ರಸ್ತೆ ಅಪಘಾತಗಳಲ್ಲಿ ಶೇ.66ರಷ್ಟು ಸಾವು ದ್ವಿಚಕ್ರ ವಾಹನ ಸವಾರರದ್ದೇ : ಡಬ್ಲ್ಯುಎಚ್‌ಒ ವರದಿ

| Published : Sep 03 2024, 01:30 AM IST / Updated: Sep 03 2024, 04:44 AM IST

ಸಾರಾಂಶ

ಆಗ್ನೇಯ ಏಷ್ಯಾ ದೇಶಗಳಲ್ಲಿ ರಸ್ತೆ ಅಪಘಾತಗಳಿಂದ ಸಂಭವಿಸುವ ಸಾವಿನಲ್ಲಿ ಶೇ. 66ರಷ್ಟು ಪಾಲು ಪಾದಚಾರಿಗಳು, ದ್ವಿಚಕ್ರ, ಸೈಕಲ್ ಸವಾರರು ಎಂದು ಡಬ್ಲ್ಯುಎಚ್‌ಒ ವರದಿ ಹೇಳಿದೆ. ಜಾಗತಿಕವಾಗಿ ಶೇ.30ರಷ್ಟು ಅಪಘಾತಗಳು ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಂದಲೇ ಸಂಭವಿಸುತ್ತದೆ.

ನವದೆಹಲಿ: ಭಾರತ ಸೇರಿದಂತೆ ಆಗ್ನೇಯ ಏಷ್ಯಾ ದೇಶಗಳಲ್ಲಿ ರಸ್ತೆ ಅಪಘಾತಗಳಿಂದ ಸಂಭವಿಸುವ ಸಾವಿನಲ್ಲಿ ಶೇ. 66ರಷ್ಟು ಪಾಲು ಪಾದಚಾರಿಗಳು, ದ್ವಿಚಕ್ರ, ಸೈಕಲ್ ಸವಾರರು. ಇನ್ನು ಭಾರತದಲ್ಲಿ ದ್ವಿಚಕ್ರ, ತ್ರಿಚಕ್ರ ವಾಹನಗಳಿಂದ ಹೆಚ್ಚು ಅಪಘಾತ ಸಂಭವಿಸುತ್ತದೆ ಎಂದು ಡಬ್ಲ್ಯುಎಚ್‌ಒ ವರದಿ ಹೇಳಿದೆ.

ವರದಿ ಅನ್ವಯ, ಜಾಗತಿಕವಾಗಿ ಶೇ.30ರಷ್ಟು ಅಪಘಾತಗಳು ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಂದಲೇ ಸಂಭವಿಸುತ್ತದೆ. ಆಗ್ನೇಯ ಏಷ್ಯಾದಲ್ಲಿ ಸಂಭವಿಸುವ ರಸ್ತೆ ಅಪಘಾತದ ಸಾವುಗಳಲ್ಲಿ ಶೇ.66ರಷ್ಟು, ಪಾದಚಾರಿಗಳು, ಸೈಕಲ್ ಸವಾರರು, ದ್ವಿಚಕ್ರ, ತ್ರಿಚಕ್ರ ವಾಹನ ಸವಾರರಾಗಿದ್ದಾರೆ. 

ಈ ಪೈಕಿ ಶೇ.46ರಷ್ಟು ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ಸವಾರರು, ಶೇ. 12ರಷ್ಟು ಅಪಘಾತಗಳು ನಾಲ್ಕು ಚಕ್ರದ ವಾಹನಗಳು, ಶೇ.17ರಷ್ಟು ಪಾದಚಾರಿಗಳು, ಶೇ.3 ರಷ್ಟು ಸೈಕಲ್ ಸವಾರರು, ಶೇ.22ರಷ್ಟು ಇತರ ಕಾರಣಗಳಿಂದ ಸಾವಾಗಿದೆ ಎಂದು ಹೇಳಿದೆ.

ಜಾತಿ ಗಣತಿ ಸರ್ಕಾರದ ವಿಷಯ, ನಾವು ಆದೇಶ ಮಾಡಲಾಗದು: ಸುಪ್ರೀಂ

ನವದೆಹಲಿ: ಹಿಂದುಳಿದ ಮತ್ತು ಇತರ ಸಮುದಾಯಗಳ ಅಭಿವೃದ್ಧಿಗಾಗಿ ಸಾಮಾಜಿಕ , ಆರ್ಥಿಕ ಜಾತಿ ಗಣತಿ ನಡೆಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. 

ಜಾತಿ ಗಣತಿ ವಿಚಾರವು ಸರ್ಕಾರದ ಆಡಳಿತ ವ್ಯಾಪ್ತಿಗೆ ಬರುತ್ತದೆ ಎಂದು ಸುಪ್ರೀಂ ಅಭಿಪ್ರಾಯ ಪಟ್ಟಿದೆ. ಪಿ. ಪ್ರಸಾದ್‌ ನಾಯ್ಡು ಎನ್ನುವವರು ಸಲ್ಲಿಸಿದ್ದ ಪಿಐಎಲ್ ಅರ್ಜಿ ವಿಚಾರಣೆ ನಡೆಸದಿರಲು ನ್ಯಾ। ಹೃಷಿಕೇಶ್ ರಾಯ್‌ ಮತ್ತು ನ್ಯಾ। ಎಸ್‌ವಿಎನ್‌ ಭಟ್ಟಿ ಅವರಿದ್ದ ಪೀಠ ನಿರ್ಧರಿಸಿದ್ದು, ಅರ್ಜಿದಾರರಿಗೆ ಅರ್ಜಿ ಹಿಂಪಡೆಯಲು ಸೂಚಿಸಿದೆ. ‘ಇದರ ಬಗ್ಗೆ ಏನು ಮಾಡುವುದಕ್ಕೆ ಸಾಧ್ಯ? ನೀತಿಗೆ ಸಂಬಂಧಿಸಿದ ಈ ವಿಷಯ ಸರ್ಕಾರದ ವ್ಯಾಪ್ತಿಗೆ ಒಳ ಪಡುತ್ತದೆ’ ಎಂದಿದೆ.

==

ಮಸೀದಿಯೊಳಗೆ ನುಗ್ಗಿ ದಾಳಿ ಎಂದ ಬಿಜೆಪಿ ಶಾಸಕ: ಕೇಸು

ಮುಂಬೈ: ಮಹಂತ್‌ ರಾಮಗಿರಿ ಮಹಾರಾಜ್ ವಿರುದ್ಧ ಯಾರಾದರೂ ಹೇಳಿಕೆ ನೀಡಿದರೆ ಮಸೀದಿಯೊಳಗೆ ಹೊಕ್ಕು ನಿಮ್ಮ ಮೇಲೆ ದಾಳಿ ಮಾಡುತ್ತೇವೆ ಎಂದು ಮಹಾರಾಷ್ಟ್ರದ ಬಿಜೆಪಿ ಶಾಸಕ ನಿತೇಶ್‌ ರಾಣೆ ಎಚ್ಚರಿಸಿದ್ದಾರೆ. 

ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು ರಾಣೆ ವಿರುದ್ಧ ಅಹ್ಮದ್‌ನಗರ ಜಿಲ್ಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಹಾರಾಷ್ಟ್ರದ ಶ್ರೀರಾಂಪುರ ಮತ್ತು ಟೋಪಖಾನದಲ್ಲಿ ಸಾರ್ವಜನಿಕ ಸಭೆಯಲ್ಲಿ ಕಳೆದ ತಿಂಗಳು ಇಸ್ಲಾಂ ಧರ್ಮದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿ ಮಹಂತ್‌ ರಾಮಗಿರಿ ಮಹಾರಾಜ್ ಸುದ್ದಿಯಾಗಿದ್ದರು. ಅವರ ವಿರುದ್ಧ ವಿವಿಧ ಮುಸ್ಲಿಂ ಸಂಘಟನೆಗಳು ಎಚ್ಚರಿಕೆ ನೀಡಿದ್ದವು. ಅದರ ಬೆನ್ನಲ್ಲೇ ರಾಮಗಿರಿ ಅವರನ್ನು ಬೆಂಬಲಿಸಿ ನಿತೇಶ್‌ ವಿವಾದಿತ ಹೇಳಿಕೆ ನೀಡಿದ್ದಾರೆ.

