‘ಬಡ ಹಾಗೂ ಅಭಿವೃದ್ಧಿಶೀಲ ದೇಶಗಳ ಹಸಿವು ನೀಗಿಸಲು ಜಿ20 ದೇಶಗಳು ಶ್ರಮಿಸುವ ಅಗತ್ಯವಿದೆ. ಭಾರತ ಈ ನಿಟ್ಟಿನಲ್ಲಿ ಈಗಾಗಲೇ ಕೆಲಸ ಮಾಡುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ರಿಯೋ ಡಿ ಜನೈರೋ : ‘ಬಡ ಹಾಗೂ ಅಭಿವೃದ್ಧಿಶೀಲ ದೇಶಗಳ ಹಸಿವು ನೀಗಿಸಲು ಜಿ20 ದೇಶಗಳು ಶ್ರಮಿಸುವ ಅಗತ್ಯವಿದೆ. ಭಾರತ ಈ ನಿಟ್ಟಿನಲ್ಲಿ ಈಗಾಗಲೇ ಕೆಲಸ ಮಾಡುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸೋಮವಾರ ಬ್ರೆಜಿಲ್‌ನಲ್ಲಿ ಆರಂಭವಾದ ಜಿ20 ಶೃಂಗದಲ್ಲೊ ‘ಹಸಿವು, ಬಡತನದ ವಿರುದ್ಧ ಹೋರಾಟ’ ಸೆಷನ್‌ನಲ್ಲಿ ಮಾತನಾಡಿದ ಮೋದಿ, ‘ಇತ್ತೀಚೆಗೆ ಜಾಗತಿಕ ವಿಪ್ಲವಗಳು ಉಂಟಾಗುತ್ತಿವೆ ಹಾಗೂ ಹೊಸ ಹೊಸ ಸವಾಲುಗಳು ಎದುರಾಗುತ್ತಿವೆ. ಇಂಥ ಸಂದರ್ಭದಲ್ಲಿ ಬಡ ದೇಶಗಳು ಇಂದನ, ಆಹಾರ ಹಾಗೂ ರಸಗೊಬ್ಬರ ಸಮಸ್ಯೆಯನ್ನು ಎದುರಿಸುತ್ತಿವೆ. ಆದರೆ ಈ ಸವಾಲನ್ನು ಮೆಟ್ಟಿ ನಿಲ್ಲಲು ಜಿ20 ದೇಶಗಳ ನಡುವೆ ಸಮನ್ವಯ ಅಗತ್ಯವಿದೆ’ ಎಂದರು.

‘ಕಳೆದ ಸಲ ಆಫ್ರಿಕಾ ದೇಶಗಳಿಗೂ ಜಿ20 ಸದಸ್ಯತ್ವ ನೀಡಿದ್ದೆವು. ಈ ಸಲ ಕೂಡ ಇಂಥ ಸುಧಾರಣೆಗಳ ಅಗತ್ಯವಿದೆ. ‘ಒಂದು ಭೂಮಿ, ಒಂದು ಕುಟುಂಬ ಹಾಗೂ ಒಂದು ಭವಿಷ್ಯ’ ಎಂಬ ಮಂತ್ರವನ್ನು ಕಳೆದ ಸಲದಂತೆ ಮತ್ತೆ ಜಪಿಸೋಣ. ಈ ನಿಟ್ಟಿನಲ್ಲಿ ಬ್ರೆಜಿಲ್‌ ದೇಶ ಬಡತನ ಹಾಗೂ ಹಸಿವಿನ ವಿರುದ್ಧ ಕೈಗೊಂಡ ಕ್ರಮ ಶ್ಲಾಘನೀಯ’ ಎಂದರು.

ಇದೇ ವೇಳೆ, ‘ಮಹಿಳೆಯರು, ಯುವಕರ ಸಬಲೀಕರಣಕ್ಕೆ ಒತ್ತು ನೀಡಬೇಕು’ ಎಂದರು.

ಶೃಂಗದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಸೇರಿ ಅನೇಕರು ಪಾಲ್ಗೊಂಡಿದ್ದಾರೆ.

ಬೈಡೆನ್‌ ಭೇಟಿ ಸಂತೋಷ ತಂದಿದೆ: ಮೋದಿ

ರಿಯೋ ಡಿ ಜನೈರೋ: ಬ್ರೆಜಿಲ್‌ನಲ್ಲಿ ನಡೆಯುತ್ತಿರುವ ಜಿ 20 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಗಮಿತ ಯುಎಸ್ ಅಧ್ಯಕ್ಷ ಜೋ ಬಿಡೆನ್ ಅವರನ್ನು ಭೇಟಿಯಾದರು.ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ, ‘ಬೈಡೆನ್‌ ಅವರನ್ನು ಭೇಟಿಯಾಗಲು ಯಾವಾಗಲೂ ಸಂತೋಷವಾಗುತ್ತದೆ’ ಎಂದಿದ್ದಾರೆ. ಅಲ್ಲದೆ, ಬೈಡೆನ್‌ರ ಕೈ ಕೈಕುಲುಕುತ್ತಿರುವ ಫೋಟೋ ಶೇರ್ ಮಾಡಿದ್ದಾರೆ.