ಸಾರಾಂಶ
ಸಂಸತ್‌ನಲ್ಲಿ ಭದ್ರತಾ ಲೋಪ ಸಂಭವಿಸಿದ ಘಟನೆಗೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ನವದೆಹಲಿ: ಸಂಸತ್‌ನಲ್ಲಿ ಕಳೆದ ಬುಧವಾರ ‘ಹೊಗೆ ಬಾಂಬ್’ ದಾಳಿ ನಡೆದ ನಂತರ ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಸಾರ್ವಜನಿಕ ಪ್ರತಿಕ್ರಿಯೆ ನೀಡಿದ್ದು, ‘ಘಟನೆಯು ಗಂಭೀರ ವಿಷಯವಾಗಿದೆ. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಮಾಡಬೇಕಿದೆ’ ಎಂದಿದ್ದಾರೆ.
‘ದೈನಿಕ್ ಜಾಗರಣ್’ ದಿನಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ‘ಹೊಗೆಬಾಂಬ್ ದಾಳಿಯು ಅತ್ಯಂತ ಗಂಭೀರ ವಿಷಯವಾಗಿದೆ. ಇದನ್ನು ರಾಜಕೀಯ ಪಕ್ಷಗಳು ಪೂರ್ವಾಗ್ರಹದಿಂದ ನೋಡಬಾರದು ಎಂದು ಬಯಸುತ್ತೇನೆ. ಈ ಘಟನೆಯ ಕುರಿತು ಲೋಕಸಭಾಧ್ಯಕ್ಷರು ತನಿಖೆಗೆ ಸೂಚಿಸಿದ್ದಾರೆ. ಈ ಸಂಚಿನ ಹಿಂದಿರುವ ವ್ಯಕ್ತಿಗಳು/ಸಂಘಟನೆಗಳು ಮತ್ತು ಅವರ ಉದ್ದೇಶ ಏನು ಎಂಬ ಸಂಪೂರ್ಣ ವಿವರ ಬಹಿರಂಗವಾಗಬೇಕು. ನಾವು ಇಂತಹ ಘಟನೆಗಳು ಭವಿಷ್ಯದಲ್ಲಿ ಮರುಕಳಿಸದಂತೆ ಯೋಜನೆಗಳನ್ನು ರೂಪಿಸುವತ್ತ ಗಮನ ಹರಿಸಬೇಕಿದೆ’ ಎಂದು ತಿಳಿಸಿದರು.ಸಂಸತ್ ದಾಳಿ ಬಗ್ಗೆ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸದನದಲ್ಲಿ ಮಾತನಾಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. ಆದರೆ ಈವರೆಗೆ ಮೋದಿ ಹಾಗೂ ಶಾ ಸದನದಲ್ಲಿ ಮಾತನಾಡಿಲ್ಲ. ಮೋದಿ ಭಾನುವಾರ ಮೊದಲ ಬಾರಿ ಪ್ರತಿಕ್ರಿಯಿಸಿದರೆ, ಅಮಿತ್ ಶಾ ಸಮಾರಂಭವೊಂದರಲ್ಲಿ ಶುಕ್ರವಾರ ಪ್ರತಿಕ್ರಿಯಿಸಿದ್ದರು.