್ದ ಪ್ರಕರಣ 2ನೇ ದಿನಕ್ಕೆ ಕಾಲಿರಿಸಿದ್ದು 50 ಪ್ರಯಾಣಿಕರನ್ನು ಹತ್ಯೆ ಮಾಡಿದ್ದಾಗಿ ಬಂಡುಕೋರರು ಹೇಳಿದ್ದಾರೆ

 ಕರಾಚಿ/ ಇಸ್ಲಾಮಾಬಾದ್‌:  ಬಲೂಚಿ ಬಂಡುಕೋರರು ಪಾಕಿಸ್ತಾನದ ಬಲೂಚಿಸ್ತಾನ್‌ ಪ್ರಾಂತ್ಯದಲ್ಲಿ ಜಾಫರ್‌ ಎಕ್ಸ್‌ಪ್ರೆಸ್‌ ರೈಲನ್ನು ಅಪಹರಿಸಿದ್ದ ಪ್ರಕರಣ 2ನೇ ದಿನಕ್ಕೆ ಕಾಲಿರಿಸಿದ್ದು 50 ಪ್ರಯಾಣಿಕರನ್ನು ಹತ್ಯೆ ಮಾಡಿದ್ದಾಗಿ ಬಂಡುಕೋರರು ಹೇಳಿದ್ದಾರೆ. ಇದೇ ವೇಳೆ, 30 ದಂಗೆಕೋರರನ್ನು ಪಾಕಿಸ್ತಾನದ ಭದ್ರತಾ ಪಡೆ ಹತ್ಯೆ ಮಾಡಿದೆ. ಒತ್ತೆಯಾಳಾಗಿದ್ದ 500 ಪ್ರಯಾಣಿಕರ ಪೈಕಿ 190 ಜನರನ್ನು ರಕ್ಷಿಸಲಾಗಿದೆ. ಗಾಯಗೊಂಡಿದ್ದ 37 ಮಂದಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನೂ 250 ಜನ ರೈಲೊನೊಳಗೇ ಸಿಲುಕಿದ್ದಾರೆ ಎಂದು ಸರ್ಕಾರದ ಮೂಲಗಳು ಹೇಳಿವೆ.

ಇನ್ನು ಉಳಿದ ಪ್ರಯಾಣಿಕರ ಪ್ರಾಣ ಉಳಿಯಬೇಕು ಎಂದರೆ 20 ತಾಸಿನೊಳಗೆ (ಗುರುವಾರ ಸಂಜೆಯೊಳಗೆ) ಬಂಧಿತ ಬಲೂಚಿ ಕೈದಿಗಳನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಎಲ್ಲ ಒತ್ತೆಯಾಳುಗಳನ್ನು ಹತ್ಯೆ ಮಾಡುತ್ತೇವೆ ಎಂದು ಬಂಡುಕೋರರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ರೈಲಿನೊಳಗೆ ನುಗ್ಗಿದ ದಾಳಿಕೋರರು, ಪ್ರಯಾಣಿಕ ಬಳಿ ಆತ್ಮಹತ್ಯಾ ಬಾಂಬರ್‌ಗಳನ್ನು ನಿಲ್ಲಿಸಿ ಅವರನ್ನು ರಕ್ಷಣಾ ಕವಚಗಳಂತೆ ಬಳಸುತ್ತಿದ್ದು, ಮಕ್ಕಳು ಹಾಗೂ ಮಹಿಳೆಯರನ್ನು 3 ಸ್ಥಳಗಳಲ್ಲಿ ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದಾರೆ. ಆದಕಾರಣ ಭದ್ರತಾ ಪಡೆಗಳು ಎಚ್ಚರಿಕೆಯಿಂದ ಮುಂದುವರೆಯುತ್ತಿದ್ದು, ಇನ್ನೂ ರೈಲಿನೊಳಗಿರುವ ದಾಳಿಕೋರರನ್ನು ಮಟ್ಟಹಾಕಲು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಅತ್ತ ರೈಲಿನಲ್ಲಿ ಸಿಲುಕಿರುವವರ ಬಗ್ಗೆ ಅವರ ಕಡೆಯವರಿಗೆ ಮಾಹಿತಿ ನೀಡಲು ಪಾಕಿಸ್ತಾನ ರೈಲ್ವೆ ಪೇಶಾವರ ಹಾಗೂ ಕ್ವೆಟ್ಟಾದಲ್ಲಿ ತುರ್ತು ಡೆಸ್ಕ್‌ ಸ್ಥಾಪಿಸಿದೆ.