==

ಈಗ ನನ್ನ ಚಿತ್ರದ ಮೇಲೂ ಎಮರ್ಜನ್ಸಿ ಹೇರಿದ್ದಾರೆ: ಕಂಗನಾ ರಾಣಾವತ್‌ ಕಿಡಿ

ನವದೆಹಲಿ: ಸೆ.6 ರಂದು ತೆರೆ ಕಾಣಬೇಕಿದ್ದ ಎಮರ್ಜನ್ಸಿ ಚಿತ್ರಕ್ಕೆ ಪ್ರಮಾಣಪತ್ರ ನೀಡಲು ಸೆನ್ಸಾರ್‌ ಮಂಡಳಿ ಮೀನಮೇಷ ಎಣಿಸುತ್ತಿದೆ. ಈ ಮೂಲಕ ನನ್ನ ಚಿತ್ರದ ಮೇಲೆ ಎಮರ್ಜೆನ್ಸಿ ಹೇರಲಾಗುತ್ತಿದೆ ಎಂದು ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಾಣಾವತ್‌ ಸೋಮವಾರ ಆರೋಪಿಸಿದ್ದಾರೆ. 

ನಾವು ಸ್ವಾಭಿಮಾನದಿಂದ ಚಿತ್ರವನ್ನು ನಿರ್ಮಿಸಿದ್ದೇವೆ. ಆದರೆ ಇದೀಗ ಮಂಡಳಿ ಅನೇಕ ಬದಲಾವಣೆಗೆ ಸೂಚಿಸಿದೆ. ನಾನು ಸೆನ್ಸಾರ್‌ ಕಟ್‌ ಇಲ್ಲದ ಚಿತ್ರ ಬಿಡುಗಡೆ ಮಾಡುತ್ತೇನೆ. ಅನಿವಾರ್ಯವಾದರೆ ಇದಕ್ಕಾಗಿ ನಾನು ಕೋರ್ಟಿಗೆ ಹೋಗುತ್ತೇನೆ ಎಂದು ಹೇಳಿದ್ದಾರೆ. ಚಿತ್ರದಲ್ಲಿನ ಕೆಲ ಅಂಶಗಳ ಕುರಿತು ತೀವ್ರ ವಿವಾದದ ಬೆನ್ನಲ್ಲೇ, ಚಿತ್ರಕ್ಕೆ ಮತ್ತಷ್ಟು ಕತ್ತರಿ ಹಾಕಲು ಸೆನ್ಸಾರ್ ಮಂಡಳಿ ನಿರ್ಧರಿಸಿತ್ತು.

==

ಸೆನ್ಸೆಕ್ಸ್‌ 194 ಅಂಕ ಏರಿ 82559ರಲ್ಲಿ ಮುಕ್ತಾಯ: ಸಾರ್ವಕಾಲಿಕ ಗರಿಷ್ಠ

ಮುಂಬೈ: ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್‌ ಸೋಮವಾರ 194 ಅಂಕಗಳ ಏರಿಕೆಯೊಂದಿಗೆ 82559 ಅಂಕಗಳಲ್ಲಿ ಮುಕ್ತಾಯವಾಗಿದೆ. ಇದು ಸೆನ್ಸೆಕ್ಸ್‌ನ ಸಾರ್ವಕಾಲಿಕ ಗರಿಷ್ಠ ಮುಕ್ತಾಯದ ಅಂಕವಾಗಿದೆ. ಮಧ್ಯಂತರ ಅವಧಿಯಲ್ಲಿ ಸೆನ್ಸೆಕ್ಸ್‌ 360 ಅಂಕಗಳ ಏರಿಕೆ ಕಂಡಿತ್ತಾದರೂ, ಕೊನೆಗೆ ಇಳಿಕೆ ಕಂಡಿತು. ಜೊತೆಗೆ ಸೋಮವಾರದ ಏರಿಕೆಯೂ ಸೇರಿದರೆ ಸೆನ್ಸೆಕ್ಸ್‌ ಸತತ 10 ದಿನಗಳ ಕಾಲ ಏರಿಕೆ ಕಂಡಂತೆ ಆಗಿದೆ. ಇದು 2023ರ ಸೆಪ್ಟೆಂಬರ್‌ ಬಳಿಕದ ಸುದೀರ್ಘ ಏರಿಕೆಯ ಗತಿಯಾಗಿದೆ. ಇದೇ ವೇಳೆ ನಿಫ್ಟಿ ಕೂಡಾ 42 ಅಂಕಗಳ ಏರಿಕೆಯೊಂದಿಗೆ 25278 ಅಂಕಗಳಲ್ಲಿ ಕೊನೆಗೊಂಡಿದೆ.