ಸಾರಾಂಶ
ಜೈಸಲ್ಮೇರ್: ಪಾಕಿಸ್ತಾನದಲ್ಲಿರುವ ಹಿಂದುಗಳ ಸ್ಥಿತಿ ದುಸ್ತರವಾಗಿರುವ ಹಿನ್ನೆಲೆಯಲ್ಲಿ ಭಾರತದ ಗಡಿ ದಾಟಿ ರಾಜಸ್ಥಾನಕ್ಕೆ ಬಂದ ಅಪ್ರಾಪ್ತ ಜೋಡಿಯೊಂದು ಮರುಭೂಮಿಯಲ್ಲಿ ನೀರಿನ ದಾಹ ತಾಳದೇ ಮೃತಪಟ್ಟ ದಾರುಣ ಘಟನೆ ನಡೆದಿದೆ.
ರಾಜಸ್ಥಾನದ ಜೈಸಲ್ಮೇರ್‌ನ ಸಾಧೇವಾಲಾ ಸೆಕ್ಟರ್‌ನಲ್ಲಿ ಗಡಿಯಿಂದ 10ರಿಂದ 12 ಕಿ.ಮೀ. ದೂರದಲ್ಲಿ ಹಿಂದು ಹುಡುಗಿ ಶಾಂತಿ (14) ಮತ್ತು ರವಿಕುಮಾರ್ (17) ಅವರ ಶವ ಪತ್ತೆಯಾಗಿವೆ. ಅವರ ಬಳಿ ಇದ್ದ ಪಾಕ್ ಐಡಿ ಕಾರ್ಡ್‌ಗಳೂ ಸಿಕ್ಕಿವೆ.
ಇವರು ಪ್ರೇಮ ಸಂಬಂಧದಲ್ಲಿ ಇರಬಹುದು. ಹೀಗಾಗಿ ಭಾರತದಲ್ಲಿ ಉತ್ತಮ ಜೀವನ ನಡೆಸುವ ಆಸೆಯಿಂದ ಬಂದಿರಬಹುದು ಎಂದು ಶಂಕಿಸಲಾಗಿದೆ.
ರವಿಯ ಬೈಕ್ ಪಾಕ್ ಗಡಿಯಿಂದ ಆಚೆ 20 ಕಿ.ಮೀ. ದೂರದಲ್ಲಿ ಸಿಕ್ಕಿದೆ. ಶವ ಭಾರತದ ಗಡಿಯಿಂದ ಈಚೆ 12 ಕಿ.ಮೀ. ದೂರದಲ್ಲಿ ಸಿಕ್ಕಿದೆ. ಇವರ ಶವದ ಬಳಿ ಖಾಲಿ ನೀರಿನ ಕ್ಯಾನ್ ಸಿಕ್ಕಿದೆ. ಮರುಭೂಮಿಯಲ್ಲಿ ನಡೆದು ಬರುವಾಗ ಇವರು ಸಾವನ್ನಪ್ಪಿರಬಹುದು ಎಂದು ಇದರಿಂದ ಕಂಡುಬರುತ್ತದೆ. ಮರಣೋತ್ತರ ವರದಿ ಬಳಿಕ ನೈಜ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಮುನ್ನ ಇವರು ಪ್ರವಾಸಿ ವೀಸಾಗೆ ಅರ್ಜಿ ಸಲ್ಲಿಸಿದ್ದರೂ ವಿಫಲವಾಗಿತ್ತು. ಹೀಗಾಗಿ ಇವರು ಅಕ್ರಮವಾಗಿ ಗಡಿ ದಾಡಿ ಬಂದಿರಬಹುದು ಎಂದು ಶಂಕಿಸಲಾಗಿದೆ.