ಮಂಗಳವಾರ 6 ಭದ್ರತಾ ಸಿಬ್ಬಂದಿಯನ್ನು ಹತ್ಯೆಗೈದಿರುವುದಾಗಿ ಹೇಳಿಕೊಂಡಿರುವ ಬಲೂಚ್‌ ಆರ್ಮಿ, ತಮ್ಮ ವಿರುದ್ಧ ಕಾರ್ಯಾಚರಣೆಗೆ ಮುಂದಾದಲ್ಲಿ ಎಲ್ಲಾ ಒತ್ತೆಯಾಳುಗಳನ್ನು ಕೊಲ್ಲುವುದಾಗಿ ಬೆದರಿಸಿತ್ತು. 

 ಆಗಿದ್ದೇನು?:

ಬಲೂಚಿಸ್ತಾನವನ್ನು ಪಾಕಿಸ್ತಾನದಿಂದ ಪ್ರತ್ಯೇಕಿಸಿ ಸ್ವತಂತ್ರ ದೇಶ ಹುಟ್ಟುಹಾಕುವ ಉದ್ದೇಶದಿಂದ ಬಲೂಚ್‌ ಲಿಬರೇಷನ್‌ ಆರ್ಮಿ(ಬಿಎಲ್‌ಎ) ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತಿದೆ. ತಮ್ಮ ಉದ್ದೇಶ ಸಾಧನೆಗಾಗಿ ಆಗಾಗ ಭದ್ರತಾ ಪಡೆಗಳ ಮೇಲೆ ದಾಳಿಯಂತಹ ವಿಧ್ವಂಸಕ ಕೃತ್ಯಗಳನ್ನೆಸಗುತ್ತಿ ಬಂಡುಕೋರರು, ಇದೇ ಮೊದಲ ಬಾರಿ ದೊಡ್ಡ ಮಟ್ಟದ ದಾಳಿ ನಡೆಸಿದ್ದಾರೆ. ಮಂಗಳವಾರ ಮಧ್ಯಾಹ್ನ ಕ್ವೆಟ್ಟಾದಿಂದ ಪೇಶಾವರಕ್ಕೆ ಹೊರಟಿದ್ದ ಜಾಫರ್‌ ರೈಲು ಬೋಲನ್ ಪ್ರದೇಶದ ಗುಡಾಲಾರ್ ಮತ್ತು ಪಿರು ಕುನ್ರಿಯ ಪರ್ವತ ಪ್ರದೇಶದ ಬಳಿಯ ಸುರಂಗದಲ್ಲಿ ಸಾಗುತ್ತಿದ್ದ ವೇಳೆ ಅದರ ಹಳಿ ತಪ್ಪಿಸಿ ಹೈಜಾಕ್‌ ಮಾಡಿದ್ದರು. ಬಳಿಕ, ಒಳಗಿದ್ದ ಸುಮಾರು 500 ಪ್ರಯಾಣಿಕರನ್ನು ಒತ್ತೆಯಾಳಾಗಿ ಮಾಡಿಕೊಂಡಿದ್ದರು.  

ಬಚಾವಾದವರು ಹೇಳಿದ್ದೇನು?:

ದಂಗೆಕೋರರ ವಶದಿಂದ ರಕ್ಷಿಸಲ್ಪಟ್ಟ ಕೆಲವರು ಮಾತನಾಡಿ, ‘ದೇವರೇ ನಮ್ಮನ್ನು ಕಾಪಾಡಿದ’ ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ದಂಗೆಕೋರರು ದಾಳಿ ಮಾಡಿದ ಸಂದರ್ಭವನ್ನು ವಿವರಿಸಿದ ವೃದ್ಧರೊಬ್ಬರು, ‘ರಾಕೆಟ್‌ ಲಾಂಚರ್‌ ಒಂದು ರೈಲಿನ ಎಂಜಿನ್‌ಗೆ ಬಡಿಯಿತು. ಬಳಿಕ ಶುರುವಾದ ಗುಂಡಿನ ದಾಳಿ ನಿರಂತರ 1 ಗಂಟೆ ನಡೆಯಿತು. ದೊಡ್ಡದೊಡ್ಡ ಸ್ಫೋಟ ಸಂಭವಿಸಿತು. ಆ ದೃಶ್ಯವನ್ನು ಮರೆಯಲು ಸಾಧ್ಯವೇ ಇಲ್ಲ’ ಎಂದರು.

ಉಗ್ರರಿಂದಹಳಿ ಸ್ಫೋಟದ ವಿಡಿಯೋ

ಜಾಫರ್‌ ರೈಲನ್ನು ಹೈಜಾಕ್‌ ಮಾಡಿರುವ ಬಲೂಚ್‌ ಬಂಡುಕೋರರು ತಮ್ಮ ದುಷ್ಕೃತ್ಯದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ, ರೈಲು ಬರುತ್ತಿದ್ದ ಹಳಿಯನ್ನು ಸ್ಫೋಟಿಸಲಾಗಿದ್ದು, ಬಳಿಕ ಬಂಡುಕೋರರು ಒಳಗೆ ನುಗ್ಗುತ್ತಿರುವುದನ್ನು ಕಾಣಬಹುದಾಗಿದೆ.