ಭಾರತದ ಆರ್ಥಿಕತೆಯಲ್ಲಿ ಸಮಸ್ಯೆಗಳಿವೆ: ರಘುರಾಂ ರಾಜನ್‌

| Published : Mar 29 2024, 12:45 AM IST / Updated: Mar 29 2024, 08:39 AM IST

ಭಾರತದ ಆರ್ಥಿಕತೆಯಲ್ಲಿ ಸಮಸ್ಯೆಗಳಿವೆ: ರಘುರಾಂ ರಾಜನ್‌
Share this Article
  • FB
  • TW
  • Linkdin
  • Email

ಸಾರಾಂಶ

‘ಭಾರತದ ಆರ್ಥಿಕತೆ ಭಾರೀ ವೇಗದಲ್ಲಿ ಬೆಳೆಯುತ್ತಿದೆ ಎಂದು ಕೆಲವರು ಹೇಳುತ್ತಿರುವುದನ್ನು ನಂಬುವ ಮೂಲಕ ನಾವು ದೊಡ್ಡ ತಪ್ಪು ಮಾಡುತ್ತಿದ್ದೇವೆ.

ನವದೆಹಲಿ: ‘ಭಾರತದ ಆರ್ಥಿಕತೆ ಭಾರೀ ವೇಗದಲ್ಲಿ ಬೆಳೆಯುತ್ತಿದೆ ಎಂದು ಕೆಲವರು ಹೇಳುತ್ತಿರುವುದನ್ನು ನಂಬುವ ಮೂಲಕ ನಾವು ದೊಡ್ಡ ತಪ್ಪು ಮಾಡುತ್ತಿದ್ದೇವೆ. ನಮ್ಮ ಆರ್ಥಿಕತೆ ಬೆಳೆಯಲು ಇನ್ನೂ ಸಾಕಷ್ಟು ವರ್ಷಗಳ ಕಠಿಣ ಪರಿಶ್ರಮದ ಅಗತ್ಯವಿದೆ. 

ಈಗಲೂ ನಮ್ಮ ಆರ್ಥಿಕತೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಈ ವರ್ಷ ಅಧಿಕಾರಕ್ಕೆ ಬರುವ ಹೊಸ ಸರ್ಕಾರ ಅವುಗಳನ್ನು ಆದ್ಯತೆಯ ಮೇಲೆ ಸರಿಪಡಿಸಬೇಕಿದೆ’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ)ನ ಮಾಜಿ ಗವರ್ನರ್‌ ರಘುರಾಂ ರಾಜನ್‌ ಹೇಳಿದ್ದಾರೆ.

ಅವರ ಈ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ‘ರಾಜನ್‌ ಒಬ್ಬ ಪ್ಯಾರಾಶೂಟ್‌ ಅರ್ಥಶಾಸ್ತ್ರಜ್ಞ. 1990ರ ದಶಕದಲ್ಲಿ ದೇಶದ ಆರ್ಥಿಕತೆ ಸಮಸ್ಯೆಯಲ್ಲಿದ್ದಾಗ ವಿಶ್ವಬ್ಯಾಂಕ್‌, ಐಎಂಎಫ್‌ ಮುಂತಾದ ಸಂಸ್ಥೆಗಳಿಂದ ವಿದೇಶಗಳಿಂದ ಬಂದು ಟೀಕೆ ಮಾಡಿ ಹೋಗುತ್ತಿದ್ದವರಿಗೆ ನಾವು ಪ್ಯಾರಾಶೂಟ್‌ ಅರ್ಥಶಾಸ್ತ್ರಜ್ಞರು ಎಂದು ಕರೆಯುತ್ತಿದ್ದೆವು. 

ಅವರಂತೆಯೇ ರಾಜನ್‌ ಮಾತನಾಡುತ್ತಿದ್ದಾರೆ. ಇವರ ಮಾತು ಕೇಳಿದರೆ ಅರ್ಧ ಶತಮಾನದಿಂದ ಭಾರತದ ಆರ್ಥಿಕತೆಯನ್ನು ಅಧ್ಯಯನ ಮಾಡಿದಂತೆ ತೋರುತ್ತಿದೆ’ ಎಂದು ನೀತಿ ಆಯೋಗದ ಸದಸ್ಯ ಅರವಿಂದ ವೀರಮಣಿ ವ್ಯಂಗ್ಯವಾಡಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ರಘುರಾಂ ರಾಜನ್‌, ‘2047ಕ್ಕೆ ಭಾರತ ಅಭಿವೃದ್ಧಿ ಹೊಂದಿದ ಆರ್ಥಿಕತೆಯಾಗುವುದು ಸುಲಭವಿಲ್ಲ. ನಮ್ಮ ಎಷ್ಟೊಂದು ಮಕ್ಕಳಿಗೆ ಇಂದಿಗೂ ಸರಿಯಾದ ಹೈಸ್ಕೂಲ್‌ ಶಿಕ್ಷಣವಿಲ್ಲ. 

ಶಾಲೆಯಿಂದ ಹೊರಗುಳಿಯುವವರ ದರ ಹೆಚ್ಚಿದೆ. ಈ ಸಮಯದಲ್ಲಿ ಅಭಿವೃದ್ಧಿ ಹೊಂದಿದ ಆರ್ಥಿಕತೆಯ ಬಗ್ಗೆ ಮಾತನಾಡುವುದೇ ನಾನ್‌ಸೆನ್ಸ್‌. ನಮ್ಮ ಆರ್ಥಿಕತೆಯಲ್ಲಿ ವಿನ್ಯಾಸಾತ್ಮಕ ಸಮಸ್ಯೆಗಳಿವೆ. 

ಮೊದಲು ಅವುಗಳನ್ನು ಸರಿಪಡಿಸಬೇಕು’ ಎಂದು ಹೇಳಿದ್ದರು.ಅದಕ್ಕೆ ಮಣಿಪಾಲ್‌ ಗ್ಲೋಬಲ್‌ ಎಜುಕೇಶನ್‌ನ ಚೇರ್ಮನ್‌ ಮೋಹನದಾಸ್‌ ಪೈ ಕೂಡ ಆಕ್ಷೇಪಿಸಿದ್ದು, ‘ರಘುರಾಂ ರಾಜನ್‌ ಅಸಂಬದ್ಧ ವಾದ ಮುಂದಿಟ್ಟಿದ್ದಾರೆ. 

ದೇಶದಲ್ಲಿ ಶಾಲೆಯಿಂದ ಹೊರಗುಳಿದವರ ದರ ಕುಸಿದಿದೆ. ಕಾಲೇಜುಗಳಿಗೆ ಪ್ರವೇಶ ಹೆಚ್ಚಾಗಿದೆ. ಉದ್ಯೋಗಗಳು ಸೃಷ್ಟಿಯಾಗಿವೆ’ ಎಂದು ಹೇಳಿದ್ದಾರೆ.