ಸಾರಾಂಶ
2025ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನು ಸೋಮವಾರ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪ್ರದಾನ ಮಾಡಲಾಯಿತು.
ನವದೆಹಲಿ: 2025ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನು ಸೋಮವಾರ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪ್ರದಾನ ಮಾಡಲಾಯಿತು. ಜ.25ರಂದು ವಿವಿಧ ಕ್ಷೇತ್ರಗಳ 139 ಸಾಧಕರಿಗೆ ಕೇಂದ್ರ ಸರ್ಕಾರ ಪದ್ಮ ಪ್ರಶಸ್ತಿಗಳನ್ನು ಘೋಷಿಸಿತ್ತು. ಆ ಪೈಕಿ ಕರ್ನಾಟಕದ 6 ಸಾಧಕರು ಸೇರಿದಂತೆ 71 ಮಂದಿಗೆ ಸೋಮವಾರ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಹಿರಿಯ ನಟ ಶೇಖರ್ ಕಪೂರ್, ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್, ಹಾಕಿ ಆಟಗಾರ ಪಿ.ಆರ್. ಶ್ರೀಜೇಶ್, ಏಷ್ಯನ್ ಇನ್‌ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟರಾಲಜಿ ಮತ್ತು ಎಐಜಿ ಆಸ್ಪತ್ರೆಗಳ ಅಧ್ಯಕ್ಷ ಡಿ. ನಾಗೇಶ್ವರ ರೆಡ್ಡಿ, ತೆಲುಗು ನಟ ನಂದಮೂರಿ ಬಾಲಕೃಷ್ಣ ಮೊದಲಾದ ಸಾಧಕರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪದ್ಮ ಪ್ರಶಸ್ತಿ ಸ್ವೀಕರಿಸಿದರು.ಪ್ರಶಸ್ತಿ ಪುರಸ್ಕೃತರಲ್ಲಿ, ನಾಲ್ವರು - ಒಸಾಮು ಸುಜುಕಿ (ಮರಣೋತ್ತರ), ಲಕ್ಷ್ಮೀನಾರಾಯಣ ಸುಬ್ರಮಣಿಯಂ, ನಾಗೇಶ್ವರ ರೆಡ್ಡಿ ಮತ್ತು ಮಲಯಾಳಂ ಲೇಖಕ ಎಂ.ಟಿ.ವಾಸುದೇವನ್ ನಾಯರ್ (ಮರಣೋತ್ತರ) ಪದ್ಮವಿಭೂಷಣ ಪ್ರಶಸ್ತಿಯನ್ನು ಪಡೆದರು. ಪಂಕಜ್ ಉದಾಸ್ (ಮರಣೋತ್ತರ), ಸುಶೀಲ್ ಕುಮಾರ್ ಮೋದಿ (ಮರಣೋತ್ತರ), ನಂದಮೂರಿ ಬಾಲಕೃಷ್ಣ, ವಿನೋದ್ ಧಾಮ್ ಸೇರಿ 10 ಮಂದಿ ಸಾಧಕರಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಯಿತು. ಅರುಂಧತಿ ಭಟ್ಟಾಚಾರ್ಯ, ಪವನ್ ಕುಮಾರ್ ಗೋಯೆಂಕಾ, ಕರ್ನಾಟಕದ ಭೀಮವ್ವ ದೊಡ್ಡಬಾಳಪ್ಪ ಸೇರಿದಂತೆ 57 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಷ್ಟ್ರಪತಿ ಭವನದ ಭವ್ಯ ದರ್ಬಾರ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಉಳಿದ ಸಾಧಕರಿಗೆ ಶೀಘ್ರದಲ್ಲೇ ನಡೆಯಲಿರುವ ಪ್ರತ್ಯೇಕ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ.