ಸಾರಾಂಶ
ಹೈದರಾಬಾದ್: ಜನಸೇನಾ ಪಕ್ಷದ ಮುಖ್ಯಸ್ಥ, ಆಂಧ್ರ ಪ್ರದೇಶದ ಡಿಸಿಎಂ ನಟ ಪವನ್ ಕಲ್ಯಾಣ್ ಬೆನ್ನುನೋವಿನಿಂದ ಅಸ್ವಸ್ಥಗೊಂಡಿದ್ದು, ಹೈದರಾಬಾದ್‌ನ ಅಪೋಲೋ ಆಸ್ಪತ್ರೆಯಲ್ಲಿ ಶನಿವಾರ ಚಿಕಿತ್ಸೆ ಪಡೆದಿದ್ದಾರೆ.
ಈ ಬಗ್ಗೆ ಪಕ್ಷ ‘ಎಕ್ಸ್ ’ ಖಾತೆಯಲ್ಲಿ ಅಧಿಕೃತ ಮಾಹಿತಿ ನೀಡಿದ್ದು, ‘ಪವನ್ ಹೈದರಾಬಾದ್‌ನ ಅಪೋಲೋ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಗಾಗಿದ್ದಾರೆ. ಸ್ಕ್ಯಾನಿಂಗ್ ಮತ್ತು ಸಂಬಂಧಿತ ಪರೀಕ್ಷೆಗಳನ್ನು ನಡೆಸಲಾಯಿತು. ವೈದ್ಯರು ಸಲಹೆಗಳನ್ನು ನೀಡಿದ್ದಾರೆ. ಇನ್ನೂ ಕೆಲವು ವೈದ್ಯಕೀಯ ಪರೀಕ್ಷೆಗಳ ಅಗತ್ಯವಿದೆ. ಉಳಿದ ಪರೀಕ್ಷೆಗಳನ್ನು ಈ ತಿಂಗಳ ಅಂತ್ಯದ ವೇಳೆಗೆ ಅಥವಾ ಮಾರ್ಚ್ ಮೊದಲ ವಾರದಲ್ಲಿ ಮಾಡಲಾಗುತ್ತದೆ. ಅವರು ಇದೇ ತಿಂಗಳ 24ರಿಂದ ಆರಂಭವಾಗಲಿರುವ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದಿದೆ.
ಪವನ್ ಕಲ್ಯಾಣ್ ಅವರು ಇತ್ತೀಚೆಗಷ್ಟೇ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಭೇಟಿ ನೀಡಿ ಪವಿತ್ರ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದರು. ಜೊತೆಗೆ ಉತ್ತರ ಪ್ರದೇಶದ ಹಲವು ಸ್ಥಳಗಳಿಗೆ ಭೇಟಿ ನೀಡಿ ಬಂದಿದ್ದರು.
ಎಐನಿಂದ ಐಟಿ ಉದ್ಯೋಗಿಗಳ ವೇತನ ಹೆಚ್ಚಳಕ್ಕೂ ಕುತ್ತು?
ನವದೆಹಲಿ: ಆರ್ಥಿಕತೆ ಅನಿಶ್ಚಿತತೆ, ಕೌಶಲ್ಯಗಳ ಬೇಡಿಕೆ ಮತ್ತು ಎಐ ತಂತ್ರಜ್ಞಾನಗಳ ಬಳಕೆ ಐಟಿ ಉದ್ಯೋಗಿಗಳ ಮೇಲೆ ಪರಿಣಾಮ ಬೀರಿದ್ದು, 2025ರ ಆರ್ಥಿಕ ವರ್ಷದಲ್ಲಿ ಉದ್ಯೋಗಿಗಳ ವೇತನ ಹೆಚ್ಚಳ ನಿರೀಕ್ಷಿತ ಮಟ್ಟದಲ್ಲಿ ಆಗದಿರಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.2025ರ ಆರ್ಥಿಕ ವರ್ಷದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗಿಗಳ ವೇತನ ಹೆಚ್ಚಳದ ಬಗ್ಗೆ ತಜ್ಞರು ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ಹಿಂದಿನ ವರ್ಷಕ್ಕಿಂತ ಗಮನಾರ್ಹ ಇಳಿಕೆಯಾಗಬಹುದು ಎಂದಿದ್ದಾರೆ. ಈ ಹಿಂದೆ ಸಂಬಳವು ಎರಡಂಕಿಯ ಹೆಚ್ಚಳವನ್ನು ಕಾಣುತ್ತಿತ್ತು. ಆದರೆ ಈ ವರ್ಷ ಕೇವಲ ಶೇ.4ರಿಂದ 8.5ರಷ್ಟು ಮಾತ್ರವೇ ಉದ್ಯೋಗಿಗಳ ವೇತನ ಹೆಚ್ಚಳ ನಿರೀಕ್ಷಿಸಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಜಾಗತಿಕ ಆರ್ಥಿಕ ಸವಾಲುಗಳು, ಬದಲಾಗುತ್ತಿರುವ ವ್ಯವಹಾರದ ಆದ್ಯತೆ, ಎಐ ಅಳವಡಿಕೆ ಈ ಬದಲಾವಣೆಗೆ ಕಾರಣ ಎನ್ನಲಾಗಿದೆ.
ಪೋಪ್ ಕೊಂಚ ಚೇತರಿಕೆ, ಆಕ್ಸಿಜನ್ ಸಹಾಯದಿಂದ ಉಸಿರಾಟ
ರೋಮ್: ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರ ಸ್ಥಿತಿ ಕೊಂಚ ಉತ್ತಮಗೊಂಡಿದ್ದು, ಬಾಹ್ಯ ಆಮ್ಲಜನಕದ ಸಹಾಯದಿಂದ ಎಚ್ಚರವಾಗಿದ್ದಾರೆ ಎಂದು ವ್ಯಾಟಿಕನ್ ತಿಳಿಸಿದೆ. ಪೋಪ್ ಆರೋಗ್ಯದ ಕುರಿತು ಭಾನುವಾರ ಹೇಳಿಕೆ ಬಿಡುಗಡೆ ಮಾಡಿದ ವ್ಯಾಟಿಕನ್, ‘ಶನಿವಾರ ರಾತ್ರಿ ಪೋಪ್ ಅವರು ಯಾವುದೇ ತೊಂದರೆಯಿಲ್ಲದೇ ವಿಶ್ರಾಂತಿ ತೆಗೆದುಕೊಂಡರು. ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡುಬಂದರೂ, ಉಸಿರಾಟಕ್ಕೆ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿತ್ತು. ಎಂದಿನಂತೆ ಪರೀಕ್ಷೆಗಳಲ್ಲಿ ಪೋಪ್ ತೊಡಗಿಕೊಂಡರು’ ಎಂದು ಹೇಳಿದೆ.
ಪೋಪ್ ಅವರು ಕೆಲ ದಿನಗಳಿಂದ ಉಸಿರಾಟದ ತೊಂದರೆ, ರಕ್ತಹೀನತೆ ಮತ್ತು ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಗುಣಮುಖರಾಗಲಿದೆ ಎಂದು ವ್ಯಾಟಿಕನ್ ಸಿಟಿಯಲ್ಲಿ ಭಕ್ತರು ಪ್ರಾರ್ಥನೆಯಲ್ಲಿ ತೊಡಗಿದ್ದಾರೆ.
ತ.ನಾಡಲ್ಲಿ ಹಿಂದಿ ವಿರೋಧಿ ಸಮರ ತೀವ್ರ: ರೈಲ್ವೆ ಸ್ಟೇಷನ್ ಬೋರ್ಡ್‌ನ ಹಿಂದಿಗೆ ಮಸಿ
ಪೊಲ್ಲಾಚಿ (ತ.ನಾಡು): ನೆರೆಯ ತಮಿಳುನಾಡಿನಲ್ಲಿ ಆಡಳಿತ ಡಿಎಂಕೆ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವಿನ ಹಿಂದಿ ಹೇರಿಕೆ ಸಮರ ಜೋರಾಗಿದ್ದು, ಪೊಲ್ಲಾಚಿ ರೈಲು ನಿಲ್ದಾಣದಲ್ಲಿ ತಮಿಳು ಪರ ಕಾರ್ಯಕರ್ತರು ರೈಲು ನಿಲ್ದಾಣದ ಬೋರ್ಡ್‌ನಲ್ಲಿನ ಹಿಂದಿ ಬರಹಕ್ಕೆ ಮಸಿ ಬಳಿದಿದ್ದಾರೆ.ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ 2020 ಹಿಂದಿ ಹೇರಿಕೆ ಮಾಡುತ್ತದೆ ಎಂದು ಡಿಎಂಕೆ ಸರ್ಕಾರ ಆರೋಪಿಸುತ್ತಿದ್ದು, ಇದು ರಾಜ್ಯಾದ್ಯಂತ ಹಿಂದಿ ವಿರುದ್ಧ ಪ್ರತಿಭಟನೆಗೆ ಕಾರಣವಾಗಿದೆ.
9 ದಿನದಲ್ಲಿ 400 ಕೋಟಿ ರು. ಗಳಿಸಿದ ‘ಛಾವಾ’ ಸಿನಿಮಾ
ಮುಂಬೈ: ಸಂಭಾಜಿ ಮಹಾರಾಜರ ಕಥಾವಸ್ತು ಹೊಂದಿರುವ ಹಾಗೂ ನಟ ವಿಕ್ಕಿ ಕೌಶಲ್-ರಶ್ಮಿಕಾ ಮಂದಣ್ಣ ಅಭಿನಯದ ಐತಿಹಾಸಿಕ ಚಿತ್ರ ‘ಛಾವಾ’ 2ನೇ ವಾರದ ಅಂತ್ಯಕ್ಕೆ ಉತ್ತಮ ಗಳಿಕೆ ಮಾಡಿದ್ದು, ರಿಲೀಸ್ ಆದ 9ನೇ ದಿನಕ್ಕೆ ವಿಶ್ವಾದ್ಯಂತ 400 ಕೋಟಿ ರು. ಗಳಿಸಿ ಭರ್ಜರಿ ಪ್ರದರ್ಶನ ನೀಡುತ್ತಿದೆ.
ಶುಕ್ರವಾರ ಮತ್ತು ಶನಿವಾರ ಛಾವಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡಿದ್ದು, ಶುಕ್ರವಾರ 23.5 ಕೋಟಿ ರು., ಶನಿವಾರ 44 ಕೋಟಿ ರು. ಗಳಿಸಿದೆ. ಈ ಮೂಲಕ ದೇಶಿಯ ಮತ್ತು ವಿದೇಶಿ ಮಾರುಕಟ್ಟೆಯಲ್ಲಿ ಒಟ್ಟಾರೆ 400 ಕೋಟಿ ರು. ಗಳಿಸಿದೆ. ಛಾವಾ ಸಿನಿಮಾ, ಕಲೆಕ್ಷನ್ ವಿಚಾರದಲ್ಲಿ ವಿಕ್ಕಿ ಕೌಶಲ್ ಅಭಿನಯದ ಸಿಂಗಮ್ ಅಗೇನ್ ಮತ್ತು ತಾನಾಜಿ ಸಿನಿಮಾಗಳನ್ನು ಕೂಡ ಹಿಂದಿಕ್ಕಿದೆ.