ಸಾರಾಂಶ
ನವದೆಹಲಿ : ಮೀಸಲಾತಿಯ ಒಟ್ಟಾರೆ ಮಿತಿ ಶೇ.50ನ್ನು ಮೀರಲು ಅವಕಾಶ ಲಭಿಸುವಂತೆ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ. ಮೀಸಲು ಮಿತಿ ಹೆಚ್ಚಿಸುವಂತೆ ಎನ್‌ಡಿಎ ಅಂಗಪಕ್ಷವಾದ ಜೆಡಿಯು ಆಗ್ರಹಿಸಿದ ಬೆನ್ನಲ್ಲೇ ಕಾಂಗ್ರೆಸ್‌ನಿಂದಲೂ ಇದೇ ಬೇಡಿಕೆ ಬಂದಿದೆ.
ಬಿಹಾರದಲ್ಲಿ ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ಮೀಸಲು ಮಿತಿಯನ್ನು ಶೇ.65ಕ್ಕೆ ಹೆಚ್ಚಿಸಿದ್ದ ಕಾಯ್ದೆಯನ್ನು ಇತ್ತೀಚೆಗೆ ಪಟನಾ ಹೈಕೋರ್ಟ್ ರದ್ದುಪಡಿಸಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ ನಡೆದ ಜೆಡಿಯು ಸಭೆಯಲ್ಲಿ ಮೀಸಲು ಮಿತಿ ಹೆಚ್ಚಿಸುವುದಕ್ಕೆ ಬಿಹಾರದ ಕಾಯ್ದೆಯನ್ನು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಲು ನಿರ್ಣಯ ಕೈಗೊಳ್ಳಲಾಗಿತ್ತು.
ಭಾನುವಾರ ಈ ಕುರಿತು ‘ಎಕ್ಸ್’ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ‘ಲೋಕಸಭಾ ಚುನಾವಣೆ ಪ್ರಚಾರದುದ್ದಕ್ಕೂ ವಿಪಕ್ಷಗಳು ವಿವಿಧ ರಾಜ್ಯಗಳ ಮೀಸಲು ಸಂಬಂಧಿ ಕಾಯ್ದೆಗಳನ್ನು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸುವಂತೆ ಆಗ್ರಹಿಸಿದ್ದವು. ತಮಿಳುನಾಡಿನ ಕಾಯ್ದೆಯನ್ನು 1994ರಲ್ಲೇ ಈ ಪರಿಚ್ಛೇದಕ್ಕೆ ಸೇರಿಸಲಾಗಿದೆ. ಜೆಡಿಯು ಕೂಡ ಈಗ ಇದೇ ಬೇಡಿಕೆ ಇರಿಸಿದೆ. ಆದರೆ, ಕೇಂದ್ರ ಸರ್ಕಾರ ಮೌನವಾಗಿದೆ. ರಾಜ್ಯಗಳ ಮೀಸಲಾತಿ ಕಾಯ್ದೆಯನ್ನು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸಿದರೂ, ಮೀಸಲು ಮಿತಿ ಶೇ.50 ದಾಟಬಾರದು ಎಂದು ಸುಪ್ರೀಂಕೋರ್ಟ್‌ನ ತೀರ್ಪು ಇರುವುದರಿಂದ, ರಾಜ್ಯಗಳ ನಿರ್ಧಾರ ನ್ಯಾಯಾಂಗದ ನಿಷ್ಕರ್ಷೆಗೆ ಒಳಪಡಬೇಕಾಗುತ್ತದೆ. ಹೀಗಾಗಿ ಶಾಶ್ವತ ಪರಿಹಾರವಾಗಿ ಸಂವಿಧಾನಕ್ಕೆ ತಿದ್ದುಪಡಿ ತಂದು ಮೀಸಲಾತಿ ಮಿತಿ ಶೇ.50 ದಾಟಲು ಅವಕಾಶ ಮಾಡಿಕೊಡಬೇಕು’ ಎಂದು ಆಗ್ರಹಿಸಿದ್ದಾರೆ.