ಸಾರಾಂಶ
ಭಾರತದಲ್ಲಿ ನಮಾಜ಼್ ನಿಷೇಧಿವುವ ಮೊದಲು ಉರ್ದಿಸ್ತಾನ್ ಸ್ಥಾಪನೆಗೆ ಯುಪಿ ಮುಸ್ಲಿಮರಿಗೆ ಖಲಿಸ್ತಾನ್ ಉಗ್ರ ಪನ್ನು ಕರೆ ನೀಡಿದ್ದಾನೆ. ಅಲ್ಲದೆ ನರೇಂದ್ರ ಮೋದಿ ಮೇಲೆ ಅಯೋಧ್ಯೆಯಲ್ಲಿ ದಾಳಿ ಮಾಡುವಂತೆ ಪ್ರಚೋದಿಸಿದ್ದಾನೆ.
ನವದೆಹಲಿ: ವಿದೇಶದಲ್ಲಿದ್ದುಕೊಂಡು ಭಾರತದಲ್ಲಿ ಶಾಂತಿ ಕದಡುವ ನಿರಂತರ ಯತ್ನ ಮಾಡುತ್ತಿರುವ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು, ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ರ್‍ಯಾಲಿಯನ್ನು ಗುರಿಯಾಗಿಸಿ ದಾಳಿ ಮಾಡುವಂತೆ ಉತ್ತರಪ್ರದೇಶದ ಮುಸ್ಲಿಮರಿಗೆ ಕರೆ ನೀಡಿದ್ದಾನೆ.
ಈ ಕುರಿತಾಗಿ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಪನ್ನೂನ್, ಡಿ.30ರಂದು ಅಯೋಧ್ಯೆಯಲ್ಲಿ ನಡೆಯುವ ಮೋದಿ ರ್‍ಯಾಲಿಯನ್ನು ಉತ್ತರ ಪ್ರದೇಶದ ಮುಸ್ಲಿಮರು ಗುರಿಯಾಗಿಸಿಕೊಳ್ಳಬೇಕು, ಭಾರತದಲ್ಲಿ ಶೀಘ್ರವೇ ನಮಾಜ್ ರದ್ದು ಮಾಡಲಾಗುತ್ತದೆ. ಹೀಗಾಗಿ ಉರ್ದಿಸ್ತಾನ್ ಎಂಬ ದೇಶ ಕಟ್ಟಲು ಯತ್ನಿಸಬೇಕು ಎಂದು ಹೇಳಿದ್ದಾನೆ. ಈ ವಿಡಿಯೋ ಬಿಡುಗಡೆಯಾದ ಬೆನ್ನಲ್ಲೇ ಗುಪ್ತಚರ ಇಲಾಖೆಗಳು ಹೆಚ್ಚು ಸಕ್ರಿಯಗೊಂಡಿದ್ದು, ಭದ್ರತೆ ನೀಡುವತ್ತ ಗಮನ ಹರಿಸಿವೆ. ಅಲ್ಲದೇ ಇತ್ತೀಚೆಗೆ ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರ ಕೃತ್ಯಕ್ಕೆ ಪನ್ನೂನ್ ಬೆಂಬಲ ವ್ಯಕ್ತಪಡಿಸಿದ್ದು, ಕಾಶ್ಮೀರ್-ಖಲಿಸ್ತಾನಿ ಡೆಸ್ಕ್ ಸ್ಥಾಪನೆ ಮಾಡಬೇಕು ಎಂದು ಕರೆ ನೀಡಿದ್ದಾನೆ. ನಿಷೇಧಿತ ಉಗ್ರ ಸಂಘಟನೆಯಾದ ಸಿಖ್ಸ್ ಫಾರ್ ಜಸ್ಟೀಸ್‌ನ ಮುಖ್ಯಸ್ಥನಾದ ಪನ್ನು ಅಮೆರಿಕದಲ್ಲಿ ನೆಲೆಸಿದ್ದು, ಪದೇ ಪದೇ ಭಾರತದಲ್ಲಿ ಶಾಂತಿ ಕದಡುವ ಯತ್ನ ಮಾಡುತ್ತಿದ್ದಾನೆ.