ಸಾರಾಂಶ
ನವದೆಹಲಿ: ಆಪರೇಷನ್ ಸಿಂದೂರ ಕಾರ್ಯಾಚರಣೆಯ ಹೊಸ ವಿಡಿಯೋವೊಂದನ್ನು ಭಾರತೀಯ ಸೇನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದು, ಪಹಲ್ಗಾಂ ದಾಳಿಯಲ್ಲಿ ಮೃತಪಟ್ಟವರಿಗೆ ನ್ಯಾಯ ಒದಗಿಸಲಾಗಿದೆ ಎಂಬ ಸಂದೇಶವನ್ನು ಈ ಮೂಲಕ ನೀಡಿದೆ.
ಗಡಿಯಲ್ಲಿರುವ ಪಾಕಿಸ್ತಾನದ ಔಟ್‌ಪೋಸ್ಟ್‌ಗಳನ್ನು ಶೆಲ್ ದಾಳಿ ಮೂಲಕ ನಾಶಮಾಡುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಭಾರತೀಯ ಸೇನೆಯ ಪಶ್ಚಿಮ ಕಮಾಂಡ್, ''''ಯೋಜನೆ ಹಾಕಿ, ತರಬೇತಿ ಪಡೆದು, ಕಾರ್ಯಗತಗೊಳಿಸಲಾಗಿದೆ, ನ್ಯಾಯ ಒದಗಿಸಲಾಗಿದೆ'''' ಎಂದು ವಿಡಿಯೋಗೆ ಟಿಪ್ಪಣಿ ಬರೆದುಕೊಂಡಿದೆ.
ಸೇನಾ ಸಿಬ್ಬಂದಿಯೊಬ್ಬರು ಮಾತನಾಡಿ, ಇದೆಲ್ಲ ಆರಂಭವಾಗಿದ್ದು ಪಹಲ್ಗಾಂ ಉಗ್ರ ದಾಳಿಯಿಂದ. ಈ ಬಗ್ಗೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಆಗ ಎಲ್ಲರ ಮನಸ್ಸಿನ ಭಾವನೆ ಒಂದೇ ಆಗಿತ್ತು. ಈ ಬಾರಿ ಪಾಕಿಸ್ತಾನವು ತಲೆಮಾರುವರೆಗೆ ನೆನಪಿಟ್ಟುಕೊಳ್ಳುವಂಥ ಪಾಠ ಕಲಿಸಬೇಕು. ಇದು ಪ್ರತೀಕಾರ ಅಲ್ಲ, ನ್ಯಾಯ. ಮೇ 9ರ ರಾತ್ರಿ ಸುಮಾರು 9 ಗಂಟೆ ಸುಮಾರಿಗೆ ಪಾಕಿಸ್ತಾನದ ಯಾವೆಲ್ಲ ಪೋಸ್ಟ್ ಕದನ ವಿರಾಮ ಉಲ್ಲಂಘಿಸಿತೋ ಅವನ್ನೆಲ್ಲ ಭಾರತೀಯ ಸೇನೆ ಸಂಪೂರ್ಣವಾಗಿ ನಾಶ ಮಾಡಿತು. ಆಪರೇಷನ್ ಸಿಂದೂರ ಕೇವಲ ಒಂದು ಕಾರ್ಯಾಚರಣೆ ಅಲ್ಲ, ದಶಕಗಳಾದರೂ ಬುದ್ಧಿಕಲಿಯದ ಪಾಕಿಸ್ತಾನಕ್ಕೆ ಕಲಿಸಿದ ಪಾಠ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.